ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿನ ಮೇಲೆ ರಾಜಕೀಯ ಕೆಸರೆರಚಾಟ: ಹಾಲಿ ಮಾಜಿ ಶಾಸಕರ ಮಧ್ಯೆ ವಾಕ್ಸಮರ

Last Updated 10 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ಮರಳಿನ ಸಮಸ್ಯೆ ರಾಜಕೀಯ ಬಣ್ಣ ಪಡೆದುಕೊಂಡಿದೆ. ಶಾಸಕ ರಘುಪತಿ ಭಟ್‌ ಹಾಗೂ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಮಧ್ಯೆ ವಾಕ್ಸಮರಕ್ಕೆ ವೇದಿಕೆಯಾಗಿದೆ. ಜನರಿಗೆ ಮರಳು ಕೊಡಿಸಬೇಕಾದ ನಾಯಕರು ಪರಸ್ಪರ ಕೆಸರೆರಚಾಟಕ್ಕೆ ಇಳಿದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಮರಳು ಸಮಸ್ಯೆ ದಿನೇದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಕ್ಟೋಬರ್‌ನಲ್ಲಿ ಆರಂಭವಾಗಬೇಕಿದ್ದ ಮರಳು ತೆಗೆಯುವ ಪ್ರಕ್ರಿಯೆ ವರ್ಷಾಂತ್ಯ ಸಮೀಪಿಸುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಉದ್ಭವಿಸಲು ಕಾಂಗ್ರೆಸ್‌ ನಾಯಕ ಪ್ರಮೋದ್ ಮಧ್ವರಾಜ್ ಅವರೇ ಕಾರಣ ಎಂಬುದು ಬಿಜೆಪಿ ನಾಯಕ ರಘುಪತಿ ಭಟ್ ಆರೋಪ.

ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಎನ್‌ಜಿಟಿ ಕೋರ್ಟ್‌ನಲ್ಲಿ ದಾವೆ ಹೂಡಿರುವ ಉದಯ ಸುವರ್ಣ ಅವರು ಮಧ್ವರಾಜ್ ಮಾಲೀಕತ್ವದ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದಾರೆ. ಪ್ರಕರಣ ದಾಖಲಾಗುವುದರ ಹಿಂದೆ ಅವರ ಕೈವಾಡವಿದೆ ಎಂದು ಆರೋಪಿಸುತ್ತಾರೆ ಶಾಸಕರು.

ಜಿಲ್ಲೆಯಲ್ಲಿ ಮರಳು ತೆಗೆಯಲು ಅನುಮತಿ ನೀಡುವ ವಿಚಾರದಲ್ಲಿ ರಾಜಕೀಯ ಒತ್ತಡವಿರುವುದಾಗಿ ಅಧಿಕಾರಿಗಳೇ ಹೇಳುತ್ತಾರೆ. ಪ್ರಮೋದ್‌ ಅವರು ಸಿದ್ದರಾಮಯ್ಯ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಿಸಿ ಮರಳುಗಾರಿಕೆ ಆರಂಭವಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂಬುದು ರಘುಪತಿ ಭಟ್ ಅವರ ಆರೋಪ.‌

ಇದಕ್ಕೆ ತೀಕ್ಷ ಪ್ರತಿಕ್ರಿಯೆ ನೀಡಿರುವ ಪ್ರಮೋದ್ ಮಧ್ವರಾಜ್‌, ‘ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಉದ್ಭವಿಸಲು ಶಾಸಕ ರಘುಪತಿ ಭಟ್ ಅವರ ಕಾನೂನಿನ ಅಜ್ಞಾನವೇ ಕಾರಣ. ಮೂರನೇ ಅವಧಿಗೆ ಶಾಸಕರಾಗಿರುವ ರಘುಪತಿ ಭಟ್‌ ಕಾನೂನಿನ ಬಗ್ಗೆ ಹೆಚ್ಚು ಜ್ಞಾನ ಪಡೆದು ಕಾರ್ಯೋನ್ಮುಖರಾಗಬೇಕು’ ಎಂದು ತಿರುಗೇಟು ನೀಡಿದ್ದಾರೆ.

ಮರಳು ಮಾಫಿಯಾದಿಂದ ನನಗೆ ಯಾವ ಲಾಭವೂ ಆಗಬೇಕಿಲ್ಲ. ಚುನಾವಣೆ ಸಂದರ್ಭ ಮರಳು ಮಾಫಿಯಾದವರಿಂದ ಬೆಂಬಲವನ್ನಾಗಲೀ, ಹಣವನ್ನಾಗಲೀ ಪಡೆದಿಲ್ಲ. ಮಾಫಿಯಾಗೆ ಬಲಿಯಾಗಿರುವವರು ಯಾರು ಎಂಬ ವಿಚಾರ ಭವಿಷ್ಯದಲ್ಲಿ ಜನರಿಗೆ ತಿಳಿಯಲಿದೆ ಎಂದು ಪ್ರಮೋದ್ ಟಾಂಗ್ ನೀಡಿದರು.

ಸಿಆರ್‌ಝೆಡ್ ವ್ಯಾಪ್ತಿಯ ನದಿಗಳಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಇಲ್ಲ. ಆದರೂ, ಆಸ್ಕರ್ ಫರ್ನಾಂಡೀಸ್ ಅವರು ಯುಪಿಎ ಸರ್ಕಾರದ ಮೇಲೆ ಒತ್ತಡ ಹಾಕಿ ಮೀನುಗಾರಿಕಾ ದೋಣಿಗಳಿಗೆ ಅಡ್ಡಿಯಾಗುವ ಮರಳು ದಿಬ್ಬಗಳನ್ನು ತೆರವುಗೊಳಿಸಲು ಅನುಮತಿ ಕೊಡಿಸಿದ್ದರು. ಬಳಿಕ ನದಿಪಾತ್ರದಲ್ಲಿ ಅವ್ಯಾಹತವಾಗಿ ಮರಳು ತೆಗೆದ ಕಾರಣ ಹಾರಾಡಿ, ಬೈಕಾಡಿ ಗ್ರಾಮಸ್ಥರ ಹಿತದೃಷ್ಟಿಯಿಂದ ಉದಯ ಸುವರ್ಣ ಎಂಬುವರು ಎನ್‌ಜಿಟಿ ಕೋರ್ಟ್‌ ಮೆಟ್ಟಿಲೇರಿದ್ದರು. ಈ ವಿಷಯದಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.

ಉದಯ ಸುವರ್ಣ ಕೋರ್ಟ್‌ಗೆ ಹೋಗಿದ್ದಾಗ ಸಂದರ್ಭ, ಜನರಿಗೆ ಮರಳು ಸಿಗಬೇಕು ಎಂದು ಕಾನೂನು ತಜ್ಞರನ್ನು ಭೇಟಿಯಾಗಿ ಚರ್ಚಿಸಿದ್ದೆ. ನಿಯಮಗಳನ್ನು ಪಾಲಿಸಿದ್ದರಿಂದ ಹೊಸ ಪರ್ಮಿಟ್‌ಗಳನ್ನು ಪಡೆಯುವಲ್ಲಿಯೂ ಯಶಸ್ವಿಯಾಗಿದ್ದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ 165 ಮಂದಿಗೆ ಪರವಾನಗಿ ಕೊಡಿಸಲಾಗಿತ್ತು. 28 ಮರಳು ಬ್ಲಾಕ್‌ಗಳಲ್ಲಿ, 6 ಲಕ್ಷ ಟನ್‌ ಮರಳು ತೆಗೆಯಲಾಗಿತ್ತು ಎಂದು ಪ್ರಮೋದ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT