ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಗೇರಿಯಲ್ಲಿ ಇಲ್ಲ ಅಡಿಗರ ಸ್ಮಾರಕ !

ಮೊಗೇರಿಗೆ ಪ್ರಸಿದ್ಧಿ ತಂದುಕೊಟ್ಟ ಪ್ರೊ.ಎಂ.ಗೋಪಾಲಕೃಷ್ಣ ಅಡಿಗರು
Last Updated 3 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಬೈಂದೂರು: ತಾಲ್ಲೂಕಿನ ಕೆರ್ಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪುಟ್ಟ ಊರು ಮೊಗೇರಿ. ಈ ಊರಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಹೆಗ್ಗಳಿಕೆ ತಂದು ಕೊಟ್ಟವರು ನವ್ಯ ಕನ್ನಡ ಸಾಹಿತ್ಯದ ಹರಿಕಾರ ಎಂದೇ ಖ್ಯಾತರಾಗಿದ್ದ ಪ್ರೊ.ಎಂ.ಗೋಪಾಲಕೃಷ್ಣ ಅಡಿಗರು.

ಸುತ್ತಲೂ ಹಸಿರುಹೊದ್ದ ಹೊಲಗದ್ದೆಗಳನ್ನು ಹೊಂದಿರುವ ಮೊಗೇರಿ ಪರಿಸರ ಮನಮೋಹಕ. ಈ ಊರಿನ ಅಕ್ಕಪಕ್ಕದಲ್ಲಿ ಹುಟ್ಟಿ ಬೆಳೆದ ಇತರ ಸಾಹಿತಿಗಳೆಂದರೆ ಬಿ.ಎಚ್.ಶ್ರೀಧರ ಹಾಗೂ ಜನಪದ ಆಶು ಕವಯತ್ರಿ ಉಳ್ಳೂರು ಮೂಕಜ್ಜಿ.

ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ನಾಯ್ಕನಕಟ್ಟೆ (ಕೆರ್ಗಾಲು)ಯಿಂದ ಪೂರ್ವಕ್ಕೆ ಒಂದೂವರೆ ಕಿ.ಮೀ. ದೂರ ಕ್ರಮಿಸಿದರೆ ಮೊಗೇರಿ ಸಿಗುತ್ತದೆ. ಭತ್ತದ ಗದ್ದೆಗಳೇ ಹೆಚ್ಚಾಗಿರುವ ಇಲ್ಲಿನ ಬಹುತೇಕರು ಕೃಷಿಕರು. ಊರ ನಡುವೆ ಇರುವ ಶಂಕರನಾರಾಯಣ ದೇವಸ್ಥಾನ ಈ ಭಾಗದ ಆಸ್ತಿಕರ ಕಾರಣಿಕ ಸ್ಥಳವಾಗಿದೆ.

ಜೊತೆಗೆ ಇಲ್ಲೇ ಸಮೀಪದಲ್ಲಿರುವ ಗಣಪತಿ ದೇವಸ್ಥಾನವೂ ಭಕ್ತರ ನಂಬಿಕೆಯ ಕೇಂದ್ರವಾಗಿದೆ. ಬಿಜೂರು ರೈಲ್ವೆ ನಿಲ್ದಾಣವು ಮೊಗೇರಿಗೆ ಹೊಂದಿಕೊಂಡಂತೆ ಇದೆ. ಮೊಗೇರಿ ಪಂಚಾಂಗ ಜ್ಯೋತಿಷ್ಯ ಪರಂಪರೆಯಲ್ಲಿ ತನ್ನದೇ ಆದ ವಿಶೇಷ, ವಿಶಿಷ್ಟ ಸ್ಥಾನ ಪಡೆದಿದೆ.

ಮೊಗೇರಿ ಪಂಚಾಂಗ ಸೌರ ಸಿದ್ಧಾಂತ ಆಧಾರಿತವಾಗಿದ್ದು, ಸೂರ್ಯನ ಚಲನೆಯನ್ನು ಅನುಸರಿಸಿ, ಮುಂದಿನ ಸಂವತ್ಸರದ ತಿಥಿ, ಮುಹೂರ್ತ, ಗ್ರಹಣಾದಿಗಳನ್ನು ಲೆಕ್ಕ ಹಾಕಿ ರಚಿಸಲಾಗುತ್ತದೆ. ಸರಿಸುಮಾರು 121 ವರ್ಷಗಳಿಂದ ಮೊಗೇರಿಯಲ್ಲಿ ಪಂಚಾಂಗವನ್ನು ತಯಾರಿಸಿಕೊಂಡು ಬರಲಾಗುತ್ತಿದೆ ಎನ್ನುವುದು ವಿಶೇಷ.

ಹಿರಿಯ ಪತ್ರಕರ್ತರಾದ ಎಂ.ಜಯರಾಮ ಅಡಿಗರು ಇದೇ ಊರಿನವರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪ್ರಸಿದ್ಧರಾದವರು. ಇಸ್ರೋದಲ್ಲಿ ವಿಜ್ಞಾನಿಯಾಗಿದ್ದ ಎ. ಭಾಸ್ಕರ ಮಂಜರು ಸಹ ಇದೇ ಪರಿಸರದವರು.

ಮೊಗೇರಿ ಗೋಪಾಲಕೃಷ್ಣ ಅಡಿಗ:

ಆಧುನಿಕ ಕನ್ನಡ ಸಾಹಿತ್ಯದಲ್ಲಿ ತನ್ನದೇ ಛಾಪು ಮೂಡಿಸಿದ್ದ ಗೋಪಾಲಕೃಷ್ಣ ಅಡಿಗರು 1918ರ ಫೆ.18ರಂದು ಇದೇ ಮೊಗೇರಿಯಲ್ಲಿ ಜನಿಸಿದರು. ಬಾಲ್ಯ ಹಾಗೂ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರೈಸಿ, ಅನಂತರ ಬೈಂದೂರು ಮತ್ತು ಕುಂದಾಪುರದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು.

ಮೈಸೂರಿನಲ್ಲಿ ಬಿ.ಎ. ಆನರ್ಸ್ ಹಾಗೂ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದರು. ಅನಂತರ ಉಪನ್ಯಾಸಕರಾಗಿ ಹಲವು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು.

ಭಾವಗಂಗೆ, ಕಟ್ಟುವೆವು ನಾವು, ಭೂಮಿಗೀತ, ಚಂಡೆಮದ್ದಳೆ ಸೇರಿದಂತೆ 12 ಕವನ ಸಂಕಲನಗಳು, ಎರಡು ಕಾದಂಬರಿ, ಕಥಾ ಸಂಕಲನ, ವಿಮರ್ಶಾ ಲೇಖನಗಳ ಸಂಗ್ರಹ ಸೇರಿದಂತೆ ಹತ್ತಾರು ಪುಸ್ತಕಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಹಿರಿಮೆ ಅಡಿಗರದ್ದು.

ಪಂಪ ಪ್ರಶಸ್ತಿ, ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುಮಾರ ಸಮ್ಮಾನ್ ಪ್ರಶಸ್ತಿ, ಕಬೀರ್ ಸಮ್ಮಾನ್ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಮೊಗೇರಿ ಗೋಪಾಲಕೃಷ್ಣ ಅಡಿಗರ ಮುಡಿಗೇರಿವೆ.

ಹುಟ್ಟೂರಾದರೂ ಸ್ಮಾರಕ ನಿರ್ಮಾಣವಾಗಿಲ್ಲ!

ಖ್ಯಾತ ಕವಿ ಅಡಿಗರ ಹುಟ್ಟೂರಾದರೂ ಮೊಗೇರಿಯಲ್ಲಿ ಇಲ್ಲಿಯವರೆಗೂ ಅವರ ಹೆಸರಿನಲ್ಲಿ ಯಾವುದೇ ಸ್ಮಾರಕ ನಿರ್ಮಾಣವಾಗಿಲ್ಲ ಎನ್ನುವುದು ಬೇಸರದ ಸಂಗತಿ. 1992ರಲ್ಲಿ ಗೋಪಾಲಕೃಷ್ಣ ಅಡಿಗರ ನಿಧನದ ನಂತರ ಅವರ ಕುಟುಂಬಸ್ಥರು ಪ್ರಾರಂಭಿಸಿದ ಲಲಿತಾ ವಾಚನಾಲಯ ಪ್ರಾರಂಭವಾಗಿತ್ತು. ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಮನಕ್ಕೆ ಅಡಿಗರ ಸ್ಮಾರಕ ನಿರ್ಮಾಣದ ಕುರಿತು ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ನೋವು ಸ್ಥಳೀಯರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT