ಗುರುವಾರ , ಜನವರಿ 21, 2021
26 °C
ಶವಕ್ಕೆ ಗೌರವಯುತ ಅಂತ್ಯಸಂಸ್ಕಾರ

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಮೊಗವೀರ ಯುವ ಸಂಘಟನೆಯ ಮಾನವೀಯ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಅಗತ್ಯವಾಗಿ ಬೇಕಿದ್ದ ವೆಂಟಿಲೇಟರ್‌
ಗಳ ಕೊರತೆ ಎದುರಾದಾಗ ಜಿಲ್ಲಾಡಳಿತದ ನೆರವಿಗೆ ಧಾವಿಸಿದ್ದು ಉದ್ಯಮಿ ಜಿ.ಶಂಕರ್‌. ವೆಂಟಿಲೇಟರ್, ಐಸಿಯು ಬೆಡ್‌, ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಆರೋಗ್ಯ ಇಲಾಖೆಗೆ ನೀಡಿದರು. ವೈದ್ಯಕೀಯ ನೆರವಿನ ಸಹಾಯಹಸ್ತದ ಜತೆಗೆ ಕೋವಿಡ್‌ನಿಂದ ಮೃತಪಟ್ಟವರ ಶವಸಂಸ್ಕಾರ ನಡೆಸಲು ಮೊಗವೀರ ಯುವ ಸಂಘಟನೆಯನ್ನು ಹುಟ್ಟುಹಾಕಿದರು.

ರಾಜ್ಯದ ಕೆಲವೆಡೆ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಅಮಾನವೀಯವಾಗಿ ನಡೆಸಿದ್ದನ್ನು ಕಂಡು ತೀವ್ರ ಮನನೊಂದ ಜಿ.ಶಂಕರ್ ಅವರು, ಗೌರವಯುತ ಶವಸಂಸ್ಕಾರ ನಡೆಯಬೇಕು ಎಂಬ ಉದ್ದೇಶದಿಂದ ಜಿಲ್ಲೆಯಾದ್ಯಂತ 100 ಯುವಕರನ್ನು ಒಟ್ಟುಗೂಡಿಸಿ ಮೊಗವೀರ ಯುವ ಸಂಘಟನೆ ಹುಟ್ಟುಹಾಕಿದರು. ಶವ ಸಂಸ್ಕಾರ ನಡೆಸಲು ಆರೋಗ್ಯಯುತ ಹಾಗೂ ಸದೃಢವಾಗಿದ್ದ 30 ಯುವಕರನ್ನು ಆಯ್ಕೆಮಾಡಿ, ಅವರಿಗೆ ಸರ್ಕಾರದ ಕೋವಿಡ್‌ ಮಾರ್ಗಸೂಚಿಯಂತೆ ಶವ ಸಂಸ್ಕಾರ ನಡೆಸುವುದು ಹೇಗೆ ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತರಬೇತಿ ಕೊಡಿಸಿದರು.

ಯುವಕರನ್ನು 2 ತಂಡಗಳನ್ನಾಗಿ ಮಾಡಿ ಕುಂದಾಪುರ ಹಾಗೂ ಉಡುಪಿಯಲ್ಲಿ ನಿಯೋಜಿಸಲಾಯಿತು. ಕುಂದಾಪುರದ ತಂಡವನ್ನು ಮೊಗವೀರ ಯುವ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವರಾಂ ವಹಿಸಿಕೊಂಡರೆ, ಉಡುಪಿ ತಂಡದ ಜವಾಬ್ದಾರಿಯನ್ನು ವ್ಯವಸ್ಥಾಪನ ಮಂಡಳಿತ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ವಹಿಸಿಕೊಂಡರು. ಎರಡೂ ತಂಡಗಳು ಲಾಕ್‌ಡೌನ್ ಅವಧಿಯಲ್ಲಿ 150ಕ್ಕೂ ಹೆಚ್ಚು ಶವಗಳ ಅಂತ್ಯಕ್ರಿಯೆಯನ್ನು ಉಚಿತವಾಗಿ ನೆರವೇರಿಸಿವೆ.

ಜಾತಿ, ಧರ್ಮಗಳಿಗೆ ಅನುಸಾರವಾಗಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಜತೆಗೆ, ಕೋವಿಡ್‌ನಿಂದ ಸುರಕ್ಷಿತವಾಗಿರುವುದು ಹೇಗೆ, ಕೋವಿಡ್‌ ಜತೆಗೆ ಬದುಕುವುದು ಹೇಗೆ ಎಂಬ ಕುರಿತು ಜನ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯಲ್ಲಿ ರಕ್ತದ ಕೊರತೆ ಎದುರಾದಾಗ ತಂಡದ ಸದಸ್ಯರು ನಿಯಮಿತವಾಗಿ ವಾರಕ್ಕೊಮ್ಮೆ ರಕ್ತದಾನ ಮಾಡಿದ್ದಾರೆ ಎಂದರು ಮೊಗವೀರ ಯುವ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವರಾಂ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು