ಫಾರ್ಮಾಲಿನ್‌ ಪತ್ತೆ ಪರೀಕ್ಷೆ ನಡೆಸಿ ವರದಿ ನೀಡಿ

7
ಕರಾವಳಿ ಮೀನು ಸುರಕ್ಷಿತ ಎಂಬ ವಿಚಾರ ಅಧಿಕೃತವಾಗಿ ಸಾಬೀತಾಗಬೇಕು: ಶಾಸಕ ರಘುಪತಿ ಭಟ್ ಸೂಚನೆ

ಫಾರ್ಮಾಲಿನ್‌ ಪತ್ತೆ ಪರೀಕ್ಷೆ ನಡೆಸಿ ವರದಿ ನೀಡಿ

Published:
Updated:
Deccan Herald

ಉಡುಪಿ: ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ರಫ್ತಾಗುವ ಮೀನನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಿ ವರದಿ ನೀಡಬೇಕು. ಮೀನಿನಲ್ಲಿ ಫಾರ್ಮಾಲಿನ್ ರಾಸಾಯನಿಕ ಬಳಕೆಯಾಗುತ್ತಿದೆಯೇ, ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸಿದರೆ, ಜನರಲ್ಲಿರುವ ಸಂಶಯ ನಿವಾರಣೆಯಾಗುತ್ತದೆ ಎಂದು ಶಾಸಕ ಕೆ.ರಘುಪತಿ ಭಟ್ ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ‘ಮೀನುಗಾರರ ಹಿತದೃಷ್ಟಿಯಿಂದ ಕಡ್ಡಾಯವಾಗಿ ತಪಾಸಣೆ ನಡೆಯಬೇಕು. ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ತಂಡ ನಿಯಮಿತವಾಗಿ ಬಂದರಿಗೆ ಭೇಟಿನೀಡಿ ಪರೀಕ್ಷೆ ನಡೆಸಿ, ವರದಿ ನೀಡಬೇಕು. ಇದರಿಂದ ಕರಾವಳಿಯ ಮೀನು ಸುರಕ್ಷಿತ ಎಂಬ ವಿಚಾರ ಅಧಿಕೃತವಾಗಿ ತಿಳಿಯುತ್ತದೆ’ ಎಂದು ಸಲಹೆ ನೀಡಿದರು.

‘ಫಾರ್ಮಾಲಿನ್‌’ ಬಳಕೆ ಸುದ್ದಿಯಿಂದಾಗಿ ಜಿಲ್ಲೆಯ ಮತ್ಸೋದ್ಯಮಕ್ಕೆ ಹೊಡೆತ ಬಿದ್ದಿದೆ. ದರ ಕುಸಿದು ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳೀಯರು ಮೀನಿನ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮೀನುಗಾರರ ನೆರವಿಗೆ ನಿಲ್ಲಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ದೊಡ್ಡಣಗುಡ್ಡೆ ತೋಟಗಾರಿಕಾ ಇಲಾಖೆ ಜಾಗದಲ್ಲಿ ಮತ್ತೆ ‘ಸಾವಯವ ಸಂತೆ’ ಪ್ರಾರಂಭಿಸಬೇಕು. ಸಾವಯವ ಕೃಷಿಗೆ ಪ್ರೋತ್ಸಾಹ ನೀಡಿದರೆ ಸಾಲದು; ರೈತರು ಬೆಳೆದ ಸಾವಯವ ಉತ್ಪನ್ನಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಆಗಮಾತ್ರ, ಸಾವಯವದತ್ತ ಒಲವು ತೋರಿಸುತ್ತಾರೆ. ಜತೆಗೆ ರೈತ ಸಂತೆಗಳು ಹೆಚ್ಚಾಗಿ ನಡೆಯಬೇಕು ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಕೃಷಿ ಇಲಾಖೆ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಯಾಂತ್ರೀಕೃತ ಬೇಸಾಯಕ್ಕೆ ಒತ್ತು ನೀಡಲಾಗಿದ್ದು, ಕೃಷಿ ಹೊಂಡಗಳ ನಿರ್ಮಾಣಕ್ಕೆ ರೈತರಿಗೆ ಸಹಾಯಧನ ನೀಡಲಾಗುತ್ತಿದೆ. ಹನಿನೀರಾವರಿ ಯಂತ್ರಗಳನ್ನು ಸಬ್ಸಿಡಿಯಲ್ಲಿ ಹಂಚಲಾಗುತ್ತಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿನಲ್ಲಿ ಹೆಚ್ಚಾಗಿ ಹಣ್ಣಿನ ಗಿಡಗಳನ್ನು ಬೆಳೆಸಬೇಕು. ಇದರಿಂದ ಮಂಗಗಳು ನಾಡಿಗೆ ವಲಸೆ ಬರುವುದು ಕಡಿಮೆಯಾಗುತ್ತದೆ. ರೈತರ ಬೆಳೆಯೂ ಉಳಿಯುತ್ತದೆ. ಮಂಗಗಳು ಹೆಚ್ಚಾಗಿರುವ ಪ್ರದೇಶಗಳನ್ನು ಗುರುತಿಸಿ ಹಣ್ಣಿನ ಗಿಡಗಳನ್ನು ನೆಡಿ ಎಂದು ಶಾಸಕರು ಸಲಹೆ ನೀಡಿದರು.

ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡುವಾಗ ಕನಿಷ್ಠ 24 ಅಡಿ ರಸ್ತೆ ನಿರ್ಮಾಣಕ್ಕೆ ಜಾಗಬಿಡಬೇಕು. 2 ನಿವೇಶನಗಳನ್ನು ಸರ್ಕಾರಿ ಕಚೇರಿಗಳಿಗೆ ಮೀಸಲಿಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕಿನಲ್ಲಿ 12,908 ನಿವೇಶನ ರಹಿತ ಕುಟುಂಬಗಳನ್ನು ಗುರುತಿಸಲಾಗಿದೆ. ಬಸವ ವಸತಿ ಯೋಜನೆಯಡಿ 2,000 ಮನೆಗಳ ಹಂಚಿಕೆ ಮಾಡಲಿದ್ದು, ಅರ್ಹರು ಅರ್ಜಿ ಹಾಕಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ವಿವಿಧಿ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ‘ಇಲಾಖೆಯ ಮುಖ್ಯಸ್ಥರು ಸಭೆಗೆ ಬಾರದಿದ್ದರೆ ಮಾಹಿತಿ ಪಡೆಯುವುದಾದರೂ ಹೇಗೆ? ಕ್ಲರ್ಕ್‌ಗಳಿಂದ, ಸಹಾಯಕರಿಂದ ಅಂಕಿ–ಅಂಶ ನೀಡಲು ಸಾದ್ಯವಿಲ್ಲ. ಸಭೆಗೆ ಬಾರದ ಅಧಿಕಾರಿಗಳನ್ನು ಪಟ್ಟಿಮಾಡಿ ಜಿಲ್ಲಾಧಿಕಾರಿಗೆ ಕಳುಹಿಸಿಕೊಡಿ. ಕಾರಣ ಕೇಳಿ ನೋಟಿಸ್‌ ಕಳುಹಿಸಿ ಎಂದು ತಾಲ್ಲೂಕು ಪಂಚಾಯ್ತಿ ಇಒ ಅವರಿಗೆ ಸೂಚಿಸಿದರು.

ಆರೋಗ್ಯ, ಶಿಕ್ಷಣ, ಕಂದಾಯ, ಕುಡಿಯುವ ನೀರು ಸರಬರಾಜು ಸೇರಿದಂತೆ ಹಲವು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್‌, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಉಪಾಧ್ಯಕ್ಷ ಪಿ.ರಾಜೇಂದ್ರ, ಇಒ ಕೆ.ರಾಜು, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್‌ ಅವರೂ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !