ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಆಗಸ್ಟ್‌ನಲ್ಲಿ ಶೇ 70 ಮಳೆ ಕೊರತೆ: ಒಣಗುತ್ತಿರುವ ಭತ್ತದ ಸಸಿಗಳು

Published 29 ಆಗಸ್ಟ್ 2023, 5:34 IST
Last Updated 29 ಆಗಸ್ಟ್ 2023, 5:34 IST
ಅಕ್ಷರ ಗಾತ್ರ

ಬಾಲಚಂದ್ರ ಎಚ್‌.

ಉಡುಪಿ: ಪ್ರತಿ ಮಳೆಗಾಲದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಸುರಿಯುತ್ತಿದ್ದ ಕರಾವಳಿಯಲ್ಲಿ ಈ ವರ್ಷ ಬರದ ಛಾಯೆ ಕಾಣುತ್ತಿದೆ. ಬೇಸಗೆ ದಗೆಯನ್ನು ಮೀರಿಸುವಷ್ಟು ಬಿಸಿಲಿನ ವಾತಾವರಣವಿದ್ದು ಭತ್ತದ ಗದ್ದೆಗಳು ನೀರಿಲ್ಲದೆ ಸೊರಗುತ್ತಿವೆ. 15 ದಿನ ಮಳೆಯಾಗದಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಕೃಷಿಗೆ ಹಾನಿಯಾಗಲಿದ್ದು ಪರಿಸ್ಥಿತಿ ಗಂಭೀರವಾಗಲಿದೆ.

ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿತ್ತು. ಈ ವರ್ಷ ಆಗಸ್ಟ್‌ನಲ್ಲಿ 999 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ ಕೇವಲ 300 ಮಿ.ಮೀ ಮಾತ್ರ ಮಳೆಯಾಗಿದೆ. ಅಂದರೆ, ಬರೋಬ್ಬರಿ ಶೇ 70ರಷ್ಟು ಮಳೆ ಕೊರತೆ ಉಂಟಾಗಿರುವುದರಿಂದ ಭತ್ತದ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಉಡುಪಿ ಜಿಲ್ಲೆಯಲ್ಲಿ ಕೃಷಿಗೆ ನೀರೊದಗಿಸುವ ದೊಡ್ಡ ಅಣೆಕಟ್ಟುಗಳಾಗಲಿ, ನೀರಾವರಿ ಯೋಜನೆಗಳಾಗಲಿ ಇಲ್ಲ. ಜಿಲ್ಲೆಯ ಬಹುತೇಕ ಭತ್ತದ ಕೃಷಿ ಮಳೆಯ ಮೇಳೆ ಅವಲಂಬಿತವಾಗಿದೆ. ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿರುವ 38,000 ಹೆಕ್ಟೇರ್ ಭತ್ತದ ಕೃಷಿ ಭೂಮಿ ಸಂಪೂರ್ಣ ಮಳೆಯಾಶ್ರಿತವಾಗಿದೆ.

2023ರಲ್ಲಿ 38,000 ಹೆಕ್ಟೇರ್ ಭತ್ತ ನಾಟಿ ಗುರಿಗೆ ಪ್ರತಿಯಾಗಿ 35,508 ಹೆ‌ಕ್ಟೇರ್‌ ಬಿತ್ತನೆ ನಡೆದಿದ್ದು ಬಹುತೇಕ ಭತ್ತದ ಗದ್ದೆಗಳು ನೀರಿಲ್ಲದೆ ಒಣಗುತ್ತಿವೆ. ಮಳೆಗಾಲದಲ್ಲಿ ಮಳೆಬೀಳುವುದು ತಡವಾದಾಗ ಪರ್ಯಾಯ ನೀರಿನ ಮೂಲವಾಗಿ ರೈತರ ನೆರವಿಗೆ ಬರುತ್ತಿದ್ದ ಸಣ್ಣ ಕೆರೆಗಳು, ಹಳ್ಳ ಕೊಳ್ಳಗಳು, ಮದಗಗಳಲ್ಲಿ ನೀರಿನ ಹರಿವು ಕಡಿಮೆಯಾಗಿರುವುದು ಕೃಷಿಕರಲ್ಲಿ ಆತಂಕ ಮೂಡಿಸಿದೆ.

ಬಿಸಿಲಿನ ಪ್ರತಾಪಕ್ಕೆ ಗದ್ದೆಗಳಲ್ಲಿ ನೀರಿನ ಪಸೆ ಹಾರಿದ್ದು ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಭತ್ತದ ಸಸಿಗಳು ಒಣಗಲಾರಂಭಿಸಿದ್ದು ಕರಗಲು ಆರಂಭಿಸಿವೆ ಎನ್ನುತ್ತಾರೆ ರೈತರು.

ಈ ವರ್ಷ ಜಿಲ್ಲೆಗೆ ಮುಂಗಾರು ತಡವಾಗಿ ಪ್ರವೇಶ ಮಾಡಿದ್ದರಿಂದ ನಾಟಿ ಕಾರ್ಯಕ್ಕೆ ಹಿನ್ನೆಡೆಯಾಗಿತ್ತು. ಪ್ರತಿವರ್ಷ ಮೇನಲ್ಲಿ ಭೂಮಿ ಹದಗೊಳಿಸಿ ನೇಜಿ ಸಿದ್ಧಪಡಿಸಿ ಜೂನ್‌ನಲ್ಲಿ ನಾಟಿ ಮಾಡುತ್ತಿದ್ದ ರೈತರು ಈ ವರ್ಷ ಜುಲೈನಲ್ಲಿ ಭತ್ತದ ನಾಟಿ ಮಾಡಿದ್ದರು.

ಸದ್ಯ ನಾಟಿಯಾಗಿ ಒಂದೂವರೆ ತಿಂಗಳು ಕಳೆದಿದ್ದು ಭತ್ತದ ಸಸಿಗಳ ಬೆಳವಣಿಗೆಗೆ ಹಾಗೂ ತೆನೆಗಟ್ಟುವ ಹಂತದಲ್ಲಿ ಹೆಚ್ಚಿನ ನೀರಿನ ಅಗತ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿಯೇ ನೀರಿನ ಕೊರತೆ ಉಂಟಾಗಿರುವುದರಿಂದ ಇಳುವರಿ ಕುಸಿತವಾಗುವ ಆತಂಕವಿದೆ ಎನ್ನುತ್ತಾರೆ ರೈತರು.

ಮಳೆ ಕೊರತೆ:

ಮೇ ತಿಂಗಳಲ್ಲಿ 164 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 45 ಮಿ.ಮೀ ಮಳೆಯಾಗಿದ್ದು ಶೇ 73 ಮಳೆ ಕೊರತೆಯಾದರೆ, ಜೂನ್‌ನಲ್ಲಿ 1,106 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 519 ಮಿ.ಮೀ ಮಳೆ ಸುರಿದಿದ್ದು ಶೇ 53ರಷ್ಟು ಕೊರತೆಯಾಗಿದೆ.

ಜೂನ್ 1ರಿಂದ ಆಗಸ್ಟ್‌ 28ರವರೆಗೆ ಜಿಲ್ಲೆಯಲ್ಲಿ 3,553 ಮಿ.ಮೀ ವಾಡಿಕೆ ಮಳೆಗೆ 2.625 ಮಿ.ಮೀ, ಮಳೆಯಾಗಿದ್ದು ಶೇ 26 ರಷ್ಟು ಮಳೆ ಕೊರತೆಯಾಗಿದೆ. ಪ್ರಸಕ್ತ ವರ್ಷ (2023) 3,754 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 2,678 ಮಿ.ಮೀ ಮಳೆ ಬಿದ್ದಿದ್ದು ಶೇ 29ರಷ್ಟು ಮಳೆ ಕೊರತೆಯಾಗಿದೆ.

ಈ ವರ್ಷ ಜುಲೈನಲ್ಲಿ ಮಾತ್ರ ವಾಡಿಕೆ ಮಳೆ 1,448 ಮಿ.ಮೀಗೆ ಪ್ರತಿಯಾಗಿ 1,805 ಮಿ.ಮೀ ಮಳೆಯಾಗಿದ್ದು ಉಳಿದ ಎಲ್ಲ ತಿಂಗಳಲ್ಲೂ ಕಡಿಮೆ ಮಳೆ ಬಿದ್ದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ.

ಭತ್ತದ ಬೆಳೆ ಉಳಿಸಿಕೊಳ್ಳಲು ಕೆರೆಯಿಂದ ಪಂಪ್‌ಸೆಟ್‌ ಮೂಲಕ ನೀರು ಹಾಯಿಸಲಾಗುತ್ತಿದೆ. ಮಳೆ ಬಾರದಿದ್ದರೆ ಬೆಳೆ ಸಂಪೂರ್ಣ ನಾಶವಾಗಲಿದೆ.
–ವಿಶ್ವನಾಥ್‌ ರೈತ
ಪರ್ಯಾಯ ನೀರಿನ ಮೂಲಗಳಾಗಿದ್ದ ಕೆರೆಗಳು ಹಳ್ಳಗಳು ಈ ವರ್ಷ ಬರಿದಾಗಿರುವುದು ಆತಂಕ ಸೃಷ್ಟಿಸಿದೆ. ವಾರದಲ್ಲಿ ಮಳೆ ಬಂದರೆ ಮಾತ್ರ ಬೆಳೆ ಉಳಿಯುತ್ತದೆ.
–ಆನಂದ್‌ ಪೂಜಾರಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT