ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಹಾಸುಹೊಕ್ಕಾಗಿರುವ ಬಹುತ್ವ: ಪ್ರೊ.ರಹಮತ್ ತರಿಕೆರೆ

‘ತಲ್ಲೂರು ನುಡಿಮಾಲೆ’ ಕಾರ್ಯಕ್ರಮದಲ್ಲಿ ಚಿಂತಕ ಪ್ರೊ.ರಹಮತ್ ತರಿಕೆರೆ
Last Updated 17 ಏಪ್ರಿಲ್ 2022, 15:05 IST
ಅಕ್ಷರ ಗಾತ್ರ

ಉಡುಪಿ: ಭಾರತ ಬಹುತ್ವವನ್ನೊಳಗೊಂಡ ದೇಶವಾಗಿದ್ದು, ಆಹಾರ, ಭಾಷೆ, ಸಂಸ್ಕೃತಿ ಸೇರಿದಂತೆ ಎಲ್ಲದರಲ್ಲೂ ಬಹುತ್ವ ಹಾಸುಹೊಕ್ಕಾಗಿದೆ ಎಂದು ಚಿಂತಕ ಪ್ರೊ.ರಹಮತ್ ತರಿಕೆರೆ ಅಭಿಪ್ರಾಯಪಟ್ಟರು.

ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನಿಂದ ಶನಿವಾರ ಕರಾವಳಿ ಬೈಪಾಸ್ ಬಳಿಯ ಮಣಿಪಾಲ್ ಇನ್‌ ಹೋಟೆಲ್ ಸಭಾಗಂಣದಲ್ಲಿ ಆಯೋಜಿಸಿದ್ದ ‘ಕರಾವಳಿ ಕಟ್ಟು’ ‘ತಲ್ಲೂರು ನುಡಿಮಾಲೆ 2022’ ಕಾರ್ಯಕ್ರಮದಲ್ಲಿ ‘ಬಹುತ್ವದ ಬಹುಮುಖಗಳು’ ವಿಷಯದ ಕುರಿತು ಮಾತನಾಡಿದ ಅವರು, ಕರಾವಳಿ ಬಹುತ್ವದ ನೆಲವಾಗಿದ್ದು, ಬಹು ಭಾಷೆ, ಬಹು ಭಾಷಿಕರು, ಬೌದ್ಧ, ಕ್ರೈಸ್ತ, ಇಸ್ಲಾಂ, ನಾಥ ಪಂತ, ಹೀಗೆ ಹಲವು ಧರ್ಮಗಳಿಗೆ ಕರಾವಳಿ ನೆಲೆ ಕೊಟ್ಟಿದೆ ಎಂದರು.

ಕಾರಂತರ ಹತ್ತು ಮುಖಗಳು ಬರಹದಲ್ಲಿ ಬಹುತ್ವ ಅಡಗಿರುವುದನ್ನು ಕಾಡಬಹುದು. ಕರಾವಳಿಯ ವ್ಯಾಪಾರ, ಉದ್ದಿಮೆಗಳಲ್ಲಿ ಸರ್ವಧರ್ಮ ಅಡಗಿದ್ದು, ಹಲವು ಧರ್ಮದವರು ಕೂಡಿ ಆರ್ಥಿಕತೆಯನ್ನು ಕಟ್ಟಿದ್ದಾರೆ. ಇಂತಹ ಶ್ರೇಷ್ಠವಾದ ನೆಲದಲ್ಲಿ ಬಹುತ್ವವನ್ನು ಪ್ರಶ್ನಿಸುವ ಕೆಲಸಗಳು ನಡೆಯುತ್ತಿವೆ.ಬಹುತ್ವದಿಂದ ನಾಡು, ಸಮಾಜವನ್ನು ಕಟ್ಟಬಹುದು ಎಂಬುದನ್ನು ಎಲ್ಲರೂ ಸೇರಿ ಸಾಬೀತುಪಡಿಸಬೇಕಿದೆ ಎಂದರು.

ಏಕರೂಪಿಕರಣದ ಒತ್ತಡ ಬಹುತ್ವದ ಚರ್ಚೆಯನ್ನು ಮುನ್ನಲೆಗೆ ತಂದಿದೆ. ಬಹುತ್ವ ಎಂದರೆ ಭಾಷೆ, ಧರ್ಮ, ಸಂಸ್ಕೃತಿ ಒಟ್ಟಾಗಿರುವುದು ಎಂದರ್ಥ. ಭಾರತ ಬಹು ಪ್ರಾಂತೀಯ ದೇಶವಾಗಿದ್ದು, ಬಹುತ್ವ ಒಂದು ಪ್ರದೇಶಕ್ಕೆ ಸೀಮಿತವಾಗದೆ ದೇಶದ ಉದ್ದಗಲಕ್ಕೂ ಚಾಚಿಕೊಂಡಿದೆ. ಸಮಾಜ ಬಹುತ್ವದಲ್ಲಿ ವಿಸ್ತರಣೆ ಪಡೆಯಬೇಕು ಎಂದು ಪ್ರತಿಪಾದಿಸಿದರು.

ಎಲ್ಲ ಪಂಥಗಳು ಬಹುಧಾರೆಗಳಿಂದ ಕೂಡಿರುವಂಥದ್ದು. ಬಹುತ್ವ ಹಲವು ಸಂಗತಿಗಳ ಜತೆ ಸಂಬಂಧಗಳನ್ನು ಬೆಸೆದುಕೊಂಡಿದ್ದು, ಅದು ಸ್ನೇಹಶೀಲ ಮಾತ್ರವಲ್ಲ, ಸಂಘರ್ಷವೂ ಆಗಿರಬಹುದು. ಬಹುತ್ವವು ವೈವಿಧ್ಯಕ್ಕಿಂತಲೂ ಮುಖ್ಯವಾದುದು ಎಂದರು.

ಏಕರೂಪಿಕರಣವು ಭಾಷಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಹೇರಿಕೆಯ ಗುಣಗಳನ್ನು ಹೊಂದಿದೆ. ಪರಂಪರೆಯಿಂದ ಬಂದಿರುವುದನ್ನು ಬದಲಿಸುತ್ತದೆ. ಏಕರೂಪಿಕರಣ ಒಗ್ಗಟ್ಟಿನ ಸಂಕೇತವಾದರೆ ಅದು ಸ್ವೀಕಾರಾರ್ಹ. ಆದರೆ, ಹೇರಿಕೆಯ ಗುಣ ಇರಬಾರದು. ಕೂಡಿ ಬಾಳುವ ತತ್ವಕ್ಕೆ ವಿರುದ್ಧವಾಗಿರಬಾರದು ಎಂದರು.

ಬೇಂದ್ರೆ ಐವರು ತಾಯಂದಿರ ಮಗ ಎನ್ನುವ ಮೂಲಕ ಮಾತೃತ್ವದ ಬಹುತ್ವವನ್ನು ಸಾರಿದ್ದಾರೆ. ಬಹುತ್ವ ಕಳೆದುಕೊಂಡ ಸಮಾಜದಲ್ಲಿ ಅಂಗವಿಕಲ ಸಂತಾನಗಳು ಹುಟ್ಟಬಹುದೇನೋ ಎಂದು ರಹಮತ್ ತರಿಕೆರೆ ಹೇಳಿದರು.

ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿ ರಾಜಾರಾಂ ತಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿ ‘2007ರಲ್ಲಿ ಆರಂಭವಾದ ಟ್ರಸ್ಟ್‌ ವಿಶೇಷ ಮಕ್ಕಳಿಗೆ ದುಡಿಯುತ್ತಿದ್ದು, 15 ವರ್ಷಗಳಲ್ಲಿ ಊಹೆಗೂ ಮೀರಿ ಬೆಳೆದಿದೆ. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಭಾಗವಾಗಿ ನಾರಾಯಣ ವಿಶೇಷ ಮಕ್ಕಳ ಶಾಲೆ ನಡೆಸಲಾಗುತ್ತಿದ್ದು, ಸರ್ಕಾರದ ಅನುದಾನ ಹಾಗೂ ಸಹಾಯವಿಲ್ಲದೆ ಕುಂದಾಪುರ ತಾಲ್ಲೂಕಿನ 35 ವಿಶೇಷ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಹಗಲು ಆರೈಕೆ ನೀಡುತ್ತಿದೆ ಎಂದರು.

‘ಕರಾವಳಿ ಕಟ್ಟು’ ಅಡಿಯಲ್ಲಿ ಕರಾವಳಿಯನ್ನು ಮಾನವೀಯವಾಗಿಸುವ ಪ್ರಯತ್ನಗಳು ನಡೆಯುತ್ತಿದ್ದು, ಸ್ಥಳೀಯವಾಗಿ ಬೇರುಗಳನ್ನು ಗಟ್ಟಿಗೊಳಿಸಲಾಗುತ್ತಿದೆ ಎಂದರು.

ನಾಗರಾಜ ಮಂಜಾಳೆ ಅವರ ಕವನ ಸಂಕಲನದ ಕನ್ನಡಾನುವಾದ ‘ಬಿಸಿಲಿನ ಷಡ್ಯಂತ್ಯದ ವಿರುದ್ಧ’ ಕೃತಿಯನ್ನು ನಿರ್ದೇಶಕಿ ಫರ್ಹ ಖಾತೂನ್ ಬಿಡುಗಡೆ ಮಾಡಿದರು. ಕವನ ಸಂಕಲನದ ಅನುವಾದಕ ಸಂವರ್ತ ಸಾಹಿಲ್‌, ಟ್ರಸ್ಟಿ ಸುರೇಶ್‌ ತಲ್ಲೂರು ಉಪಸ್ಥಿತರಿದ್ದರು. ಉಪನ್ಯಾಸಕಿ ಸುಮಾ ಜೋಸ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT