ಶನಿವಾರ, ಸೆಪ್ಟೆಂಬರ್ 18, 2021
30 °C

ರಾಜಕೀಯ ನಾಯಕರ ಟೀಕೆಗಳು ಎಲ್ಲೆ ಮೀರದಿರಲಿ: ಸಚಿವ ಸುನಿಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಜಕೀಯ ನಾಯಕರ ಟೀಕೆಗಳು ಎಲ್ಲೆ ಮೀರಬಾರದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಿದ ಬಳಿಕ ವಾಜಪೇಯಿ ಕುರಿತು ಕಾಂಗ್ರೆಸ್‌ ಮುಖಂಡ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಟೀಕೆ ಮಾಡುವಾಗ ಬಳಸುವ ಶಬ್ಧಗಳನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಟೀಕೆ ಮಾಡುವವರ ವ್ಯಕ್ತಿತ್ವವನ್ನು ಅಳೆಯುತ್ತಾರೆ’ ಎಂದರು.

ಅಜಾತಶತ್ರು ವಾಜಪೇಯಿ ವ್ಯಕ್ತಿತ್ವದ ಬಗ್ಗೆ ಜನರಿಗೆ ತಿಳಿದಿದೆ. ಅವರ ವಿರುದ್ಧ ಮಾತನಾಡಿದ ಮಾತ್ರಕ್ಕೆ ವ್ಯಕ್ತಿತ್ವಕ್ಕೆ ಧಕ್ಕೆಯಾಗುವುದಿಲ್ಲ. ಕರಿನೀರಿನ ಶಿಕ್ಷೆ ಅನುಭವಿಸಿದ ಸಾವರ್ಕರ್‌ಗೆ ಕಾಂಗ್ರೆಸ್‌ ಎಂದೂ ಗೌರವ ಕೊಟ್ಟಿಲ್ಲ. ಮಣಿಶಂಕರ್ ಅಯ್ಯರ್ ಕೇಂದ್ರ ಸಚಿವರಾಗಿದ್ದಾಗ ಅಂಡಮಾನ್ ನಿಕೋಬಾರ್ ಜೈಲಿನಲ್ಲಿದ್ದ ಸಾವರ್ಕರ್ ಹೆಸರನ್ನು ತೆಗೆಸಿಹಾಕಲು ಪ್ರಯತ್ನಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರಿಗೆ ಕಾಂಗ್ರೆಸ್‌ ಅವಮಾನ ಮಾಡಿದೆ ಎಂದು ಟೀಕಿಸಿದರು.

ಪರಿಸರ ಸ್ನೇಹಿ ವಿದ್ಯುತ್‌: ಕಲ್ಲಿದ್ದಲಿನ ಬದಲಾಗಿ ಸೋಲಾರ್ ಹಾಗೂ ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದನೆಗೆ ಒತ್ತು ನೀಡುವ ಮೂಲಕ ರಾಜ್ಯದಲ್ಲಿ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗುವುದು. ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರತ್ಯೇಕ ನೀತಿ ರಚನೆ ಸಂಬಂಧ ಹಿರಿಯರ ಸಮಿತಿ ರಚಿಸಲಾಗುವುದು ಎಂದರು.

ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಯತ್ನ, ದಕ್ಷಿಣ ಕನ್ನಡ ಜಿಲ್ಲೆಯ ಉಬ್ಬರಡ್ಕ ಹಾಗೂ ಮಿತ್ತೂರು ಗ್ರಾಮಗಳನ್ನು ಪಾರಂಪರಿಕ ಗ್ರಾಮಗಳನ್ನಾಗಿ ಮಾಡುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು