ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಡೆಬಿಡದೆ ಸುರಿದ ಮಳೆ: ಜನ ತತ್ತರ

ಉಡುಪಿ ನಗರದ ವಿವಿಧೆಡೆ ಮನೆ, ಅಂಗಡಿಗಳಿಗೆ ನುಗ್ಗಿದ ನೀರು: ವಾಹನ ಸಂಚಾರಕ್ಕೂ ತೊಡಕು
Published 9 ಜುಲೈ 2024, 5:55 IST
Last Updated 9 ಜುಲೈ 2024, 5:55 IST
ಅಕ್ಷರ ಗಾತ್ರ

ಉಡುಪಿ: ನಗರ ಹಾಗೂ ಸಮೀಪ ಪ್ರದೇಶಗಳಲ್ಲಿ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಬಿರುಸಿನ ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತವಾಗಿ ವಾಹನಗಳ ಸಂಚಾರಕ್ಕೂ ತೊಡಕುಂಟಾಯಿತು.

ಸೋಮವಾರ ಬೆಳಿಗ್ಗೆ ಸುರಿದ ಭಾರಿ ಮಳೆಯಿಂದಾಗಿ ಕೆಲಸಕ್ಕೆ ತೆರಳುವವರು, ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು.

ಬನ್ನಂಜೆ, ಬೈಲಕೆರೆ, ಗುಂಡಿಬೈಲು, ಬಡಗುಪೇಟೆಗಳಲ್ಲಿ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹಗೊಂಡು, ವಾಹನ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟಕ್ಕೊಳಗಾದರು. ಶ್ರೀಕೃಷ್ಣ ಮಠದ ವಾಹನ ಪಾರ್ಕಿಂಗ್ ಪರಿಸರದಲ್ಲಿ ನೆರೆ ನೀರು ನಿಂತಿದ್ದ ಕಾರಣ ದೇವಸ್ಥಾನಕ್ಕೆ ಬಂದ ಯಾತ್ರಿಕರಿಗೂ ಸಮಸ್ಯೆಯಾಯಿತು.

ಬಡಗುಪೇಟೆಯಲ್ಲಿ ಮಳೆ ನೀರು ಹಲವು ಅಂಗಡಿಗಳಿಗೆ ನುಗ್ಗಿದ ಪರಿಣಾಮ ವ್ಯಾಪಾರಿಗಳಿಗೆ ತೊಂದರೆಯಾಯಿತು.

‘ಪ್ರತಿ ವರ್ಷವೂ ಮಳೆ ಅಬ್ಬರಿಸಿದಾಗ ನೆರೆ ನೀರು ಅಂಗಡಿಯೊಳಗೆ ಬಂದು ಸಮಸ್ಯೆಯಾಗುತ್ತಿದೆ. ಇದಕ್ಕೆ ಇದುವರೆಗೂ ಯಾವುದೇ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಸಂಬಂಧಪಟ್ಟವರು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು’ ಎಂದು ವ್ಯಾಪಾರಿ ತಾರೇಶ್‌ ಆಗ್ರಹಿಸಿದರು.

‌‌‘ಅಂಗಡಿ ಮುಂದಿನ ರಸ್ತೆಯಲ್ಲಿ ನೆೆರೆ ನೀರು ನಿಂತಿರುವುದರಿಂದ ಗ್ರಾಹಕರು ಇತ್ತ ಸುಳಿದಿಲ್ಲ’ ಎಂದೂ ಅವರು ಹೇಳಿದರು.

ನಗರ ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿದೆ. ಈ ಪ್ರದೇಶಗಳಿಗೆ ನಗರ ಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮನೆಗಳಿಗೆ ಭಾಗಶಃ ಹಾನಿ: ಪೆರ್ಡೂರಿನ ತನಿಯ ಕುಲಾಲ, ಆತ್ರಾಡಿಯ ಮೇಘ, 80 ಬಡಗಬೆಟ್ಟುವಿನ ಶಕುಂತಲ ನಾಯ್ಕ್ ಅವರ ಮನೆಗಳಿಗೆ ಭಾಗಶಃ ಹಾನಿಯುಂಟಾಗಿದೆ.

(ಬೈಂದೂರು ವರದಿ): ಬೈಂದೂರು ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತವಾಗುತ್ತಿರುವುದನ್ನು ಕಂಡು ಕೃಷಿಕರು ಕಂಗಾಲಾಗಿದ್ದಾರೆ.

ಹಲವು ಮನೆಗಳಿಗೆ ನೀರು ನುಗ್ಗಿದೆ. ತೋಟಗಳಿಗೆ ಹಾನಿಯಾಗಿದೆ. ರಸ್ತೆ ಕುಸಿದಿದೆ. ಶಿರೂರಿನ ಕರಾವಳಿ, ದೊಂಬೆ, ಹೊಸೂರು, ತೂದಳ್ಳಿ, ಆಲಂದೂರು, ಕಡ್ಕೆ, ತಗ್ಗರ್ಸೆ ಗ್ರಾಮದ ಉದ್ದಾಬೆಟ್ಟು, ಮಕ್ಕಿಗದ್ದೆ, ಉಪ್ಪುಂದ, ನಾವುಂದ, ಅರೆಹೊಳೆ, ಸಾಲ್ಬುಡ, ಬಡಾಕೆರೆ ಮುಂತಾದೆಡೆ ನೂರಾರು ಎಕರೆ ಕೃಷಿ ಭೂಮಿಗಳು ಜಲಾವೃತಗೊಂಡಿದ್ದು ದ್ವೀಪದಂತೆ ಗೋಚರವಾಗುತ್ತಿದೆ.

ಶಾಸಕ ಗುರುರಾಜ್ ಗಂಟಿಹೊಳೆ ಅವರು ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಡುಪಿಯ ಕಲ್ಸಂಕ ಬಳಿಯ ಬೈಲಕೆರೆಯಲ್ಲಿ ತಗ್ಗು ಪ್ರದೇಶ ಜಲಾವೃತವಾಗಿರುವುದು
ಉಡುಪಿಯ ಕಲ್ಸಂಕ ಬಳಿಯ ಬೈಲಕೆರೆಯಲ್ಲಿ ತಗ್ಗು ಪ್ರದೇಶ ಜಲಾವೃತವಾಗಿರುವುದು
ಉಡುಪಿ ನಗರದ ಜಲಾವೃತ ರಸ್ತೆಯೊಂದರಲ್ಲಿ ಸಾಗಿದ ಬೈಕ್‌ ಸವಾರ
ಉಡುಪಿ ನಗರದ ಜಲಾವೃತ ರಸ್ತೆಯೊಂದರಲ್ಲಿ ಸಾಗಿದ ಬೈಕ್‌ ಸವಾರ
ಉಡುಪಿಯ ಗುಂಡಿಬೈಲು ಪ್ರದೇಶದಲ್ಲಿ ರಸ್ತೆಯೊಂದು ಜಲಾವೃತವಾಗಿರುವುದು
ಉಡುಪಿಯ ಗುಂಡಿಬೈಲು ಪ್ರದೇಶದಲ್ಲಿ ರಸ್ತೆಯೊಂದು ಜಲಾವೃತವಾಗಿರುವುದು
ಬೈಂದೂರು ತಾಲ್ಲೂಕಿನಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ನಾವುಂದ ಅರೆಹೊಳೆ ಮಹಾಲಿಂಗೇಶ್ವರ ಮಹಾಗಣಪತಿ ಪಾರ್ವತಿ ದೇವಸ್ಥಾನದ ಸುತ್ತಮುತ್ತಲಿನ ಪರಿಸರ ಜಲಾವೃತವಾಗಿತ್ತು
ಬೈಂದೂರು ತಾಲ್ಲೂಕಿನಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ನಾವುಂದ ಅರೆಹೊಳೆ ಮಹಾಲಿಂಗೇಶ್ವರ ಮಹಾಗಣಪತಿ ಪಾರ್ವತಿ ದೇವಸ್ಥಾನದ ಸುತ್ತಮುತ್ತಲಿನ ಪರಿಸರ ಜಲಾವೃತವಾಗಿತ್ತು
ಉಡುಪಿ ನಗರದ ಬಡಾವಣೆಯೊಂದರಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು
ಉಡುಪಿ ನಗರದ ಬಡಾವಣೆಯೊಂದರಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT