ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ವಿದ್ಯಾರ್ಥಿಗಳಿಗೆ ‘ವಿಶೇಷ ಪ್ರೋತ್ಸಾಹಾಂಕ’ ನೀಡಿ

ದಸಂಸ ಒಕ್ಕೂಟದಿಂದ ಪ್ರತಿಭಟನೆ; ವಿದ್ಯಾರ್ಥಿಗಳ ಹಿತರಕ್ಷಣೆಗೆ ಒತ್ತಾಯ
Last Updated 3 ಆಗಸ್ಟ್ 2021, 14:27 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ನಿಂದಾಗಿ ಕಲಿಕೆಗೆ ಗ್ರಾಮೀಣ ಭಾಗದ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಿರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ತಾರತಮ್ಯವಾಗುವ ವಿದ್ಯಾರ್ಥಿಗಳಿಗೆ ‘ಸಾಂಕ್ರಮಿಕ ರೋಗ ಕಾಲದ ವಿಶೇಷ ಪ್ರೋತ್ಸಾಹಾಂಕ’ ನೀಡಬೇಕು ಎಂದು ದಸಂಸ ಒಕ್ಕೂಟದಿಂದ ಮಂಗಳವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸಿಬಿಎಸ್‌ಸಿ ಪರೀಕ್ಷೆಗಳನ್ನು ರದ್ದು ಮಾಡಿದರೂ ರಾಜ್ಯ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಹಠಕ್ಕೆ ಬಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಅನ್ಯಾಯ ಸರಿಪಡಿಸಬೇಕು ಎಂದು ಸಂಘಟನೆಯ ಮುಖಂಡ ಸುಂದರ್ ಮಾಸ್ತರ್ ಒತ್ತಾಯಿಸಿದರು.

ಕೋವಿಡ್‌ನಿಂದ 2 ವರ್ಷ ಶೂನ್ಯ ಕಲಿಕಾ ವರ್ಷಗಳಾಗಿದ್ದು, ಆನ್‌ಲೈನ್ ಶಿಕ್ಷಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ತಲುಪಿಲ್ಲ. ಸ್ಮಾರ್ಟ್‌ ಫೋನ್‌ ಇಲ್ಲದ ನಗರದ ಬಡ ವಿದ್ಯಾರ್ಥಿಗಳಿಗೂ ಆನ್‌ಲೈನ್ ಶಿಕ್ಷಣ ಕೈಗೆಟುಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದ್ದು, ಶ್ರೀಮಂತ ಹಾಗೂ ಬಡ ವಿದ್ಯಾರ್ಥಿಗಳ ಮಧ್ಯೆ ಅಂಕ ಗಳಿಕೆಯಲ್ಲಿ ಕಂದಕ ಸೃಷ್ಟಿಸಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂತ್ರಸ್ತ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳು ಬಂದರೆ 8 ಅಥವಾ 9ನೇ ತರಗತಿಯ ಸಾಧನೆಯನ್ನು ಆಧರಿಸಿ ಅಂಕಗಳನ್ನು ನೀಡಬೇಕು. ಕಲಿಕೆ ಸಾಧ್ಯವಾಗದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾಂಕ್ರಮಿಕ ಕಾಲದ ವಿಶೇಷ ಪ್ರೋತ್ಸಾಹಾಂಕ ನೀಡಬೇಕು. ಬಡ, ದಲಿತ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಆದ್ಯತಾ ಪ್ರವೇಶ ವ್ಯವಸ್ಥೆ ನೀಡಬೇಕು ಎಂದು ಸುಂದರ್ ಮಾಸ್ತರ್ ಒತ್ತಾಯಿಸಿದರು.

ಎಸ್ಸೆಸ್ಸೆಲ್ಸಿ ನಂತರದ ಶಿಷ್ಯವೇತನ, ಪ್ರೋತ್ಸಾಹಧನ ವಿತರಣೆಯಲ್ಲೂ ಆದ್ಯತೆ ನೀಡಬೇಕು. ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರಗಳಲ್ಲಿ ಉದ್ಯೋಗ ನೀಡುವಾಗಲೂ ವಿಶೇಷ ಪ್ರೋತ್ಸಾಹಾಂಕ ಪರಿಗಣನೆಯ ಬಗ್ಗೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಶ್ಯಾಮರಾಜ್ ಬಿರ್ತಿ, ಭಾಸ್ಕರ ಮಾಸ್ತರ್, ಮಂಜುನಾಥ್ ಬಾಳ್ಕುದ್ರು, ಪರಮೇಶ್ವರ ಉಪ್ಪೂರು, ಅಣ್ಣಪ್ಪ ನಕ್ರೆ, ಶ್ರೀಧರ ಕುಂಜಿಬೆಟ್ಟು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT