ಶುಕ್ರವಾರ, ಜೂನ್ 5, 2020
27 °C

ಉಡುಪಿ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು: ಧಿನಕರ ಬಾಬು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಉಡುಪಿ: ಎಲ್ಲ ಕ್ಷೇತ್ರಗಳಲ್ಲಿ ಉಡುಪಿ ಜಿಲ್ಲೆ ಅಭಿವೃದ್ಧಿ ಸಾಧಿಸಿದ್ದು, ಇದರ ಹಿಂದೆ ಶಿಕ್ಷಕರ ಪಾತ್ರ ದೊಡ್ಡದಿದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿನಕರ ಬಾಬು ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಸಮಿತ, ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ ಸಹಯೋಗದಲ್ಲಿ ಬುಧವಾರ ಶ್ಯಾಮಿಲಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ, ಶಿಕ್ಷಕರ ವೃತ್ತಿಗೆ ಸೇರುವವರ ಸಂಖ್ಯೆ ಹೆಚ್ಚಾಗಿತ್ತು. ಪ್ರಸ್ತುತ ಹೆಚ್ಚುತ್ತಿರುವ ಕಾರ್ಯದೊತ್ತಡ ಹಾಗೂ ಕುಂದುತ್ತಿರುವ ಗೌರವದಿಂದಾಗಿ ಶಿಕ್ಷಕ ವೃತ್ತಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದಿದ್ದ ಗುರುಕುಲ ಮಾದರಿಯ ಶಿಕ್ಷಣ ಪ್ರಸ್ತುತ ಜಾರಿಯಾಗಬೇಕು ಎಂದರು.

ತಂದೆ–ತಾಯಿಯ ನಂತರದ ಗೌರವ ಸ್ಥಾನವನ್ನು ಶಿಕ್ಷಕರಿಗೆ ನೀಡಲಾಗುತ್ತಿದೆ. ಸರ್ಕಾರ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅವರ ನ್ಯಾಯಯುತ ಬೇಡಿಕೆಗಳು ಈಡೇರಿಸಬೇಕು ಎಂದು ಒತ್ತಾಯಿಸಿದರು. 

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ.ಶಂಕರ್ ಮಾತನಾಡಿ, ರಾಜ್ಯ ಸರ್ಕಾರ ಉತ್ತಮ ಶಿಕ್ಷಕ ಪ್ರಶಸ್ತಿಗೆ ನೀಡುತ್ತಿರುವ ಗೌರವ ಮೊತ್ತವನ್ನು ಹೆಚ್ಚಿಸಬೇಕು. ಆಗ ಪ್ರಶಸ್ತಿಯ ಗೌರವವೂ ಹೆಚ್ಚಾಗುತ್ತದೆ. ಟ್ರಸ್ಟ್‌ನಿಂದಲೂ ಹೆಚ್ಚಿನ ಗೌರವ ಮೊತ್ತವನ್ನು ಶಿಕ್ಷಕರಿಗೆ ನೀಡಲಾಗುತ್ತಿದೆ ಎಂದರು.

ಶಿಕ್ಷಕರಿಗೆ ಪ್ರತಿತಿಂಗಳು ಸರಿಯಾಗಿ ಸಂಬಳ ಬಿಡುಗಡೆಯಾಗುತ್ತಿಲ್ಲ. ಆದರೆ, ಐಎಎಸ್‌ ಅಧಿಕಾರಿಗಳು ಮಾತ್ರ ತಿಂಗಳಿಗೆ ಸರಿಯಾಗಿ ಸಂಬಳ ತೆಗೆದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಪ್ರತಿತಿಂಗಳು ಸರಿಯಾದ ಸಮಯಕ್ಕೆ ಸಂಬಳ ಕೊಡಿಸಲು ಶಾಸಕ ಕೆ.ರಘುಪತಿ ಭಟ್ ಅವರು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಜಿ.ಶಂಕರ್ ಒತ್ತಾಯಿಸಿದರು.

ಎಲ್ಲ ಜಯಂತಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ, ಶಿಕ್ಷಕರ ದಿನಾಚರಣೆಗೆ ಮಾತ್ರ ರಜೆ ನೀಡಿಲ್ಲ. ಸರ್ಕಾರದ ವಿವಿಧ ಯೋಜನೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರು ಒತ್ತಡದಲ್ಲಿದ್ದಾರೆ. ಅವರಿಗೆ ನೆಮ್ಮದಿಯಿಂದ ಜೀವನ ನಡೆಸಲು ಶಿಕ್ಷಕರ ದಿನಾಚರಣೆಯಂದು ರಜೆ ನೀಡಬೇಕು. ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಈಚೆಗೆ ಬಿಡುಗಡೆಯಾದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಗಡಿನಾಡ ಕನ್ನಡ ಶಾಲೆಗಳ ದುಸ್ಥಿತಿಯನ್ನು ಚೆನ್ನಾಗಿ ಬಿಂಬಿಸಲಾಗಿದೆ. ಕನ್ನಡ ಶಾಲೆಗಳು ಉಳಿಯಬೇಕು. ಜಿಲ್ಲೆಯ ಎಲ್ಲ ಶಾಲೆಯ ಮಕ್ಕಳು ಈ ಸಿನಿಮಾವನ್ನು ವೀಕ್ಷಣೆ ಮಾಡಲು ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ಜಿ.ಶಂಕರ್ ಟ್ರಸ್ಟ್‌ ಕೂಡ ಆರ್ಥಿಕ ನೆರವು ನೀಡಲಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಪ್ರಶಸ್ತಿ ಪಡೆದ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಲಾಯಿತು. ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನಿಂದ ಜಿಲ್ಲಾ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಗೌರವ ಸಮರ್ಪಿಸಲಾಯಿತು. ಇದೇವೇಳೆ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಶಿವಾನಂದ ಕಾಪಶಿ ಪ್ರಾಸ್ತವಿಕ ಮಾತನಾಡಿದರು. ಶಾಸಕ ಕೆ.ರಘುಪತಿ ಭಟ್‌, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್‌, ಡಿಡಿಪಿಐ ಶೇಷಶಯನ ಕಾರಿಂಜ, ಜಿಲ್ಲಾಪಂಚಾಯ್ತಿ ಸದಸ್ಯೆ ಗೀತಾಂಜಲಿ ಸುವರ್ಣ, ಡಯಟ್ ಪ್ರಾಂಶುಪಾಲ ನಾಗೇಶ್, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ದಿನಕರ ಶೆಟ್ಟಿ, ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಕಾಶ್. ತಾಲ್ಲೂಕು ಅಧ್ಯಕ್ಷೆ ಮಂಗಳಾ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು