ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ತೋಡುಗಳಿಗಿಲ್ಲ ತಡೆಗೋಡೆ: ಎಚ್ಚರ ತಪ್ಪಿದರೆ ಕಂಟಕ

ಇಂದ್ರಾಣಿ ತೋಡಿಗಿಲ್ಲ ಸುರಕ್ಷತೆ; ಕಾಲುಸಂಕಗಳ ದುಃಸ್ಥಿತಿಗೆ ಜನರು ಹೈರಾಣ
Published 3 ಜೂನ್ 2024, 7:30 IST
Last Updated 3 ಜೂನ್ 2024, 7:30 IST
ಅಕ್ಷರ ಗಾತ್ರ

ಉಡುಪಿ: ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹರಿಯುವ ನದಿ, ತೋಡು, ಹಳ್ಳಗಳಿಗೆ ಸುರಕ್ಷಿತ ತಡೆಗೋಡೆ ಇಲ್ಲದ ಪರಿಣಾಮ ಈ ಬಾರಿಯ ಮಳೆಗಾಲ ಹೆಚ್ಚು ಅಪಾಯಕಾರಿಯಾಗುವ ಆತಂಕ ಕಾಡುತ್ತಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ತೋಡುಗಳು ಜನರ ಜೀವಕ್ಕೆ ಕಂಟಕವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಪ್ರತಿ ಮಳೆಗಾಲದ ಸಂದರ್ಭ ಜೀವಗಳು ಬಲಿಯಾಗುತ್ತಿದ್ದರೂ ಆಡಳಿತ ವ್ಯವಸ್ಥೆ ಸಮಸ್ಯೆಗೆ ಪರಿಹಾರ ಕಲ್ಪಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

2023ರ ಜೂನ್ 29ರಂದು ಮಠದಬೆಟ್ಟು ಬಳಿಯ ತೋಡಿಗೆ ಬಿದ್ದು ಹೋಟೆಲ್ ನೌಕರ ಸತೀಶ್ ಎಂಬುವರು ಮೃತಪಟ್ಟಿದ್ದರು. ಇದಾದ ಕೆಲವೇ ದಿನಗಳಲ್ಲಿ ಜುಲೈ 1ರಂದು 76-ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆಯ ನಾಗಬನದ ಬಳಿ ಹರಿಯುವ ತೋಡಿಗೆ ಬಿದ್ದು ಸೋಮಪ್ಪ ರಾಥೋಡ್‌ ಎಂಬುವರು ಮೃತಪಟ್ಟಿದ್ದರು.

2020ರ ಆಗಸ್ಟ್‌ 21ರಲ್ಲೂ ಬನ್ನಂಜೆ ಗರೋಡಿ ರಸ್ತೆಯ ನಾಗಬ್ರಹ್ಮಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಕಿರುಸೇತುವೆ ತೋಡಿಗೆ ಬಿದ್ದು ಹನುಮಪ್ಪ ನಿಂಬಲಗುಂದಿ (32) ಮೃತಪಟ್ಟಿದ್ದರು. ಹೀಗೆ ಪ್ರತಿವರ್ಷ ಅಪಾಯಕಾರಿ ತೋಡು, ಹಳ್ಳಗಳಿಗೆ ಬಿದ್ದು ಜೀವಗಳು ಬಲಿಯಾಗುತ್ತಿದ್ದರೂ ಸುರಕ್ಷಿತ ತಡೆಗೋಡೆ ನಿರ್ಮಾಣ ಮಾಡಲಾಗಿಲ್ಲ.

ಉಡುಪಿ ನಗರದ ಹೃದಯ ಭಾಗದಲ್ಲಿ ಹರಿಯುವ ಇಂದ್ರಾಣಿ ತೋಡಿಗೆ (ರಾಜಕಾಲುವೆ) ಸುರಕ್ಷಿತ ತಡೆಗೋಡೆ ಇಲ್ಲದೆ ಕಲ್ಸಂಕ, ಮಠದಬೆಟ್ಟು, ನಿಟ್ಟೂರು, ಮೂಡನಿಡಂಬೂರು, ಬೈಲಕೆರೆ, ಗುಂಡಿಬೈಲು ಪ್ರದೇಶದಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಸಹಿತ ಸಾರ್ವಜನಿಕರು ಜೀವಭಯದಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷ್ಣಮಠಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವ ಕಲ್ಸಂಕ ರಸ್ತೆಯ ಎರಡೂ ಬದಿಗಳಲ್ಲಿ ಇಂದ್ರಾಣಿ ತೋಡು ಹರಿಯುತ್ತಿದ್ದು ಇದಕ್ಕೆ ತಡೆಗೋಡೆ ನಿರ್ಮಾಣ ಮಾಡಿಲ್ಲ. ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿ ವಾಹನಗಳು, ಸ್ಥಳೀಯ ಸಾರ್ವಜನಿಕರ ವಾಹನಗಳು ಸಂಚರಿಸುತ್ತವೆ. ಶಾಲಾ–ಕಾಲೇಜು ವಿದ್ಯಾರ್ಥಿಗಳೂ ಇದೇ ರಸ್ತೆಯಲ್ಲಿ ಓಡಾಡುತ್ತಾರೆ.

ಅಪಾಯಕಾರಿ ತಿರುವುಗಳಿಂದ ಕೂಡಿರುವ ಈ ರಸ್ತೆಯಲ್ಲಿ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಸುಮಾರು 25 ಅಡಿಗೂ ಆಳದ ತೋಡಿಗೆ ಬೀಳಬೇಕಾಗುತ್ತದೆ. ಮಳೆಗಾಲದಲ್ಲಿ ತುಂಬಿ ಹರಿಯುವ ತೋಡು ಸವಾರರಲ್ಲಿ ಭಯ ಹುಟ್ಟಿಸುತ್ತದೆ. ರಾತ್ರಿಯ ಹೊತ್ತು ದಾರಿದೀ‍ಪ ಕೆಟ್ಟರಂತೂ ವಾಹನಗಳ ಸವಾರಿ ಅತ್ಯಂತ ಅಪಾಯಕಾರಿಯಾಗಿ ಕೂಡಿರುತ್ತದೆ. ಅವಘಡಗಳು ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಸೂಕ್ತ ತಡೆಗೋಡೆ ನಿರ್ಮಾಣ ಮಾಡಬೇಕಿದೆ ಎನ್ನುತ್ತಾರೆ ಪ್ರವಾಸಿಗರಾದ ಶ್ರೀನಿವಾಸ್‌.

ಬೈಂದೂರಿನಲ್ಲಿ ಕಾಲುಸಂಕ ಸಂಕಟ: ಮಳೆಗಾಲ ಬಂದರೆ ಬೈಂದೂರು ತಾಲ್ಲೂಕಿನ ಗ್ರಾಮೀಣ ಭಾಗದ ಜನರಿಗೆ ಆತಂಕ ಶುರುವಾಗುತ್ತದೆ. ಸಾರ್ವಜನಿಕರು ನಿತ್ಯದ ಕೆಲಸ ಕಾರ್ಯಗಳಿಗೆ ಪಟ್ಟಣ ತಲುಪಲು ಹಾಗೂ ಶಾಲಾ–ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಸಂಪರ್ಕ ಸಾಧಿಸುವುದೇ ಬಹುದೊಡ್ಡ ಸವಾಲಾಗಿದೆ.

ಬೈಂದೂರು ತಾಲ್ಲೂಕಿನಲ್ಲಿ ದಶಕಗಳಿಂದ ಕಾಲಸಂಕ ಸಮಸ್ಯೆ ಜನರ ಜೀವ ಹಿಂಡುತ್ತಿದೆ. ಯಡ್ತರೆ ಗ್ರಾಮದ ಗಂಗನಾಡು, ನಿರೋಡಿ, ಯಳಜಿತ್ ಗ್ರಾಮದ ಕಡಕೋಡು, ತಗ್ಗರ್ಸೆ ಗ್ರಾಮದ ಎತ್ತಾಬೇರು-ತುಂಬೆಗದ್ದೆ, ಕಾಲ್ತೋಡು ಭಾಗದ ಹೊಸೇರಿ, ಸಾಂತೇರಿ, ವಸ್ರೆ, ಬ್ಯಾಟಿಯಾಣಿ, ಮದುಕೊಡ್ಲು, ಚಪ್ಪರಕಿ, ಕಪ್ಪಾಡಿ, ಮುರೂರು, ಗುಂಡುಬಾಣ ಕಡೆಗಳಲ್ಲಿ ಕಾಲುಸಂಕದ ಅಗತ್ಯ ಇದೆ. 

ಈ ಗ್ರಾಮಗಳಲ್ಲಿ ನದಿಯ ಮೇಲೆ ಮರದ ದಿಮ್ಮಿಗಳಿಂದ ನಿರ್ಮಿಸಿದ ತಾತ್ಕಾಲಿಕ ಕಾಲುಸಂಕದ ಮೇಲೆ ಸಾರ್ವಜನಿಕರು, ವಿದ್ಯಾರ್ಥಿಗಳು ಓಡಾಡಬೇಕು. ಈ ಮಾರ್ಗ ಬಿಟ್ಟರೆ ಹತ್ತಾರು ಕಿ.ಮೀ ಸುತ್ತು ಬಳಸಿ ಪಟ್ಟಣ ತಲುಪಬೇಕಾಗಿದೆ. ಮಳೆಗಾಲದಲ್ಲಿ ಶಾಲೆಗೆ ಹೋಗುವ ಮಕ್ಕಳು ಮರಳಿ ಮನೆಗೆ ಬರುವವರೆಗೆ ಪಾಲಕರು ಆತಂಕದಿಂದ ದಿನ ಕಳೆಯಬೇಕಾಗಿದೆ.

2022ರ ಆಗಸ್ಟ್ 8ರಂದು ತಾಲ್ಲೂಕಿನ ಕಾಲ್ತೋಡು ಗ್ರಾಮದ 7 ವರ್ಷದ ಪುಟ್ಟ ಬಾಲಕಿ ಸನ್ನಿಧಿ ಶಾಲೆಯಿಂದ ಮನೆಗೆ ಹಿಂದಿರುಗುವಾಗ ಮರದ ಸಂಕದಿಂದ ಬಿದ್ದು ಕೊಚ್ಚಿಹೋಗಿ ಮೃತಪಟ್ಟಿದ್ದರು. ಒಂದೆರಡು ದಿನಗಳ ಬಳಿಕ ಬಾಲಕಿಯ ಶವ ದೊರೆತಿತ್ತು.

ಕಾಲುಸಂಕ ನಿರ್ಮಾಣಕ್ಕೆ ಸರ್ಕಾರದ ಮುಂದೆ ಗೋಗರೆದರೂ ಸ್ಪಂದನ ಸಿಗದ ಪರಿಣಾಮ ತಾಲ್ಲೂಕು ಹಲವು ಭಾಗಗಳಲ್ಲಿ ಗ್ರಾಮಸ್ಥರೇ ಶ್ರಮದಾನ ಹಾಗೂ ಹಣ ಸಂಗ್ರಹಿಸಿ ಕಾಲುಸಂಕ ನಿರ್ಮಾಣ ಮಾಡಿಕೊಂಡಿದ್ದಾರೆ. ಸಾತೇರಿ, ಹೊಸೇರಿಯಲ್ಲಿ ಸ್ಥಳೀಯರೇ ಶ್ರಮದಾನದ ಮೂಲಕ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಮರದ ದಿಮ್ಮಿಗಳಿಂದ ನಿರ್ಮಿಸಿದ ತಾತ್ಕಾಲಿಕ ಕಾಲುಸಂಕ ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಕಾರ್ಕಳ ತಾಲ್ಲೂಕಿನ ಮಾಳ ಮಲ್ಲಾರ್ ಎಂಬಲ್ಲಿ ಮಳೆಗಾಲದಲ್ಲಿ ಆವರಣವಿಲ್ಲದ ಸಂಕದ ಮೇಲೆ ನೀರು ಹಾದು ಹೋಗುತ್ತಿದ್ದು ಈ ಭಾಗದಲ್ಲಿ ನಡೆದಾಡುವವರಿಗೆ ಅಪಾಯಕಾರಿಯಾಗಿದೆ. ತಾಲ್ಲೂಕಿನ ದುರ್ಗಾ-ತೆಳ್ಳಾರನ್ನು ಸಂಪರ್ಕಿಸುವ ಪ್ರಮುಖ ಕಿಂಡಿ ಅಣೆಕಟ್ಟು ಸೇತುವೆ ಸುರಕ್ಷಿತ ತಡೆಗೋಡೆಗಳಿಲ್ಲದೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಪುರಸಭಾ ವ್ಯಾಪ್ತಿಯ 11ನೇ ವಾರ್ಡ್ ಅಯೋಧ್ಯಾ ನಗರ ಕಾವೇರಡ್ಕ ಮತ್ತು 12ನೇ ವಾರ್ಡ ಜೋಗುಲಬೆಟ್ಟು ಕೂಡು ರಸ್ತೆಯಲ್ಲಿರುವ ತಾಲ್ಲೂಕಿನ ದುರ್ಗಾ-ತೆಳ್ಳಾರನ್ನು ಸಂಪರ್ಕಿಸುವ ಪ್ರಮುಖ ಕಿಂಡಿ ಅಣೆಕಟ್ಟು ಸೇತುವೆಗೆ ತಡೆಗೋಡೆ ಇಲ್ಲ. ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣಗೊಂಡಿರುವ ಈ ಸೇತುವೆ ತೆಳ್ಳಾರು, ದುರ್ಗಾ, ಪುರಸಭೆ ನಗರವನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ಸೇತುವೆಯಾಗಿದೆ.

ಕಾವೇರಡ್ಕ ಗ್ರಾಮಸ್ಥರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ದಿನ ಈ ಸೇತುವೆಯ ಮೂಲಕ ಸಾಗಬೇಕಾಗಿದೆ. ಆಟೊ ರಿಕ್ಷಾದವರು, ದ್ವಿಚಕ್ರ ವಾಹನ ಸವಾರರು ಸ್ವಲ್ಪ ನಿಯಂತ್ರಣ ಕಳೆದುಕೊಂಡರೂ ಪ್ರಾಣಾಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ.

ಹೆಬ್ರಿ ಹಾಗೂ ಕುಂದಾಪುರ ತಾಲ್ಲೂಕಿನಲ್ಲೂ ಕಾಲುಸಂಕ ಸಮಸ್ಯೆಗಳಿದ್ದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಅಗತ್ಯ ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಮೂಡನಿಡಂಬೂರು ವ್ಯಾಪ್ತಿಯ ಮಠದಬೆಟ್ಟು ಬಳಿ ಹರಿಯುವ ತೋಡಿಗೆ ಸುರಕ್ಷತಾ ತಡೆಗೋಡೆ ಇಲ್ಲದಿರುವುದು
ಮೂಡನಿಡಂಬೂರು ವ್ಯಾಪ್ತಿಯ ಮಠದಬೆಟ್ಟು ಬಳಿ ಹರಿಯುವ ತೋಡಿಗೆ ಸುರಕ್ಷತಾ ತಡೆಗೋಡೆ ಇಲ್ಲದಿರುವುದು

- ಕಾಲುಸಂಕಗಳ ನಿರ್ಮಾಣಕ್ಕೆ ಯೋಜನೆ ಸಮೃದ್ಧ ಬೈಂದೂರು ಟ್ರಸ್ಟ್ ಮತ್ತು ಬೆಂಗಳೂರು ಮೂಲದ ಅರುಣಾಚಲಂ ಟ್ರಸ್ಟ್ ಸಹಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಹಳೆಯ ಲಾರಿ ಬಸ್ ಇನ್ನಿತರ ವಾಹನಗಳ ಚಾಸಿಸ್ ಬಳಸಿ ಕಡಿಮೆ ಖರ್ಚಿನಲ್ಲಿ ಕಾಲುಸಂಕಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ತಾಲ್ಲೂಕಿನ 50 ಕಡೆಗಳಲ್ಲಿ ಕಾಲುಸಂಕಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು ಪ್ರಾಯೋಗಿಕವಾಗಿ ಎಡಮೊಗೆಯ ರಾಂಪೈಜೆಡ್ಡು ವಂಡ್ಸೆಯ ಅಬ್ಬಿ ಹಾಗೂ ತೊಂಬಟ್ಟು ಕಬ್ಬಿನಾಲೆ ಬಳಿ ಮೂರು ಕಡೆ ಕಾಮಗಾರಿ ನಡೆಯಲಿದೆ. ಈ ಯೋಜನೆಯಡಿ 35ರಿಂದ 72ಅಡಿ ಉದ್ದದ ಕಾಲುಸಂಕ ನಿರ್ಮಿಸಬಹುದಾಗಿದ್ದು ಇದಕ್ಕೆ ತಲಾ ಅಂದಾಜು ₹2 ಲಕ್ಷ ವ್ಯಯವಾಗಲಿದೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ವರ್ಷಗಳ ಬಳಿಕ ಕಿರು ಸಂಕ ನಿರ್ಮಾಣ ಕಾಲುಸಂಕಗಳ ನಿರ್ಮಾಣಕ್ಕೆ ಹಲವು ಭಾರಿ ಜನಪ್ರತಿನಿಧಿಗಳಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿರಲಿಲ್ಲ. ಕಳೆದ ಬಾರಿ ಮಳೆಯ ನೀರಿನ ರಭಸಕ್ಕೆ ಕಾಲುಸಂಕ ಕೊಚ್ಚಿ ಹೋಗಿದ್ದು ಜಿಲ್ಲಾಧಿಕಾರಿ ಕಿರು ಸೇತುವೆ ನಿರ್ಮಾಣಕ್ಕೆ ಆದೇಶ ನೀಡಿದ್ದರಿಂದ ಈಗ ಕಿರು ಸೇತುವೆ ನಿರ್ಮಾಣಗೊಂಡಿದೆ ಎಂದು ನೀರೋಡಿ ಲಕ್ಷ್ಮಣ ಮರಾಠಿ ಹೇಳಿದರು.

ಸರ್ಕಾರಕ್ಕೆ ಪ್ರಸ್ತಾವ: ಸಿಇಒ ಹಿಂದೆ ನರೇಗಾ ಅನುದಾನ ಬಳಸಿಕೊಂಡು ಕಾಲುಸಂಕಗಳ ನಿರ್ಮಾಣಕ್ಕೆ ಅವಕಾಶವಿತ್ತು. ಆದರೆ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ ನರೇಗಾ ಅನುದಾನ ಬಳಸುವಂತಿಲ್ಲ. ಹಾಗಾಗಿ ಗ್ರಾಮೀಣ ಭಾಗಗಳಲ್ಲಿ ಕಾಲುಸಂಕಗಳ ನಿರ್ಮಾಣ ಕಾರ್ಯಕ್ಕೆ ಹಿನ್ನಡೆಯಾಗಿದೆ. ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ಬಳಕೆ ಮಾಡಿಕೊಂಡು ಕಾಲುಸಂಕಗಳ ನಿರ್ಮಾಣಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮತಿ ಸಿಕ್ಕರೆ ಜಿಲ್ಲೆಯಲ್ಲಿ ಅಗತ್ಯವಿರುವೆಡೆ ಕಾಲುಸಂಕಗಳ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT