ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಕೋವಿಡ್ ಕರ್ತವ್ಯ ನಿರ್ವಹಿಸಿದ ಅರುಣ್

ಮಾರ್ಚ್ ತಿಂಗಳ ಅಂತ್ಯಕ್ಕೆ ಜಿಲ್ಲೆಗೆ ಕೊರೊನಾ ಕಾಲಿಟ್ಟಾಗ ಸಾರ್ವಜನಿಕರಲ್ಲಿ ಮಾತ್ರವಲ್ಲ; ಆರೋಗ್ಯ ಸಿಬ್ಬಂದಿಗೂ ಪ್ರಾಣಭಯ ಕಾಡುತ್ತಿತ್ತು. ಹಿಂದೆಂದೂ ಕಾಣಿಸಿಕೊಳ್ಳದ ಮಾರಕ ಸೋಂಕಿಗೆ ಚಿಕಿತ್ಸೆ ನೀಡುವುದು ಹೇಗೆ, ಸೋಂಕಿನಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಆತಂಕ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕಾಡುತ್ತಿತ್ತು. ಅದರಲ್ಲೂ ಸೋಂಕಿತರೊಂದಿಗೆ ನೇರ ಸಂಪರ್ಕಕ್ಕೆ ಬರುವ, ಸೋಂಕಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿದ್ದ ವೈದ್ಯರು ಹಾಗೂ ಶುಶ್ರೂಷಕರಲ್ಲಿ ಆತಂಕ ಬಹಳ ಹೆಚ್ಚಿತ್ತು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೈಯಕ್ತಿಕ ಬದುಕನ್ನು ಬದಿಗಿಟ್ಟು ಸೋಂಕಿತರ ಪ್ರಾಣ ಉಳಿಸಲು ಮುಂದಾಗಿದ್ದು, ಫ್ರಂಟ್ಲೈನ್ ಕೋವಿಡ್ ವಾರಿಯರ್ಸ್ ಶುಶ್ರೂಷಕರು. ಉಸಿರುಗಟ್ಟಿಸುವ, ನಿತ್ರಾಣಗೊಳಿಸುವ ಪಿಪಿಇ ಕಿಟ್ಗಳನ್ನು ಗಂಟೆಗಟ್ಟೆಲೆ ಧರಿಸಿ ಸೋಂಕಿತರಿಗೆ ಚಿಕಿತ್ಸೆ ನೀಡಿದರು. ಒಂದು ದಿನವೂ ರಜೆ ತೆಗೆದುಕೊಳ್ಳದೆ ಕರ್ತವ್ಯ ನಿರ್ವಹಿಸಿದರು. ಅಂತಹವರಲ್ಲಿ ಕುಂದಾಪುರ ತಾಲ್ಲೂಕು ಆಸ್ಪತ್ರೆಯ ಶುಶ್ರೂಷಕ ಅರುಣ್ ನಾಯ್ಕ್ ಕೂಡ ಒಬ್ಬರು.
ಜಿಲ್ಲೆಗೆ ಕೋವಿಡ್ ಬಂದಾಗ ವಿದೇಶಗಳಿಂದ ಬಂದು ಕ್ವಾರಂಟೈನ್ ಆಗುತ್ತಿದ್ದವರಿಗೆ ಕಫದ ಮಾದರಿ ಸಂಗ್ರಹಿಸುವ ಜವಾಬ್ದಾರಿ ಅರುಣ್ ಮೇಲಿತ್ತು. ಆರಂಭದಲ್ಲಿ ಆತಂಕ ಹಾಗೂ ಒತ್ತಡಕ್ಕೆ ಸಿಲುಕಿದ್ದ ಅರುಣ್ ಆರೋಗ್ಯ ಇಲಾಖೆಯ ಚಿಕಿತ್ಸಾ ತರಬೇತಿಯ ಬಳಿಕ ಪೂರ್ಣ ಪ್ರಮಾಣದಲ್ಲಿ ಕೋವಿಡ್ ಕರ್ತವ್ಯದಲ್ಲಿ ತೊಡಗಿಸಿಕೊಂಡರು.
ಕೋವಿಡ್ ಭಯಬಿಟ್ಟು ಸೋಂಕಿತರ ಆರೈಕೆ ಮಾಡುವುದು, ಶಂಕಿತರ ಕಫದ ಮಾದರಿ ಪರೀಕ್ಷಿಸುವುದು, ಸೋಂಕಿತರಿಗೆ ಆತ್ಮವಿಶ್ವಾಸ ತುಂಬುವುದು, ಹೀಗೆ ಮಾದರಿ ಶುಶ್ರೂಷಕನೊಬ್ಬ ಮಾಡಬೇಕಾದ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದರು ಎನ್ನುತ್ತಾರೆ ಕುಂದಾಪುರ ತಾಲ್ಲೂಕು ಆಸ್ಪತ್ರೆಯ ಮುಖ್ಯಸ್ಥರಾದ ರಾಬರ್ಟ್ ರೊಬೆಲ್ಲೊ.
ಕುಂದಾಪುರ ಆಸ್ಪತ್ರೆ ಡಿಸಿಎಚ್ (ಕೋವಿಡ್ ಆಸ್ಪತ್ರೆ) ಆಸ್ಪತ್ರೆಯಾಗಿ ಬದಲಾದ ಬಳಿಕವೂ ಅರುಣ್ ನಾಯ್ಕ್ ವಾರ್ಡ್, ಐಸಿಯು, ಕೌಂಟರ್ ಹೀಗೆ ಎಲ್ಲ ವಿಭಾಗಗಳಲ್ಲಿ ಕರ್ತವ್ಯ ನಿಭಾಯಿಸಿದ್ದಾರೆ. ಕೋವಿಡ್ ಕರ್ತವ್ಯ ಮಾಡಿದ್ದು ನನ್ನ ಪಾಲಿಗೆ ಸಿಕ್ಕ ಬಹುದೊಡ್ಡ ಅವಾರ್ಡ್. ಸಾರ್ವಜನಿಕನಾಗಿ ಹಾಗೂ ಶುಶ್ರೂಷಕನಾಗಿ ನನ್ನ ಕೆಲಸದ ಬಗ್ಗೆ ಗೌರವ, ತೃಪ್ತಿ ಹಾಗೂ ಹೆಮ್ಮೆ ಇದೆ ಎನ್ನುತ್ತಾರೆ ಅರುಣ್.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.