ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ಜಿಲ್ಲಾ, ರಾಜ್ಯಮಟ್ಟದ ಸಹಕಾರಿ ಸಪ್ತಾಹ

ನ.14ರಿಂದ 20ರವರೆಗೆ ನಡೆಯುವ ಕಾರ್ಯಕ್ರಮ
Published : 10 ನವೆಂಬರ್ 2022, 13:47 IST
ಫಾಲೋ ಮಾಡಿ
Comments

ಉಡುಪಿ: ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನೇತೃತ್ವದಲ್ಲಿ ನ.14ರಿಂದ 20ರವರೆಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯಲಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಹಕಾರ ತತ್ವ ಹಾಗೂ ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಸಲು ಪ್ರತಿ ಹಳ್ಳಿಗೂ ಸಹಕಾರ ರಥ ಸಂಚರಿಸಲಿದೆ ನ.14ರಂದು ಉಡುಪಿಯಲ್ಲಿ ರಥಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ನ.14ರಂದು ಬೆಳಿಗ್ಗೆ 7.30ಕ್ಕೆ ಜಿಲ್ಲೆಯ 800ಕ್ಕೂ ಮೇಲ್ಪಟ್ಟ ಸಹಕಾರ ಸಂಸ್ಥೆಗಳಲ್ಲಿ ಸಹಕಾರ ಧ್ವಜಾರೋಹಣ ನೆರವೇರಲಿದೆ. ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ನೌಕರರು ವಾಹನಗಳಲ್ಲಿ ಸಹಕಾರ ಧ್ವಜವನ್ನಿರಿಸಿಕೊಂಡು ಶಿರೂರು-ಬೈಂದೂರು-ಕುಂದಾಪುರ-ಬ್ರಹ್ಮಾವರ-ಉಡುಪಿ ಮಾರ್ಗವಾಗಿ ಉದ್ಯಾವರದವರೆಗೆ ಜಾಥಾ ನಡೆಸಲಿದ್ದಾರೆ. ಜಿಲ್ಲೆಯ ನವೋದಯ ಸ್ವಸಹಾಯ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಹತ್ತಾರು ಸಹಕಾರಿ ಸ್ತಬ್ದ ಚಿತ್ರಗಳ ಅದ್ಧೂರಿ ಮೆರವಣಿಗೆಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನದವರೆಗೂ ಕರೆತರಲಾಗುವುದು.

ಬೆಳಿಗ್ಗೆ 10.30ಕ್ಕೆ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಸಹಕಾರ ಸಪ್ತಾಹ ಉದ್ಘಾಟನೆಯಾಗಲಿದೆ. ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಚಿವರಾದ ವಿ.ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಡಾ.ಜಿ.ಶಂಕರ್, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ್ ಶೆಟ್ಟಿ, ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉಪಸ್ಥಿತರಿರಲಿದ್ದಾರೆ ಎಂದರು.

ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ನ.15ರಂದು ಬೆಳಿಗ್ಗೆ 11ಕ್ಕೆ ಪಡುಬಿದ್ರಿ ಸಹಕಾರ ಸಂಗಮ ಸಭಾಂಗಣದಲ್ಲಿ ‘ಸಹಕಾರ ಮಾರುಕಟ್ಟೆ, ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ’ ದಿನವನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಲಿಸದ್ದಾರೆ. ಡಾ.ಗಣನಾಥ ಎಕ್ಕಾರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ನ.16ರಂದು ಬೆಳಿಗ್ಗೆ 10.30ಕ್ಕೆ ಕಾರ್ಕಳದ ಲ್ಯಾಂಪ್ಸ್ ಸಹಕಾರ ಸಂಘದ ಸಭಾಂಗಣದಲ್ಲಿ ‘ಸಹಕಾರ ಶಿಕ್ಷಣ, ವೃತ್ತಿಪರ ನಿರ್ವಹಣೆಯನ್ನು ಮುಖ್ಯವಾಹಿನಿಗೆ ತರಲು ಪುನರ್ ನಿರ್ಮಿಸುವ’ ದಿನವನ್ನು ಕಾರ್ಕಳ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ವಾದಿರಾಜ ಶೆಟ್ಟಿ ಉದ್ಘಾಟಿಸಲಿದ್ದಾರೆ.

17ರಂದು ಬೆಳಿಗ್ಗೆ 10.30ಕ್ಕೆ ಅಲೆವೂರು ನೆಹರೂ ಕ್ರೀಡಾಂಗಣದಲ್ಲಿ ‘ಆವಿಷ್ಕಾರ ಪೋಷಣೆ, ಸ್ಟಾರ್ಟ್ ಅಪ್‍ಗಳಿಗೆ ಉತ್ತೇಜನ ಮತ್ತು ತಂತ್ರಜ್ಞಾನದ ಉನ್ನತೀಕರಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ದಿನವನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷಕೆ.ಪಿ.ಸುಚರಿತ ಶೆಟ್ಟಿ ಉದ್ಘಾಟಿಸಲಿದ್ದಾರೆ.

18ರಂದು ಬೆಳಿಗ್ಗೆ 10ಕ್ಕೆ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ‘ಉದ್ಯಮಶೀಲತೆ ಅಭಿವೃದ್ಧಿ, ಸಾರ್ವಜನಿಕ-ಖಾಸಗಿ-ಸಹಕಾರಿ ಸಹಭಾಗಿತ್ವವನ್ನು ಬಲಗೊಳಿಸುವ” ದಿನ ನಡೆಯಲಿದೆ.

19ರಂದು ಮಧ್ಯಾಹ್ನ 3ಕ್ಕೆ ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ‘ಯುವಜನ, ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳು’ ದಿನವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ ಉದ್ಘಾಟಿಸಲಿದ್ದಾರೆ.

20ರಂದು ಮಧ್ಯಾಹ್ನ 3 ಗಂಟೆಗೆ ಬೈಂದೂರಿನ ಖಂಬದಕೋಣೆಯ ಖಾರ್ವಿ ಹರಿಕಾಂತ ಸಭಾಂಗಣದಲ್ಲಿ ‘ಆರ್ಥಿಕ ಸೇರ್ಪಡೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳ ಡಿಜಿಟಲೀಕರಣ ಮತ್ತು ಸಹಕಾರ ಸಂಸ್ಥೆಗಳ ದತ್ತಾಂಶವನ್ನು ಬಲಪಡಿಸುವ’ ದಿನ ಹಾಗೂ ಸಪ್ತಾಹದ ಸಮಾರೋಪ ಸಮಾರಂಭವನ್ನು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಸಹಕಾರಿ ಹರೀಶ್ ಕಿಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT