ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ ವಿಷಯ ಪ್ರಸ್ತಾಪಿಸದಿರುವುದು ಸಾಹಿತ್ಯ ಲೋಕಕ್ಕೆ ಹಿಡಿದ ದರಿದ್ರ

‘ಮುರಾರಿ-–ಕೆದ್ಲಾಯ ರಂಗೋತ್ಸವ’ ಉದ್ಘಾಟಿಸಿ ಮಹಾಬಲೇಶ್ವರ ರಾವ್
Last Updated 7 ಫೆಬ್ರುವರಿ 2020, 15:54 IST
ಅಕ್ಷರ ಗಾತ್ರ

ಉಡುಪಿ: ಶೃಂಗೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕಲ್ಕುಳಿ ವಿಠಲ ಹೆಗಡೆಗೆ ವ್ಯವಸ್ಥೆಯು ನಕ್ಸಲ್‌ ಹಣೆಪಟ್ಟಿ ಕಟ್ಟಿದೆ. ಸಮ್ಮೇಳನದ ಅಧ್ಯಕ್ಷರಾದರು ಎಂಬ ಕಾರಣಕ್ಕೆ ಸಾಹಿತ್ಯ ಸಮ್ಮೇಳನವನ್ನೇ ಮೊಟಕುಗೊಳಿಸಿದ್ದು ಖಂಡನೀಯ ಎಂದುಕುಂಜಿಬೆಟ್ಟು ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ, ಲೇಖಕ ಡಾ. ಮಹಾಬಲೇಶ್ವರ ರಾವ್ ಟೀಕಿಸಿದರು.

ಡಾ. ನಿ. ಮುರಾರಿ ಬಲ್ಲಾಳ್ ಮತ್ತು ಪ್ರೊ. ಕೆ.ಎಸ್‌. ಕೆದ್ಲಾಯ ನೆನಪಿಗಾಗಿ ರಥಬೀದಿ ಗೆಳೆಯರು ಸಾಂಸ್ಕೃತಿಕ ವೇದಿಕೆ ನಗರದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಮುರಾರಿ-ಕೆದ್ಲಾಯ ರಂಗೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಸಮ್ಮೇಳನ ವಿಚಾರದಲ್ಲಿ ಸರ್ಕಾರ ಅನಗತ್ಯ ವಿವಾದ ಎಬ್ಬಿಸಿ ಅನುದಾನ ನಿಲ್ಲಿಸಿತು. ಪೊಲೀಸ್‌ ಸರ್ಪಗಾವಲಿನಲ್ಲಿ ಸಮ್ಮೇಳನ ಒಂದೇ ದಿನಕ್ಕೆ ಮುಕ್ತಾಯವಾಗಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಕೂಡ ಶೃಂಗೇರಿ ವಿಚಾರದ ಬಗ್ಗೆ ತುಟಿಬಿಚ್ಚದೆ ಮೌನಕ್ಕೆ ಶರಣಾಗಿದ್ದು ಸರಿಯಲ್ಲ. ಕನಿಷ್ಠ ಪಕ್ಷ ಪ್ರತಿಭಟನೆಯ ಧನಿಯೂ ಬಾರದಿರುವುದು ಬೇಸರದ ಸಂಗತಿ ಎಂದರು.

ಶೃಂಗೇರಿ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡದಿದ್ದರೆ ಕಲಬುರ್ಗಿ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ ಎಂದಿದ್ದರೆ ಬದಲಾವಣೆ ಆಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷರು ಸಮ್ಮೇಳನದಲ್ಲಿ ಶೃಂಗೇರಿ ವಿವಾದದ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ನಾವೆಲ್ಲರೂ ಯಾವ ವಿಚಾರ ಮಾತನಾಡಿದರೆ ಲಾಭ, ನಷ್ಟ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದೇವೆ. ರಾಜ್ಯದ ಸಾಂಸ್ಕೃತಿಕ, ಸಾಹಿತ್ಯಿಕ ಲೋಕ ಎಂದಿಗೂ ಇಷ್ಟು ದರಿದ್ರವಾಗಿರಲಿಲ್ಲ. ಕೆದ್ಲಾಯರು, ಬಲ್ಲಾಳರು ಇದಿದ್ದರೆ ಇದನ್ನು ತೀವ್ರವಾಗಿ ಖಂಡಿಸುತ್ತಿದ್ದರು ಎಂದು ಹೇಳಿದರು.

ಪತ್ರಕರ್ತ ಹರ್ಷ ಕುಮಾರ್‌ ಕುಗ್ವೆ ಮಾತನಾಡಿ, ನಾಟಕಗಳು ಬದುಕಿನ ಸೌಂದರ್ಯ ತೋರಿಸಿಕೊಡುತ್ತದೆ. ಆ ಶಕ್ತಿ ರಂಗಭೂಮಿಗೆ ಇದೆ. ಕಲಾವಿದರ ಮೂಲಕ ಸಮಾಜದ ಒಳಿತು ಕೆಡಕುಗಳನ್ನು ನೇರವಾಗಿ ಜನರಿಗೆ ತಲುಪುವಂತೆ ಮಾಡಲು ಸಾಧ್ಯವಿದೆ. ಬೇರ್‍ಯಾವುದೇ ಮಾಧ್ಯಮಗಳಿಗೂ ಈ ಶಕ್ತಿ ಇಲ್ಲ ಎಂದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ, ಸಂತೋಷ್‌ ಬಲ್ಲಾಳ್‌ ಉಪಸ್ಥಿತರಿದ್ದರು. ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ ವಂದಿಸಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT