ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರ ಸುಳಿವಿಲ್ಲ; ಕುಟುಂಬಗಳಿಗೆ ನೆಮ್ಮದಿ ಇಲ್ಲ

ಸುವರ್ಣ ತ್ರಿಭುಜ ಬೋಟ್‌ ನಾಪತ್ತೆಯಾಗಿ ಒಂದು ವರ್ಷ: ಮಡುಗಟ್ಟಿದೆ ದುಃಖ
Last Updated 14 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಉಡುಪಿ: ‘ಮಗ ಇಂದಲ್ಲ ನಾಳೆ ಬರ್ತಾನೆ ಎಂದು ಜೀವ ಬಿಗಿಹಿಡಿದು ಕಾಯುತ್ತಿದ್ದ ಅಪ್ಪನ ಕೊನೆಯ ಆಸೆಯೂ ಈಡೇರಲಿಲ್ಲ. 11 ತಿಂಗಳು ಮಗನ ಕನವರಿಕೆ ಬಳಿಕ ಕಳೆದ ತಿಂಗಳು ಪ್ರಾಣಬಿಟ್ಟರು’ ಎಂದು ಸುವರ್ಣ ತ್ರಿಭುಜ ಬೋಟ್‌ ದುರಂತದಲ್ಲಿ ನಾಪತ್ತೆಯಾದ ದಾಮೋದರ್ ಸಾಲ್ಯಾನ್ ಅವರ ಸಹೋದರ ಗಂಗಾಧರ ಸಾಲ್ಯಾನ್‌ ದುಃಖ ತೋಡಿಕೊಂಡರು.

ಮಲ್ಪೆಯಿಂದ 7 ಮೀನುಗಾರರನ್ನು ಹೊತ್ತು ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್‌ ಡಿ.15, 2018ರಂದು ಕಣ್ಮರೆಯಾಗಿತ್ತು. ಈ ದುರ್ಘಟನೆ ನಡೆದು ಇಂದಿಗೆ (ಭಾನುವಾರ) ಒಂದು ವರ್ಷ ಕಳೆದಿದೆ. ಬೋಟ್‌ನಲ್ಲಿದ್ದ ಮೀನುಗಾರರು ಬದುಕಿದ್ದಾರಾ, ಮೃತಪಟ್ಟಿದ್ದಾರಾ ಎಂಬ ಮಾಹಿತಿ ಸಿಗದೆ, ಮೀನುಗಾರರ ಕುಟುಂಬಗಳು ಆತಂಕದಲ್ಲಿ ದಿನ ದೂಡುತ್ತಿವೆ.

ಮಲ್ಪೆಯ ಬಡಾನಿಡಿಯೂರಿನ ದಾಮೋದರ್ ಸಾಲ್ಯಾನ್ ಕುಟುಂಬ ನಿತ್ಯ ಕಣ್ಣೀರಿನಲ್ಲಿ ದಿನ ಕಳೆಯುತ್ತಿದೆ. ದಾಮೋದರ್ ಪತ್ನಿ ದುಃಖ ತಡೆಯದೆ ತವರುಮನೆ ಸೇರಿದ್ದಾರೆ. ಅಪ್ಪ ಸುವರ್ಣ ತಿಂಗಳಾಯ ಮೃತಪಟ್ಟಿದ್ದಾರೆ. ತಾಯಿ ಹಾಸಿಗೆ ಹಿಡಿದಿದ್ದಾರೆ ಎಂದು ಸಹೋದರ ಗಂಗಾಧರ್‌ ಮನೆಯ ಪರಿಸ್ಥಿತಿಯನ್ನು ವಿವರಿಸಿದರು.

‘ಬೋಟ್‌ ದುರಂತ ಹೇಗಾಯಿತು, ಮೀನುಗಾರರು ಏನಾದರು ಎಂಬ ಮಾಹಿತಿ ಕುಟುಂಬಕ್ಕೆ ಸಿಕ್ಕಿಲ್ಲ. ದುರಂತಗಳು ನಡೆಯುವುದು ಸಹಜ; ಆದರೆ, ಘಟನೆಯ ಹಿಂದಿರುವ ಸತ್ಯ ಬಹಿರಂಗವಾಗಬೇಕು. ಕೇಂದ್ರ ಸರ್ಕಾರ ಸತ್ಯಾಂಶ ಬಯಲು ಮಾಡಬೇಕು ಎಂದು ಒತ್ತಾಯಿಸುತ್ತಾರೆ ಅವರು.

ನಾಪತ್ತೆಯಾದ ಮೀನುಗಾರರು ಮರಳಿ ಬರಬಹುದು ಎಂಬ ನಿರೀಕ್ಷೆಯಲ್ಲಿಯೇ ಎಲ್ಲ ಕುಟುಂಬಗಳು ಭರವಸೆಯನ್ನು ದಿನಕಳೆಯುತ್ತಿವೆ. ಬಡ ಮೀನುಗಾರರ ಭಾವನೆಗಳ ಜತೆ ಚೆಲ್ಲಾಟವಾಡುವುದು ಸರಿಯಲ್ಲ. ಸಾವಿನಲ್ಲಿ ರಾಜಕೀಯ ಬೆರೆಸಬೇಡಿ ಎಂದು ಮನವಿ ಮಾಡಿದರು.

ಮಲ್ಪೆಯ ಚಂದ್ರಶೇಖರ್ ಕೋಟ್ಯಾನ್‌ ಕುಟುಂಬ ಕೂಡ ಆತಂಕದಲ್ಲಿದೆ. ಚಂದ್ರಶೇಖರ್ ಅವರ ಪತ್ನಿಗೆ ದುರಂತದ ಸಂಪೂರ್ಣ ಮಾಹಿತಿಯೇ ತಿಳಿದಿಲ್ಲ. ಇನ್ನೂ ಉತ್ತರ ಕನ್ನಡ ಜಿಲ್ಲೆಯ ಐವರು ಮೀನುಗಾರರ ಕುಟುಂಬದ ಪರಿಸ್ಥಿತಿಯೂ ಭಿನ್ನವಾಗಿಲ್ಲ.

ಮನೆಗೆ ಆಧಾರವಾಗಿದ್ದ ದುಡಿಯುವ ಮಕ್ಕಳನ್ನು ಕಳೆದುಕೊಂಡು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.ಯಾರಬಳಿ ನ್ಯಾಯ ಕೇಳುವುದು ಎಂಬುದನ್ನು ತಿಳಿಯದೆ ದಿಕ್ಕು ತೋಚದಂತಾಗಿವೆ.

ಕೇಂದ್ರದಿಂದ ಬಿಡಿಗಾಸು ಪರಿಹಾರ ಇಲ್ಲ:‌

ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ ₹ 11 ಲಕ್ಷ ಪರಿಹಾರ ಸಿಕ್ಕಿದ್ದು ಬಿಟ್ಟರೆ ಕೇಂದ್ರ ಸರ್ಕಾರದಿಂದ ಇದುವರೆಗೂ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ವಿಶೇಷ ಪ್ರಕರಣ ಎಂದು ಪರಿಶೀಲಿಸಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಇದುವರೆಗೂ ಆದೇಶ ಬಂದಿಲ್ಲ ಎನ್ನುತ್ತಾರೆ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಗಣೇಶ್‌.

‘ಪರಿಹಾರ ವಿತರಣೆಗೆ ಅಡ್ಡಿ’

ನಾಪತ್ತೆಯಾದ ಮೀನುಗಾರರ ಶವಗಳು ದೊರೆಯದಿರುವುದು ಪರಿಹಾರ ವಿತರಣೆಗೆ ಅಡ್ಡಿಯಾಗಿದೆ. ಕೇಂದ್ರದ ಪರಿಹಾರ ಬಿಡುಗಡೆಯಾಗಬೇಕಾದರೆ, ವಿಮೆ ಪರಿಹಾರ ಮೊತ್ತ ದೊರೆಯಬೇಕಾದರೆ ಕಡ್ಡಾಯವಾಗಿ ಮರಣೋತ್ತರ ಪರೀಕ್ಷಾ ವರದಿ ಸಲ್ಲಿಕೆಯಾಗಬೇಕು.

ಆದರೆ, ಈ ಪ್ರಕರಣದಲ್ಲಿ ಶವಗಳು ಸಿಕ್ಕಿಲ್ಲವಾದ್ದರಿಂದ ಮರಣ ಪ್ರಮಾಣ ಪತ್ರ ನೀಡಲು ತಾಂತ್ರಿಕ ಕಾರಣಗಳು ಅಡ್ಡಿಯಾಗುತ್ತವೆ. ಆದ್ದರಿಂದ ಸದ್ಯಕ್ಕೆ ಪರಿಹಾರ ಸಿಗುವುದು ಕಷ್ಟ. ಏಳು ವರ್ಷಗಳವರೆಗೂ ಶವಗಳು ದೊರೆಯದಿದ್ದರೆ ನಂತರ ಮರಣ ಪ್ರಮಾಣಪತ್ರ ಪಡೆಯಬಹುದು. ಅಲ್ಲಿಯವರೆಗೂ ಕುಟುಂಬ ಸದಸ್ಯರು ಕಾಯಬೇಕಾಗಬಹುದು ಎನ್ನುತ್ತಾರೆ ಅಧಿಕಾರಿಗಳು.

ಪ್ರಕರಣದ ಸುತ್ತ...

ಡಿ.13, 2018ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ನಲ್ಲಿ ಮಲ್ಪೆಯ ಚಂದ್ರಶೇಖರ್ ಕೋಟ್ಯಾನ್‌, ದಾಮೋದರ್ ಸಾಲ್ಯಾನ್‌, ಉತ್ತರ ಕನ್ನಡ ಜಿಲ್ಲೆಯ ಲಕ್ಷ್ಮಣ, ಸತೀಶ್‌, ಹರೀಶ್‌, ರಮೇಶ್‌, ರವಿ ಇದ್ದರು. ಡಿ.15ರಂದು ಮಹಾರಾಷ್ಟ್ರದ ಗಡಿಯಲ್ಲಿ ಬೋಟ್‌ ಸಂಪರ್ಕ ಕಳೆದುಕೊಂಡಿತ್ತು. ಡಿ.22ರಂದು ಮಲ್ಪೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಮೇ 1, 2019ರಂದು ಮಾಲ್ವಾನ್ ಬಳಿ ನೌಕಾಪಡೆಯ ಶೋಧ ಕಾರ್ಯಾಚರಣೆ ವೇಳೆ ಬೋಟ್‌ನ ಅವಶೇಷಗಳು ಪತ್ತೆಯಾಗಿದ್ದವು. ಆದರೆ, ಮೀನುಗಾರರ ಶವಗಳು ಸಿಕ್ಕಿರಲಿಲ್ಲ. ಬೋಟ್ ಮೇಲೆತ್ತಲು ಕೂಡ ಸಾಧ್ಯವಾಗಿರಲಿಲ್ಲ.

ಐಎನ್‌ಎಸ್‌ ಕೊಚ್ಚಿನ್ ಡಿಕ್ಕಿ: ಆರೋಪ

ನೌಕಾಪಡೆಯ ಐಎನ್‌ಎಸ್‌ ಕೊಚ್ಚಿನ್‌ ಹಡಗು ಡಿಕ್ಕಿಹೊಡೆದು ಸುವರ್ಣ ತ್ರಿಭುಜ ಬೋಟ್ ದುರಂತಕ್ಕೀಡಾಗಿದೆ ಎಂಬ ಬಲವಾದ ಶಂಕೆ ಇದೆ. ಬೋಟ್ ಡಿ.15ರಂದು ಮಹಾರಾಷ್ಟ್ರದ ಸಮುದ್ರ ಗಡಿಯಲ್ಲಿ ನಾಪತ್ತೆಯಾಗಿದ್ದು, ಅದೇ ದಿನ ಐಎನ್‌ಎಸ್‌ ಹಡಗಿನ ತಳಭಾಗಕ್ಕೂ ಹಾನಿಯಾಗಿದೆ. ಆದರೆ, ಈ ಸತ್ಯವನ್ನು ಒಪ್ಪಿಕೊಳ್ಳಲು ಕೇಂದ್ರ ಸರ್ಕಾರ ಸಿದ್ಧವಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೌಕಾಪಡೆಗೆ ಸಣ್ಣ ಬೋಟ್ ಅವಘಡಕ್ಕೆ ಕಾರಣ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲವೇ ಎಂಬುದು ಮೀನುಗಾರರ ಪ್ರಶ್ನೆ.
ಪ್ರತಿಭಟನೆಯ ಕಾವು

ಮೀನುಗಾರರ ನಾಪತ್ತೆ ಪ್ರಕರಣ ಕರಾವಳಿಯಾದ್ಯಂತ ಪ್ರತಿಭಟನೆಯ ಕಾವು ಹೊತ್ತಿಸಿತ್ತು. ಮೀನುಗಾರ ಸಮುದಾಯ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿತ್ತು. ಲೋಕಸಭಾ ಚುನಾವಣೆಯ ಪ್ರಮುಖ ಚರ್ಚಾ ವಿಷಯವಾಗಿಯೂ ಮುನ್ನಲೆಗೆ ಬಂದಿತ್ತು. ಮಾರ್ಚ್‌ 23ರಂದು ಖುದ್ದು ರಕ್ಷಣಾ ಸಚಿವೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮೀನುಗಾರರ ಕುಟುಂಬಗಳಿಗೆ ಭೇಟಿನೀಡಿ ಸಾಂತ್ವನ ಹೇಳಿದ್ದರು. ಬಳಿಕ ಮೀನುಗಾರರ ನಿಯೋಗ ದೆಹಲಿಗೆ ತೆರಳಿ ರಕ್ಷಣಾ ಸಚಿವೆಯನ್ನು ಭೇಟಿಯಾಗಿ ಚರ್ಚಿಸಿತ್ತು. ಬಳಿಕ ಪ್ರಕರಣ ಗಂಭೀರತೆ ಕಳೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT