ಬುಧವಾರ, ಅಕ್ಟೋಬರ್ 28, 2020
24 °C
ಕುಂದಾಪುರದಲ್ಲಿ ಮೂರು ಮನೆಗಳಲ್ಲಿ ಕಳವು ಮಾಡಿದ್ದ ಕಳ್ಳರು

ಸರಣಿ ಮನೆಗಳವು: ಇಬ್ಬರು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕುಂದಾಪುರ ತಾಲ್ಲೂಕಿನಲ್ಲಿ ಸರಣಿ ಮನೆಗಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಹೊನ್ನಾವರ ತಾಲ್ಲೂಕಿನ ತಾಳಮಕ್ಕಿಯ ವಿಲ್ಸನ್‌ ಪಿಯಾದಾಸ್‌ ಲೋಪಿಸ್‌, ಕುಂದಾಪುರದ ತೆಕ್ಕಟ್ಟೆಯ ಗಂಗಾಧರ ಬಂಧಿತ ಆರೋಪಿಗಳು. ಇವರಿಂದ 64 ಗ್ರಾಂ ಚಿನ್ನ, 112 ಗ್ರಾಂ ಬೆಳ್ಳಿಯ ಆಭರಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಪ್ರಕರಣ 1:

ಆರೋಪಿಗಳು ಮೇ 7, 2019ರಂದು ಕುಂದಾಪುರದ ಕಾವ್ರಾಡಿಯ ಮುಳ್ಳುಗದ್ದೆಯಲ್ಲಿರುವ ನಾಗರಾಜ್ ಅವರ ನಿವಾಸಕ್ಕೆ ನುಗ್ಗಿ ಕಪಾಟು ಒಡೆದು  64,900 ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.

ಪ್ರಕರಣ 2: ಮೇ 17, 2019 ರಂದು ಬಸ್ರೂರು ಗ್ರಾಮದ ಕೊಳ್ಳೇರಿಯ ಮಹಾಲಿಂಗ ಅವರ ಮನೆಯ ಮಾಡಿನ ಹೆಂಚು ತೆಗೆದು ಬೀರುವಿನಲ್ಲಿಟ್ಟಿದ್ದ ನಗದು, ಚಿನ್ನದ ಕರಿಮಣಿ ಸರ, ಬೆಂಡೋಲೆ, ಮೂಗುತಿ, ಓಲೆ ಸಹಿತ ₹ 2 ಲಕ್ಷ ಮೌಲ್ಯದ ಸ್ವತ್ತುಗಳನ್ನು ಕದ್ದೊಯ್ದಿದ್ದರು.

ಪ್ರಕರಣ 3: ನ.26, 2019ರಲ್ಲಿ ಕುಂದಾಪುರ ರೈಲ್ವೆಸ್ಟೇಷನ್‌ ವಸತಿ ಗೃಹದಲ್ಲಿ ವಾಸವಿದ್ದ ಟ್ರಾಕ್‌ಮನ್‌ ಸುಬ್ಬ ದೇವಾಡಿಗ ನಿವಾಸಕ್ಕೆ ನುಗ್ಗಿದ ಕಳ್ಳರು ನಗದು ಚಿನ್ನಾಭರಣ ದೋಚಿದ್ದರು. ಈ ಮೂರು ಪ್ರಕರಣಗಳ ತನಿಖೆ ನಡೆಸಿದ ಕುಂದಾಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ,  ರೈಲ್ವೆ ನಿಲ್ದಾಣದ ಬಳಿ ಮಣ್ಣಿನಲ್ಲಿ ಹುದುಗಿಸಿಟ್ಟಿದ್ದ ಹಾಗೂ ಅಡವಿಟ್ಟಿದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಹಿನ್ನೆಲೆ:

ಆರೋಪಿ ವಿಲ್ಸನ್‌ ಬಸ್ರೂರಿನ ಮೇರ್ಡಿ ಹಾಗೂ ಕಟ್ಟೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕಳವು ಮಾಡಿದ ಚಿನ್ನವನ್ನು ಗಂಗಾಧರನಿಗೆ ಒಪ್ಪಿಸುತ್ತಿದ್ದ. ಕಳ್ಳತನಕ್ಕೆ ಬೆಂಬಲ ನೀಡುತ್ತಿದ್ದ ಗಂಗಾಧರ ಚಿನ್ನವನ್ನು ಕುಂದಾಪುರ ಹಾಗೂ ಕೋಟೇಶ್ವರದ ಸಹಕಾರ ಸಂಘಗಳಲ್ಲಿ ಅಡಮಾನ ಇಟ್ಟು, ಹಣವನ್ನು ಇಬ್ಬರು ಹಂಚಿಕೊಳ್ಳುತ್ತಿದ್ದರು. ವಿಲ್ಸನ್ ವಿರುದ್ಧ ಭಟ್ಕಳ ಗ್ರಾಮಾಂತರ ಠಾಣೆ ಹಾಗೂ ಮಂಕಿ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಜೈಲಿಗೆ ಹೋಗಿ ಬಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್‌ಐ ರಾಜ್‌ಕುಮಾರ್, ಸದಾಶಿವ, ಶಂಕರ ನಾರಾಯಣ ಠಾಣೆ ಪಿಎಸ್‌ಐ ಶ್ರೀಧರ ನಾಯ್ಕ, ಸಿಬ್ಬಂದಿ ಸತೀಶ್, ಅನಿಲ್, ಮಂಜುನಾಥ, ಸಂತೋಷ, ಸೀತಾರಾಮ, ವಿಕ್ಟರ್, ಗುರುರಾಜ್, ಉದಯ, ರವೀಂದ್ರ, ಸುರೇಶ್‌ ಶಿವಾನಂದ್ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.