ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮೊಬೈಲ್ ಬದಿಗಿಟ್ಟು ಶಾಲೆಗಳತ್ತ ಬಂದರು ಚಿಣ್ಣರು

ಇಂದಿನಿಂದ ಎಲ್ಲ ತರಗತಿಗಳು ಆರಂಭ, ಮಕ್ಕಳ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಡಿಪಿಐ ಎನ್‌.ಎಚ್‌.ನಾಗೂರ
Last Updated 24 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ನಿಂದಾಗಿ ಒಂದೂವರೆ ವರ್ಷಕ್ಕೂ ಹೆಚ್ಚುಕಾಲ ಶಾಲೆಗಳಿಂದ ದೂರ ಉಳಿದಿದ್ದ ಚಿಣ್ಣರು ಅ.25ರಿಂದ ಮತ್ತೆ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಕಳೆಗುಂದಿದ್ದ ಶಾಲಾ ಪರಿಸರದಲ್ಲಿ ಮಕ್ಕಳ ಕಲರವ ಕಾಣುತ್ತಿದೆ. ಸುಧೀರ್ಘ ಅವಧಿವರೆಗೆ ತರಗತಿ ಪಾಠದಿಂದ ವಂಚಿತರಾಗಿದ್ದ ಮಕ್ಕಳು ಉತ್ಸಾಹದಿಂದ ಕಲಿಯಲು ಸಜ್ಜಾಗಿದ್ದಾರೆ. ಇಂತಹ ಸಕಾರಾತ್ಮಕ ಬೆಳವಣಿಗೆಗಳ ಮಧ್ಯೆಯೂ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಲ್ಲಿ ಆಂತಕ ಇದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಿಕ್ಷಣ ಇಲಾಖೆ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ನೋಡೋಣ.

‌ಸರ್ಕಾರದ ನಿರ್ದೇಶನ ಕಟ್ಟುನಿಟ್ಟಿನ ಅನುಷ್ಠಾನ:

1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭಿಸುವ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗಳನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ನಗರ ಪ್ರದೇಶಗಳಲ್ಲಿರುವ ಶಾಲೆಗಳನ್ನು ನಗರಾಡಳಿತ ಸಿಬ್ಬಂದಿ ಶುಚಿಗೊಳಿಸಿದ್ದಾರೆ.

ಜಿಲ್ಲೆಯಲ್ಲಿ ಶೇ 100ರಷ್ಟು ಶಿಕ್ಷಕರು ಕೋವಿಡ್ ಲಸಿಕೆ ಹಾಕಿಕೊಂಡಿರುವುದನ್ನು ಖಾತ್ರಿ ಪಡಿಸಿಕೊಳ್ಳಲಾಗಿದೆ. ತರಗತಿಗಳಲ್ಲಿ ಅಂತರ ಪಾಲಿಸಲು 20 ವಿದ್ಯಾರ್ಥಿಗಳ ಗುಂಪು ಮಾಡಿ ಬೋಧನೆ ಮಾಡಲಾಗುವುದು. ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ. ಅ.25ರಿಂದ 30ರವರೆಗೆ 1ರಿಂದ 5ನೇ ತರಗತಿ ಮಕ್ಕಳಿಗೆ ಅರ್ಧದಿನದ ಶಾಲೆ ಮಾತ್ರ ನಡೆಯಲಿದ್ದು, ನ.2 ರಿಂದ ಪೂರ್ತಿದಿನ ಶಾಲೆಗಳು ನಡೆಯಲಿವೆ ಎಂದು ಡಿಡಿಪಿಐ ಎನ್‌.ಎಚ್‌.ನಾಗೂರ ಮಾಹಿತಿ ನೀಡಿದರು.

ಕಿರಿಯ ಪ್ರಾಥಮಿಕ ಶಾಲೆಗಳು ಆರಂಭಿಸುವುದಕ್ಕೂ ಮುನ್ನ ಎಲ್ಲ ಶಾಲೆಗಳ ಮುಖ್ಯ ಗುರುಗಳ ಸಭೆ ನಡೆಸಲಾಗಿದ್ದು, ಸಿಆರ್‌ಪಿ, ಬಿಆರ್‌ಪಿ, ಬಿಐಆರ್‌ಟಿ‌, ಬಿಇಒ, ಬಿಆರ್‌ಸಿಒಗಳ ಸಭೆಯನ್ನು ಮಾಡಿ ಮಕ್ಕಳ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಯಾವ ಹಂತದಲ್ಲೂ ಲೋಪಗಳಾಗದಂತೆ ಎಚ್ಚರಿಕೆ ವಹಿಸಲು ನಿರ್ದೇಶನ ನೀಡಲಾಗಿದೆ ಎಂದರು.

ಸರ್ಕಾರದ ಸೂಚನೆಯಂತೆ ಕೊಠಡಿ ಸಾಮರ್ಥ್ಯದ ಶೇ 50ರಷ್ಟು ಮಕ್ಕಳು ಮಾತ್ರ ತರಗತಿಯಲ್ಲಿರಬೇಕು. ಆದರೆ, ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ 8 ಶಾಲೆಗಳಿದ್ದು, ಇಲ್ಲಿ ಶಾಲಾ ಕಾರಿಡಾರ್‌ಗಳನ್ನು ಬಳಸಿಕೊಳ್ಳಲು ಹಾಗೂ ಸರದಿಯಲ್ಲಿ ಶಾಲೆ ನಡೆಸಲು ಸೂಚನೆ ನೀಡಲಾಗಿದೆ. ಶಾಲಾ ಸ್ಪಂದನ‌ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲ ಮೇಲ್ವಿಚಾರಣಾಧಿಕಾರಿಗಳು ವಾರದಲ್ಲಿ ಐದು ಶಾಲೆಗಳಿಗೆ‌ ಭೇಟಿನೀಡಿ, ಶಿಕ್ಷಕರ ಬೋಧನಾ ಅವಲೋಕನ ಹಾಗೂ ವಿದ್ಯಾರ್ಥಿಗಳ ಕಲಿಕೆಯನ್ನು ಪರಿಶೀಲಿಸುವಂತೆ ತಿಳಿಸಲಾಗಿದೆ ಎಂದು ವಿವರ ನೀಡಿದರು.

ಕಲಿಕೆಯಲ್ಲಿ ಅತ್ಯಂತ ಹಿಂದುಳಿದ ಮಕ್ಕಳನ್ನು ಗುರುತಿಸಿ ಸೇತುಬಂಧ ಮೂಲಕ ಕಲಿಕಾ ಕೊರತೆ ಗುರುತಿಸಿ ಪೂರಕ ಬೋಧನೆಗೆ ಕ್ರಮ ಕೈಗೊಳ್ಳಲಾಗಿದೆ. ಈಚೆಗೆ ಸುರಿದ ಮಳೆಯಿಂದ ಕೊಠಡಿಗಳು ಶಿಥಿಲಗೊಂಡಿದ್ದರೆ, ಅವುಗಳನ್ನು ಬಳಸದಂತೆ ಎಚ್ಚರಿಕೆ ನೀಡಲಾಗಿದೆ. ಇಷ್ಟೆಲ್ಲ ಸುರಕ್ಷತಾ ಕ್ರಮಗಳ ನಡುವೆಯೂ ಹಾಜರಾತಿ ಕಡ್ಡಾಯವಲ್ಲ. ಮಕ್ಕಳನ್ನು‌ ಶಾಲೆಗೆ ಕಳಿಸಲು ಒಪ್ಪದಿದ್ದರೆ ಆನ್‌ಲೈನ್‌ನಲ್ಲಿ ಬೋಧನೆ ಮಾಡಲಾಗುವುದು. ಪ್ರತಿ ಪಾಲಕರ ಒಪ್ಪಿಗೆ ಪಡೆದೇ ಮಕ್ಕಳನ್ನು ಶಾಲೆಗ ಬಿಟ್ಟುಕೊಳ್ಳಲಾಗುತ್ತದೆ.

ಶೈಕ್ಷಣಿಕ, ಭೌತಿಕ, ಆರೋಗ್ಯ, ಸ್ವಚ್ಚತೆಯ ಜತೆಗೆ ಬಿಸಿಯೂಟದ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪೋಷಕರು ಆತಂಕಪಡುವ ಅಗತ್ಯವಿಲ್ಲ. ಧೈರ್ಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಆನ್‌ಲೈನ್ ಕಲಿಕೆಗಿಂತ ತರಗತಿಯ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿದ್ದು, ಮಕ್ಕಳ ಹಿತ ದೃಷ್ಟಿಯಿಂದ ಪೋಷಕರು ಶಿಕ್ಷಣ ಇಲಾಖೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತಾರೆ ಡಿಡಿಪಿಐ ಎನ್‌.ಎಚ್‌.ನಾಗೂರ.

ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪೋಷಕರು ಬಿಸಿನೀರಿನ ಬಾಟಲಿ ಹಾಗೂ ಮಾಸ್ಕ್‌ ಕೊಟ್ಟು ಕಳಿಸಬೇಕು. ಕೋವಿಡ್ ಲಕ್ಷಣಗಳಿದ್ದರೆ ಶಾಲೆಗೆ ಕಳುಹಿಸಬೇಡಿ. ಹಾಜರಾತಿ ಕಡ್ಡಾಯವಲ್ಲ; ಮಗು ಗುಣಮುಖವಾದ ಬಳಿಕವೇ ಶಾಲೆಗೆ ಕಳಿಸಿ. ಇದರಿಂದ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಬಬಹುದು ಎಂದು ಡಿಡಿಪಿಐ ಪಾಲಕರಿಗೆ ತಿಳಿಸಿದ್ದಾರೆ.

‘ಶಿಕ್ಷಕರ ಕೊರತೆ ಶೀಘ್ರ ಬಗೆಹರಿಯಲಿದೆ’

ಅ.25ರಿಂದ 1ರಿಂದ 10ನೇ ತರಗತಿಯವರೆಗೂ ಭೌತಿಕ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರ ಕೊರತೆ ಉಂಟಾಗಲಿದೆ. ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಒಪ್ಪಿಗೆ ಸಿಗಲಿದೆ. 15 ದಿನಗಳಲ್ಲಿ ಶಿಕ್ಷಕರ ಕೊರತೆ ಸಮಸ್ಯೆ ಬಗೆಹರಿಯಲಿದೆ ಎಂದರು ಡಿಡಿಪಿಐ ಎನ್‌.ಎಚ್‌.ನಾಗೂರ

ಸರ್ಕಾರದ ನಿಯಮಗಳು ಏನು?

–ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ

–ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯ

–50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಶೀಲ್ಡ್ ಧರಿಸಬೇಕು

–ನ.2ರಿಂದ ಮಧ್ಯಾಹ್ನದ ಬಿಸಿಯೂಟ

–ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ಕುಡಿಯುವ ನೀರಿನ ವ್ಯವಸ್ಥೆ

–ಸೇತುಬಂಧ ಶಿಕ್ಷಣದಂತಹ ಬೋಧನಾ ಪದ್ಧತಿಗೆ ಒತ್ತು

–ಕೊಠಡಿ ಸಾಮರ್ಥ್ಯದ ಶೇ 50 ಮಕ್ಕಳು ಮಾತ್ರ ಇರಬೇಕು

–ಪ್ರವೇಶದ್ವಾರದಲ್ಲಿ ಮಕ್ಕಳ ತಪಾಸಣೆ, ಕೋವಿಡ್ ಲಕ್ಷಣಗಳು ಕಂಡುಬಂದರೆ ಪ್ರತ್ಯೇಕ ಕೊಠಡಿಗೆ ರವಾನೆ

–ಹೈಪೊಕ್ಲೋರೈಟ್ ದ್ರಾವಣದಿಂದ ತರಗತಿ ಕೊಠಡಿಗಳ ಶುಚಿ

–ಶಾಲೆಯಲ್ಲಿ ಮಕ್ಕಳಿಗೆ ಸೋಂಕು ಕಾಣಿಸಿಕೊಂಡರೆ ಸ್ಯಾನಿಟೈಸ್‌

–ಸಲಹಾತ್ಮಕ ವೇಳಾಪಟ್ಟಿಯಂತೆ ಚಿಕ್ಕ ತಂಡಗಳನ್ನು ರಚಿಸಿ ಬೋಧನೆ

ಶಾಲೆಗಳು–ಸರ್ಕಾರಿ–ಅನುದಾನಿತ–ಖಾಸಗಿ–ಇತರೆ–ಒಟ್ಟು

1ರಿಂದ 5ನೇ ತರಗತಿ–220–6–15–8–249

6ರಿಂದ 8ನೇ ತರಗತಿ–363–154–148–12–677

8ರಿಂದ 10ನೇ ತರಗತಿ–106–70–112–7–295

ವಿದ್ಯಾರ್ಥಿಗಳ ದಾಖಲಾತಿ ವಿವರ

ಶಾಲೆಗಳು–ಸರ್ಕಾರಿ–ಅನುದಾನಿತ–ಖಾಸಗಿ–ಇತರೆ–ಒಟ್ಟು

1ರಿಂದ 5–29,861–8,747–38,056–227–76,891

6ರಿಂದ 8ನೇ ತರಗತಿ–17,986–7,441–21,670–926–48,023

8ರಿಂದ 10ನೇ ತರಗತಿ–12,264–6,167–13,147–1,007–32,585

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT