ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ ತಾಲ್ಲೂಕಿನಲ್ಲಿ ಹೊಸ ಪ್ರಯೋಗ: ನಾನು ಮಾತ್ರವಲ್ಲ, ನಾವೆಲ್ಲರೂ ಕಲಿಯೋಣ

ಫಲಿತಾಂಶ ಹೆಚ್ಚಳಕ್ಕೆ ಸಹಕಾರಿ
Last Updated 11 ಡಿಸೆಂಬರ್ 2019, 9:54 IST
ಅಕ್ಷರ ಗಾತ್ರ

ಉಡುಪಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಕಲಿಕೆಯತ್ತ ಮುಖಮಾಡಬೇಕು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಅದು ಮಕ್ಕಳೇ ಮಕ್ಕಳಿಗೆ ಕಲಿಸುವ ಸರಳ ಹಾಗೂ ಪರಿಣಾಮಕಾರಿ ವಿಧಾನ.

ಕಲಿಕೆಯಲ್ಲಿ ಹೊಸತನ ಹಾಗೂ ಓದಿನಲ್ಲಿ ಹಿಂದುಳಿದ ಮಕ್ಕಳಲ್ಲಿ ಆತ್ಮವಿಶ್ವಾಸ ಕುಂದಬಾರದು ಎಂಬ ಕಾರಣಕ್ಕೆ ಮಕ್ಕಳ ನಡುವಿನ ಕಲಿಕೆಗೆ ಒತ್ತು ನೀಡಲಾಗಿದೆ. ಕುಂದಾಪುರ ತಾಲ್ಲೂಕಿನಲ್ಲಿ ನಡೆದಿರುವ ಈ ಪ್ರಯತ್ನಕ್ಕೆ ಉತ್ತಮ ಸ್ಪಂದನ ವ್ಯಕ್ತವಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಕುಂದಾಪುರ ಬಿಇಒಅಶೋಕ್ ಕಾಮತ್‌, ‘ಈಚೆಗೆ ಭಂಡಾರ್ಕರ್ಸ್‌ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಹಾಗೂ ತಜ್ಞರರನ್ನೊಳಗೊಂಡ ಪ್ರೇರಣಾ ಶಿಬಿರ ನಡೆಸಲಾಯಿತು. ಅದರಲ್ಲಿ ತಾಲ್ಲೂಕಿನ 45 ಶಾಲೆಗಳಿಂದ ಓದಿನಲ್ಲಿ ಮುಂದಿರುವ 750 ಮಕ್ಕಳು ಭಾಗವಹಿಸಿದ್ದರು.

ಶಿಬಿರದಲ್ಲಿ ಭಾಗಿಯಾದ ಪ್ರತಿ ವಿದ್ಯಾರ್ಥಿಗೂ ತನ್ನ ಶಾಲೆಯಲ್ಲಿ ಓದಿನಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲು ಸೂಚಿಸಲಾಯಿತು. ಈ ಸವಾಲನ್ನು ಬಹುತೇಕ ವಿದ್ಯಾರ್ಥಿಗಳು ಸ್ವೀಕರಿಸಿದ್ದು, ಈ ಬಾರಿಯ ಪರೀಕ್ಷೆಯಲ್ಲಿ ಸ್ನೇಹಿತರು ಅನುತೀರ್ಣರಾಗಲು ಬಿಡುವುದಿಲ್ಲ ಎಂಬ ಸಂಕಲ್ಪ ಮಾಡಿದ್ದಾರೆ’ ಎಂದರು.

ಅರ್ಧದಷ್ಟು ವಿದ್ಯಾರ್ಥಿಗಳು ಪ್ರಯತ್ನಕ್ಕೆ ಯಶಸ್ಸು ಸಿಕ್ಕರೂ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಮತ್ತಷ್ಟು ಸುಧಾರಿಸಲಿದೆ. ಮಕ್ಕಳ ನಡುವಿನ ಕಲಿಕೆ ಹೆಚ್ಚು ಪರಿಣಾಮಕಾರಿ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಬಿಇಒ ತಿಳಿಸಿದರು.

ಶಿಬಿರದ ವಿಶೇಷ:ಶಿಬಿರದಲ್ಲಿ ನಾಲ್ವರು ವಿಷಯ ತಜ್ಞರು ಭಾಗವಹಿಸಿ ‘ಮಕ್ಕಳಿಗೆ ಯಾವುದೂ ಅಸಾಧ್ಯವಲ್ಲ ಎಂಬ ಆತ್ಮವಿಶ್ವಾಸ ತುಂಬಿದರು. ವೈಯಕ್ತಿಕ ಸಾಧನೆಯ ಜತೆಗೆ, ಮತ್ತೊಬ್ಬರ ಸಾಧನೆಗೆ ಪ್ರೇರೇಪಿಸುವ ಮಹತ್ವವನ್ನು ತಿಳಿ ಹೇಳಲಾಯಿತು. ಇಲ್ಲಿ ಪಾಠ ಪ್ರವಚನಗಳ ಬದಲಾಗಿ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ವಿಡಿಯೋಗಳನ್ನು ಪ್ರದರ್ಶಿಸಿ, ಮಕ್ಕಳನ್ನು ಹುರಿದುಂಬಿಸಲಾಯಿತು’ ಎಂದು ಅಶೋಕ್ ಕಾಮತ್ ತಿಳಿಸಿದರು.

ಮಕ್ಕಳ ನಡುವಿನ ಕಲಿಕಾ ವಿಧಾನದಲ್ಲಿ ಸ್ನೇಹ ಪರಸ್ಪರ ಗಟ್ಟಿಯಾಗುತ್ತದೆ. ಒತ್ತಡ ರಹಿತ ಕಲಿಕೆಯು ಸುಲಭವಾಗಿ ತಲೆಗೆ ಹತ್ತುತ್ತದೆ. ‘ನಾನು ಎನ್ನುವುದಕ್ಕಿಂತ ನಾವೆಲ್ಲರೂ’ ಎಂಬ ಶಬ್ದದಲ್ಲಿ ಹೆಚ್ಚು ಶಕ್ತಿ ಇದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT