ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಹೆಬ್ರಿಯಲ್ಲಿ 17.5 ಸೆಂ.ಮೀ ಮಳೆ

ಜಿಲ್ಲೆಯಾದ್ಯಂತ ಗಾಳಿ ಮಳೆ ಅಬ್ಬರಕ್ಕೆ 18 ಮನೆ, ಕೊಟ್ಟಿಗೆಗಳಿಗೆ ಹಾನಿ, ಅಡಿಕೆ ತೋಟಗಳು ಜಲಾವೃತ
Last Updated 16 ಜುಲೈ 2021, 17:00 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಅವಾಂತರಗಳನ್ನು ಸೃಷ್ಟಿಸಿದೆ. ಜಿಲ್ಲೆಯಾದ್ಯಂತ ಹಲವು ಮನೆಗಳು ಕುಸಿದು ಬಿದ್ದಿವೆ. ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಶುಕ್ರವಾರವೂ ಜಿಲ್ಲೆಯಾದ್ಯಂತ ಬಿರುಸಿನ ಮಳೆ ಸುರಿದಿದ್ದು ಹೆಚ್ಚಿನ ಹಾನಿ ಸಂಭವಿಸಿದೆ.

ಕುಂದಾಪುರ ತಾಲ್ಲೂಕಿನ ಬಸ್ರೂರು ಗ್ರಾಮದ ಅಕ್ಕಯ್ಯ ಪೂಜಾರ್ತಿ ಮನೆ, ಅಂಪಾರು ಗ್ರಾಮದ ಬಾಡು ಮಡಿವಾಳ ಅವರ ನಿವಾಸ, ಕುಳಂಜೆ ಗ್ರಾಮದ ಶೇಖರ ಮೊಗವೀರ ಅವರ ಕೊಟ್ಟಿಗೆ, ತ್ರಾಸಿ ಗ್ರಾಮದ ರಿಚರ್ಡ್ ಅವರ ಕೊಟ್ಟಿಗೆ, ಬೆಳ್ಳಾಲ ಗ್ರಾಮದ ಗಿರಿಜ ಪೂಜಾರ್ತಿ ಅವರ ಕೊಟ್ಟಿಗೆಗೆ ಮಳೆಯಿಂದ ಹಾನಿಯಾಗಿದೆ.

ಬೈಂದೂರು ತಾಲ್ಲೂಕಿನ ಹೆರಂಜಾಲು ಗ್ರಾಮದ ಸವಿತಾರ ಕೊಟ್ಟಿಗೆ, ಉಪ್ಪುಂದ ಗ್ರಾಮದ ಗೋವಿಂದ ಖಾರ್ವಿ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಉಡುಪಿ ತಾಲ್ಲೂಕಿನ ಉದ್ಯಾವರ ಗ್ರಾಮದ ಸುಂದರಿ ಹಾಗೂ ಎಂ.ಕೆ ಶಾಂತರಾಜ್‌ ಕೋಟ್ಯಾನ್‌ರ ಮನೆಗಳ ಹೆಂಚುಗಳು ಗಾಳಿಗೆ ಹಾರಿಹೋಗಿವೆ.

ಬ್ರಹ್ಮಾವರ ತಾಲ್ಲೂಕಿನ ಶಿರಿಯಾರ ಗ್ರಾಮದ ಮುತ್ತು ಪೂಜಾರ್ತಿ ಮನೆ, ವಡ್ಡರ್ಸೆ ಗ್ರಾಮದ ಶಿವಕುಮಾರ ಮನೆಯ ಮೇಲೆ ಮರ ಬಿದ್ದಿದೆ. ಬೈಕಾಡಿ ಗ್ರಾಮದ ಅಮೃತ ಶೆಟ್ಟಿ ಮನೆಯ ತಗಡು ಶೀಟ್‌ಗಳು ಗಾಳಿಗೆ ಹಾರಿಹೋಗಿವೆ. ಚೇರ್ಕಾಡಿಯ ಲಚ್ಚು ಹಾಂಡ ಅವರ ಮನೆಗೆ ಭಾಗಶಃ ಹಾನಿಯಾಗಿದೆ.

ಕಾರ್ಕಳ ತಾಲ್ಲೂಕಿನ ಬೋಳದಲ್ಲಿ ಮೀನಾ ಪೂಜಾರ್ತಿಯವರ ಮನೆ ಮೇಲೆ ಮರ ಬಿದ್ದರೆ, ಮಾಳ ಗ್ರಾಮದ ಗೋವಿಂದ ಗೌಡರ ಮನೆಯ ಮೇಲ್ಛಾವಣಿ ಕುಸಿದಿದೆ. ಮರ್ಣೆ ಗ್ರಾಮದ ಶಿವರಾಮ ಅವರ ಮನೆಯ ಶೀಟುಗಳು ಹಾರಿಹೋಗಿವೆ. ಹೆಬ್ರಿ ತಾಲ್ಲೂಕಿನ ವರಂಗದಲ್ಲಿ ರತಿ ಶೆಟ್ಟಿ ಹಾಗೂ ಕಾಪು ತಾಲ್ಲೂಕಿನ ತೆಂಕದಲ್ಲಿ ಅಕ್ಕಣಿ ಅವರ ಮನೆಗಳು ಕುಸಿದಿವೆ.

ಕುಂದಾಪುರ ತಾಲ್ಲೂಕಿನ ಇಡೂರು ಗ್ರಾಮದ ಸುಲೋಚನಾ ಶೇಡ್ತಿ ಅವರ ಅಡಿಕೆ ತೋಟ ಹಾಗೂ ಅಂಪಾರು ಗ್ರಾಮದ ಗಿರಿಜಮ್ಮ ಶೇಡ್ತಿ ಅವರ ಅಡಿಕೆ ತೋಟಕ್ಕೆ ನೀರು ನುಗ್ಗಿ ಹಾನಿಯಾಗಿದೆ.

2 ದಿನ ರೆಡ್ ಅಲರ್ಟ್‌

ಕರಾವಳಿಯಲ್ಲಿ ಜುಲೈ 21ರವರೆಗೂ ಬಿರುಸಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜುಲೈ 17 ಹಾಗೂ 18 ರಂದು ರೆಡ್‌ ಅಲರ್ಟ್‌ ಎಚ್ಚರಿಕೆ ನೀಡಿದೆ. 19 ಹಾಗೂ 20ರಂದು ಆರೆಂಜ್ ಅಲರ್ಟ್‌, 21ರಂದು ಯಲ್ಲೊ ಅಲರ್ಟ್‌ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಹೆಬ್ರಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು 17.5 ಸೆಂ.ಮೀ ಮಳೆಯಾಗಿದೆ. ಕುಚ್ಚೂರಿನಲ್ಲಿ 17.5 ಸೆಂ.ಮೀ. ಮಂಚಿಯಲ್ಲಿ 15.8 ಸೆಂಮೀ ಮಳೆ ಬಿದ್ದಿದೆ. ಉಡುಪಿ ತಾಲ್ಲೂಕಿನಲ್ಲಿ ಉಡುಪಿ - 8.7, ಬ್ರಹ್ಮಾವರದಲ್ಲಿ 9.2, ಕಾಪುವಿನಲ್ಲಿ 9.6, ಕುಂದಾಪುರದಲ್ಲಿ 5.9, ಬೈಂದೂರಿನಲ್ಲಿ 7.8, ಕಾರ್ಕಳದಲ್ಲಿ 9.8, ಹೆಬ್ರಿಯಲ್ಲಿ 12.6 ಸೆಂ.ಮೀ ಮಳೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT