ಮಂಗಳವಾರ, ಫೆಬ್ರವರಿ 7, 2023
27 °C
ನಗರಸಭೆ ಸಾಮಾನ್ಯ ಸಭೆಯಲ್ಲಿ ಹೆಜಮಾಡಿ ಟೋಲ್ ಶುಲ್ಕ ಹೆಚ್ಚಳ ಚರ್ಚೆ

ದುಪ್ಪಟ್ಟು ಟೋಲ್‌: ಹೋರಾಟ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸುರತ್ಕಲ್‌ ಟೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದ ಜತೆ ವಿಲೀನಗೊಳಿಸಿ ಡಿ.1ರಿಂದ ದುಪ್ಪಟ್ಟು ಟೋಲ್ ಸಂಗ್ರಹಕ್ಕೆ ಸಿದ್ಧತೆ ನಡೆಸಲಾಗಿದ್ದು ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳು ಹೋರಾಟ ಮಾಡಬೇಕು ಎಂದು ನಗರಸಭೆ ವಿರೋಧ ಪಕ್ಷದ ನಾಯಕ ರಮೇಶ್‌ ಕಾಂಚನ್‌ ಒತ್ತಾಯಿಸಿದರು.

ಸೋಮವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸುರತ್ಕಲ್‌ನಲ್ಲಿ ವಸೂಲು ಮಾಡಲಾಗುತ್ತಿದ್ದ ಶುಲ್ಕವನ್ನು ಸೇರಿಸಿ ಹೆಜಮಾಡಿಯಲ್ಲಿ ವಸೂಲು ಮಾಡಲು ನಿರ್ಧರಿಸಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ಹೊರ ಹಾಕಿದರು.

ಶಾಸಕ ರಘುಪತಿ ಭಟ್‌ ಪ್ರತಿಕ್ರಿಯಿಸಿ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶೀಘ್ರ ಹೆದ್ದಾರಿ ಸಚಿವ ಗಡ್ಕರಿ ಅವರನ್ನು ಭೇಟಿಮಾಡಿ ಟೋಲ್ ಹೆಚ್ಚಳ ವಿಚಾರವನ್ನು ಗಮನಕ್ಕೆ ತರಲಿದ್ದಾರೆ. ದುಪ್ಪಟ್ಟು ಹಣ ಸಂಗ್ರಹ ಸುತ್ತೋಲೆ ಜಿಲ್ಲಾಡಳಿತಕ್ಕೆ ತಲುಪಿದ ಬಳಿಕ ಶಾಸಕರು ಹಾಗೂ ಟೋಲ್ ಸಂಗ್ರಹಕಾರರ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ ಎಂದು ರಘುಪತಿ ಭಟ್ ತಿಳಿಸಿದರು.

ವಾರಾಹಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಯೋಜನೆ ಕಾಮಗಾರಿ ನಡೆಯುತ್ತಿರುವ ಅಂಬಾಗಿಲು, ಕಲ್ಸಂಕ, ಸರಳೇಬೆಟ್ಟು ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಮಸ್ಯೆ ಉಂಟಾಗಿದೆ ಎಂದು ಸದಸ್ಯರು ಧನಿ ಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸುಮಿತ್ರಾ ನಾಯಕ್‌ ಶೀಘ್ರ ಕುಡ್ಸೆಂಪ್‌ ಹಿರಿಯ ಅಧಿಕಾರಿಗಳ ಜತೆ ವಿಶೇಷ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಕುಡ್ಸೆಂಪ್ ಎಂಜಿನಿಯರ್ ರಾಜಶೇಖರ್ ಸಭೆಗೆ ಮಾಹಿತಿ ನೀಡಿ ಸಾರ್ವಜನಿಕರಿಂದ 58 ದೂರು ಅರ್ಜಿಗಳು ಬಂದಿದ್ದು ಅದರಲ್ಲಿ 38 ಹಳೆಯ ಮೀಟರ್‌ಗಳಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗೆ ಸಂಬಂಧಿಸಿದ್ದಾಗಿದೆ. ಶೀಘ್ರ ಎಲ್ಲ ದೂರುಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದರು.

ದೋಷ ಪೂರಿತ ಮೀಟರ್‌ಗಳನ್ನು ಕೂಡಲೇ ಬದಲಾಯಿಸಿ. ಹೆಚ್ಚು ಬಿಲ್ ಬಂದರೆ ಯಾರು ಬಿಲ್ ಪಾವತಿಸಬೇಕು ಎಂದು ಪ್ರಶ್ನಿಸಿದ ಶಾಸಕರು ಕೂಡಲೇ ಮೀಟರ್ ಅಳವಡಿಸಿದ ಗುತ್ತಿಗೆದಾರರಿಗೆ ನೋಟಿಸ್ ಜಾರಿಗೊಳಿಸಿ. ಅಲ್ಲಿಯವರೆಗೂ ಹೆಚ್ಚುವರಿ ಬಿಲ್ ಹಾಕಬೇಡಿ ಎಂದು ಸೂಚಿಸಿದರು.

ಸಾರಿಗೆ ಪ್ರಾಧಿಕಾರ ನಿಗದಿಪಡಿಸಿದ ದರಕ್ಕಿಂತ ಬಸ್‌ಗಳಲ್ಲಿ ಹೆಚ್ಚುವರಿ ದರ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಸಭೆಯಲ್ಲಿ ಕೇಳಿಬಂತು.

ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮಾಡಿರುವ ಗೂಡಂಗಡಿಗಳ ತೆರವುಗೊಳಿಸಲಾಗುವುದು. ಹದಗೆಟ್ಟಿರುವ ಕಲ್ಸಂಕ ಗುಂಡಿಬೈಲು ರಸ್ತೆಯನ್ನು ಮೂರು ಕೋಟಿ ವೆಚ್ಚದಲ್ಲಿ ದುರಸ್ತಿಗೊಳಿಸಲಾಗುವುದು. ರೈಲು ನಿಲ್ದಾಣ ರಸ್ತೆ ಹಾಗೂ ಪರ್ಕಳ ರಸ್ತೆ ದುರಸ್ತಿಯೂ ನಡೆಯಲಿದೆ ಎಂದು ಶಾಸಕರು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು