ಶುಕ್ರವಾರ, ಡಿಸೆಂಬರ್ 9, 2022
20 °C
ಆದಿ ಉಡುಪಿಯಲ್ಲಿ ನಿರ್ಮಾಣವಾಗಲಿದೆ ಸುಸಲ್ಜಿತ ಜಿಲ್ಲಾ ರಂಗಮಂದಿರ: ಇಂದು ಶಂಕುಸ್ಥಾಪನೆ

ಉಡುಪಿ: ರಂಗಕರ್ಮಿಗಳ ದಶಕಗಳ ಕನಸು ನನಸು

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಉಡುಪಿ ಜಿಲ್ಲೆಯಲ್ಲಿ ಕಲಾ ಪ್ರದರ್ಶನಕ್ಕೆ ಸರ್ಕಾರಿ ವೇದಿಕೆ ಇಲ್ಲ ಎಂಬ ದಶಕಗಳ ಕೊರಗು ನೀಗುತ್ತಿದೆ.

ಆದಿ ಉಡುಪಿಯಲ್ಲಿ 1 ಎಕರೆ 37 ಸೆಂಟ್ಸ್ ಜಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಜಿಲ್ಲಾ ರಂಗಮಂದಿರ ನಿರ್ಮಾಣವಾಗುತ್ತಿದ್ದು, ಗಾಂಧಿ ಜಯಂತಿಯ ದಿನವಾದ ಅ.2ರಂದು ಶಂಕುಸ್ಥಾಪನೆ ನೆರವೇರಲಿದೆ. ಬಳಿಕ ಕಾಮಗಾರಿ ಆರಂಭವಾಗಲಿದೆ.

ಹೇಗಿರಲಿದೆ ಜಿಲ್ಲಾ ರಂಗ ಮಂದಿರ:

₹ 5 ಕೋಟಿ ವೆಚ್ಚದಲ್ಲಿ 20,000 ಚದರಡಿ ವಿಸ್ತೀರ್ಣದಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣವಾಗಲಿದೆ. 400 ಮಂದಿ ಕುಳಿತು ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಕಲಾವಿದರು ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಅಭ್ಯಾಸ ನಡೆಸಲು 2 ಪೂರ್ವ ತಯಾರಿ ಕೊಠಡಿಗಳು ಹಾಗೂ 2 ಗ್ರೀನ್ ರೂಂಗಳು ಇರಲಿವೆ.

ಕಲಾ ಪ್ರದರ್ಶನದ ಜತೆಗೂ ಕಲೆ, ಕರಕುಶಲ ವಸ್ತುಗಳ ಪ್ರದರ್ಶನಕ್ಕೂ ಪ್ರತ್ಯೇಕ ಸಭಾಂಗಣ ನಿರ್ಮಿಸಲಾಗುತ್ತಿದೆ. ಇದಲ್ಲದೆ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಫಿಲ್ಮ್ ಪ್ರೊಜೆಕ್ಷನ್ ಕೊಠಡಿಯೂ ಇರಲಿದ್ದು, ಕರಾವಳಿ ಹಾಗೂ ನಾಡಿನ ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ವೇದಿಕೆಯಾಗಿ ಬಳಸಬಹುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯೂ ಇರಲಿದೆ. ಕಾರ್ಯಕ್ರಮ ವೀಕ್ಷಣೆಗೆ ಬರುವ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ.

ಜಿಲ್ಲಾ ರಂಗ ಮಂದಿರ ನಿರ್ಮಾಣಕ್ಕೆ ಸರ್ಕಾರ ₹ 5 ಕೋಟಿ ಅನುದಾನ ನಿಗದಿಪಡಿಸಲಾಗಿದ್ದು ಈಗಾಗಲೇ ₹ 2.5 ಕೋಟಿ ಬಿಡುಗಡೆ ಮಾಡಿದೆ. ನಿರ್ಮಿತಿ ಕೇಂದ್ರಕ್ಕೆ ರಂಗ ಮಂದಿರ ನಿರ್ಮಾಣದ ಹೊಣೆ ವಹಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ.

ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ:

ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳು ಕರಾವಳಿಯ ಮಣ್ಣಿನಲ್ಲಿ ಬೆರೆತುಹೋಗಿವೆ. ದೈವಾರಾಧನೆ, ಭೂತಕೋಲ, ನೇಮೋತ್ಸವದಂತಹ ಸಂಪ್ರಾಯಿಕ ಆಚರಣೆಗಳು ಈ ನೆಲದಲ್ಲಿ ಹಾಸುಹೊಕ್ಕಾಗಿವೆ. ಕಡಲತಡಿಯ ಭಾರ್ಗವ ಡಾ.ಶಿವರಾಮ ಕಾರಂತರು ಸೇರಿದಂತೆ ನಾಡಿನ ಪ್ರಸಿದ್ಧ ಸಾಹಿತಿಗಳು, ಯಕ್ಷಗಾನ ಕಲಾವಿದರ ತವರು ಉಡುಪಿ.

ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಉಡುಪಿಯಲ್ಲಿ ಜಿಲ್ಲಾ ರಂಗಮಂದಿರ ಇಲ್ಲದ ಪರಿಣಾಮ ಕಲಾ ಪ್ರದರ್ಶನಕ್ಕೆ ಖಾಸಗಿ ಸಭಾಂಗಣಗಳನ್ನು ಅವಲಂಬಿಸಬೇಕಿತ್ತು. ಖಾಸಗಿ ರಂಗ ಮಂದಿರಗಳ ಬಾಡಿಗೆ ಬಡ ಕಲಾವಿದರ ಕೈಗೆಟುಕದಷ್ಟು ಎತ್ತರದಲ್ಲಿತ್ತು. ಪರಿಣಾಮ ಪ್ರತಿಭೆ ಇದ್ದರೂ ಪ್ರದರ್ಶನಕ್ಕೆ ಸೂಕ್ತ ವೇದಿಕೆ ದೊರೆಯದೆ ಜಿಲ್ಲೆಯಲ್ಲಿ ಕಲಾವಿದರು ಹಾಗೂ ಕಲಾ ಸಂಸ್ಥೆಗಳು ಸೊರಗಿದ್ದವು. ಆರ್ಥಿಕವಾಗಿ ಸಬಲರಲ್ಲದ ಸಂಘಟನೆಗಳು ಆರ್ಥಿಕ ನೆರವು ಕೋರಿ ಕಲಾ ಪೋಷಕರ ಎದುರು ಬೆನ್ನು ಬಾಗಿಸಬೇಕಾದ ಪರಿಸ್ಥಿತಿ ಇತ್ತು.

ರಂಗ ಮಂದಿರದ ಪ್ರಯೋಜನ ಏನು:

ಜಿಲ್ಲಾ ರಂಗ ಮಂದಿರ ನಿರ್ಮಾಣವಾದರೆ ಕಲಾವಿದರಿಗೆ ಕೈಗೆಟುಕುವ ದರದಲ್ಲಿ ಸಭಾಂಗಣ ಬಾಡಿಗೆಗೆ ದೊರೆಯಲಿದೆ. ಖಾಸಗಿ ಸಂಸ್ಥೆಗಳಲ್ಲಿ ದೊರೆಯುವಂತಹ ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ ಕಡಿಮೆ ದರದಲ್ಲಿ ಲಭ್ಯವಾಗಲಿವೆ. ಸರ್ಕಾರದ ಒಡೆತನದಲ್ಲಿರುವ ಕಾರಣ ‘ಸಾರ್ವಜನಿಕರ’ ಆಸ್ತಿ ಎಂಬ ಭಾವ ಮೂಡುತ್ತದೆ.

ಜಿಲ್ಲಾ ರಂಗಮಂದಿರದಲ್ಲಿ ನಿರಂತರವಾಗಿ ರಂಗ ಚಟುವಟಿಕೆಗಳು ನಡೆಯುವುದರಿಂದ ರಂಗಾಸಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ. ರಂಗಭೂಮಿಯತ್ತ ಯುವ ಕಲಾವಿದರನ್ನು ಸೆಳೆಯಬಹುದು. ಸಾರ್ವಜನಿಕರು ವಾರಾಂತ್ಯದಲ್ಲಿ ಕುಟುಂಬದೊಟ್ಟಿಗೆ ಜಿಲ್ಲಾ ರಂಗಮಂದಿರಕ್ಕೆ ಬಂದು ಕಲೆಯನ್ನು ಆಸ್ವಾದಿಸುವ ಪರಿಪಾಠ ಹೆಚ್ಚಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ನವಚೈತನ್ಯ ದೊರೆಯಲಿದೆ.

‘ರಂಗ ಮಂದಿರದಲ್ಲಿ ಆಧುನಿಕ ಸೌಲಭ್ಯಗಳು’

  ಉಡುಪಿ ಜಿಲ್ಲೆಗೊಂದು ರಂಗ ಮಂದಿರ ನಿರ್ಮಾಣವಾಗಬೇಕು ಎಂಬುದು ದಶಕಗಳ ಬೇಡಿಕೆಯಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ.ಸುನಿಲ್ ಕುಮಾರ್ ಅವರ ಇಚ್ಛಾಶಕ್ತಿ ಹಾಗೂ ರಂಗ ಕಲಾವಿದರ, ಸಂಘಟನೆಗಳ ಪರಿಶ್ರಮದ ಪ್ರತಿಫಲವಾಗಿ ಜಿಲ್ಲಾರಂಗಮಂದಿರ ನಿರ್ಮಾಣವಾಗುವ ಕಾಲ ಸನ್ನಿಹಿತವಾಗಿದೆ. ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಆಧುನಿಕ ಸೌಲಭ್ಯಗಳನ್ನು ರಂಗ ಮಂದಿರ ಒಳಗೊಂಡಿರಲಿದೆ.

–ಪೂರ್ಣಿಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ

  ಉಡುಪಿಯಲ್ಲಿ ಜಿಲ್ಲಾ ರಂಗ ಮಂದಿರ ನಿರ್ಮಾಣವಾಗಬೇಕು ಎಂಬುದು ರಂಗಾಸಕ್ತರ ದಶಕಗಳ ಕನಸು. ಹಿಂದೆ ಡಾ.ವಿ.ಎಸ್‌.ಆಚಾರ್ಯ ಅವರು ಜಿಲ್ಲಾ ರಂಗ ಮಂದಿರ ನಿರ್ಮಾಣಕ್ಕೆ ₹ 50 ಲಕ್ಷ ಬಿಡುಗಡೆ ಮಾಡಿದ್ದರು. ಬಳಿಕ ರಾಜಕೀಯ ಸ್ಥಿತ್ಯಂತರಗಳ ಕಾರಣಗಳಿಂದ ರಂಗ ಮಂದಿರ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಹಲವು ವರ್ಷಗಳ ಹೋರಾಟಕ್ಕೆ ಈಗ ಫಲ ಸಿಗುತ್ತಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಇರುವ ಪ್ರಸಿದ್ಧ ರಂಗ ಮಂದಿರಗಳಿಗೆ ಭೇಟಿನೀಡಿ ಅಧ್ಯಯನ ಮಾಡಿ, ರಂಗಕರ್ಮಿಗಳ ಅಭಿಪ್ರಾಯ ಪಡದು ಆಕಾರ್ ಆರ್ಕಿಟೆಕ್ಟ್‌ ಸಂಸ್ಥೆ ಸುಂದರವಾಗ ಜಿಲ್ಲಾ ರಂಗ ಮಂದಿರ ವಿನ್ಯಾಸ ರಚಿಸಿ, ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ಅನುಷ್ಠಾನವಾಗುತ್ತಿದೆ. ಆದಷ್ಟು ಬೇಗ ಜಿಲ್ಲಾ ರಂಗಮಂದಿರ ಕಾಮಗಾರಿ ಮುಕ್ತಾಯವಾಗಲಿ, ಎಲ್ಲರ ಕೈಗೆ ಎಟುಕಲಿ.

–ಪ್ರದೀಪ್ ಚಂದ್ರ ಕುತ್ಪಾಡಿ, ರಂಗ ಕರ್ಮಿ, ನಟ

 ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ರಂಗ ಮಂದಿರ ನಿರ್ಮಾಣಕ್ಕೆ ಅನುದಾನ ನೀಡಲಾಗಿದ್ದು, ರಂಗ ಮಂದಿರ ನಿರ್ಮಾಣವಾದರೆ ಹೊಸ ಪೀಳಿಗೆಯ ಕಲಾವಿದರಿಗೆ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಸಿಗಲಿದೆ. ಹೊಸ ತಂತ್ರಜ್ಞಾನ ಅಳವಡಿಕೆಯೊಂದಿಗೆ ಸುಸಜ್ಜಿತವಾದ ರಂಗ ಮಂದಿರ ಶೀಘ್ರ ಉಭಯ ಜಿಲ್ಲೆಗಳಲ್ಲಿ ತಲೆ ಎತ್ತಲಿವೆ.

–ವಿ.ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು