ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತಿಗೆ ಶ್ರೀ ಚತುರ್ಥ ಪರ್ಯಾಯ

Published 17 ಜನವರಿ 2024, 21:35 IST
Last Updated 17 ಜನವರಿ 2024, 21:35 IST
ಅಕ್ಷರ ಗಾತ್ರ

ಉಡುಪಿ: ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಆಚಾರ್ಯ ಮಧ್ವರು 12ನೇ ಶತಮಾನದಲ್ಲಿ ಕೃಷ್ಣನ ಪೂಜಾ ಕೈಂಕರ್ಯಕ್ಕಾಗಿ ಅಷ್ಠ ಯತಿಗಳನ್ನು ನೇಮಿಸಿ ಆರಂಭಿಸಿದ ಪರ್ಯಾಯ ಪರಂಪರೆ ಶತಮಾನಗಳಿಂದಲೂ ಅನೂಚಾನವಾಗಿ ನಡೆದುಕೊಂಡುಬಂದಿದೆ.

ಹಿಂದೆ 2 ತಿಂಗಳಿಗೊಮ್ಮೆ ನಡೆಯುತ್ತಿದ್ದ ಪರ್ಯಾಯವನ್ನು ವಾದಿರಾಜ ಆಚಾರ್ಯರು 2 ವರ್ಷಗಳಿಗೆ ವಿಸ್ತರಿಸಿದ್ದು ಅಷ್ಠಮಠಗಳ ಯತಿಗಳು ಸರದಿಯ ಪ್ರಕಾರ ಗೊಂದಲಗಳಿಲ್ಲದ ಪರ್ಯಾಯ ನಡೆಸಿಕೊಂಡು ಬರುತ್ತಿರುವುದು ವಿಶೇಷ.

ಉಡುಪಿಯ ಪರ್ಯಾಯ ಇತಿಹಾಸ ಬಹಳ ಕುತೂಹಲಕರ. ಪಲಿಮಾರು ಮಠದಿಂದ ಆರಂಭವಾಗುವ ಪರ್ಯಾಯದ ಚಕ್ರ ಪೇಜಾವರ ಮಠದಲ್ಲಿ ಕೊನೆಯಾಗುತ್ತದೆ. ಮಧ್ವಾಚಾರ್ಯರಿಂದ ಸನ್ಯಾಸ ದೀಕ್ಷೆ ಪಡೆದ ಯತಿಗಳ ಅನುಕ್ರಮದಲ್ಲಿಯೇ ಇಂದಿಗೂ ಪರ್ಯಾಯ ನಡೆಯುತ್ತಿದೆ.

ಪಲಿಮಾರು ಮಠದ ಹೃಷಿಕೇಶ ತೀರ್ಥರು, ಅದಮಾರು ಮಠದ ನರಹರಿ ತೀರ್ಥರು, ಕೃಷ್ಣಾಪುರ ಮಠದ ಜನಾರ್ದನ ತೀರ್ಥರು, ಪುತ್ತಿಗೆ ಮಠದ ಉಪೇಂದ್ರ ತೀರ್ಥರು, ಶೀರೂರು ಮಠದ ವಾಮನ ತೀರ್ಥರು, ಸೋದೆ ಮಠದ ವಿಷ್ಣುತೀರ್ಥರು, ಕಾಣಿಯೂರು ಮಠದ ರಾಮ ತೀರ್ಥರು, ಪೇಜಾವರ ಮಠದ ಅಧೋಕ್ಷಜ ತೀರ್ಥರು ಮೊದಲ ಪರ್ಯಾಯ ನಡೆಸಿದ ಯತಿಗಳು.

ಪುತ್ತಿಗೆ ಮಠದ ಪರ್ಯಾಯ:‌

ಸರದಿಯಂತೆ ಈ ಬಾರಿಯ ಪರ್ಯಾಯ ಅಧಿಕಾರ ಪುತ್ತಿಗೆ ಮಠದ್ದಾಗಿದ್ದು ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಕೃಷ್ಣನ ಪೂಜಾಧಿಕಾರವನ್ನು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳಿಗೆ ಬಿಟ್ಟುಕೊಟ್ಟರು.

ಪುತ್ತಿಗೆ ಮಠದ ಯತಿ ಪರಂಪರೆಯಲ್ಲಿ ಸುಗುಣೇಂದ್ರ ತೀರ್ಥರು 33ನೇ ಯತಿಗಳು. 1974ರಲ್ಲಿ ಸುಗುಣೇಂದ್ರ ತೀರ್ಥರು ಆಶ್ರಮ ಸ್ವೀಕಾರ ಮಾಡಿದಾಗ ಅವರಿಗೆ 13 ವರ್ಷ. ಸನ್ಯಾಸ ಸ್ವೀಕರಿಸಿದ ಎರಡೇ ವರ್ಷಕ್ಕೆ ಅಂದರೆ 1976ರಲ್ಲಿ ಮೊದಲ ಪರ್ಯಾಯವನ್ನು ಯಶಸ್ವಿಯಾಗಿ ಮುಗಿಸಿದವರು ಸುಗುಣೇಂದ್ರ ತೀರ್ಥರು.

ಬಳಿಕ 1992ರಿಂದ 1994ರವರೆಗೆ ದ್ವಿತೀಯ ಪರ್ಯಾಯ, 2008ರಿಂದ 2010ರವರೆಗೆ ತೃತೀಯ ಪರ್ಯಾಯ ನಡೆಸಿರುವ ಪುತ್ತಿಗೆ ಶ್ರೀಗಳಿಗೆ ಸದ್ಯ ನಾಲ್ಕನೇ ಪರ್ಯಾಯ. ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಿಂದಿನ 3 ಪರ್ಯಾಯಗಳಲ್ಲಿ ಭಕ್ತರ ಮನಸ್ಸಿನಲ್ಲಿ ಉಳಿಯುವಂತಹ ಕಾರ್ಯಗಳನ್ನು ಮಾಡಿದ್ದಾರೆ.

ಪುತ್ತಿಗೆ ಪರ್ಯಾಯದಲ್ಲಿ ನಡೆದ ಕಾರ್ಯ:

ಉಡುಪಿಯ ಸ್ವಾಗತ ಗೋಪುರ ನಿರ್ಮಾಣ, ಗೀತಾಮಂದಿರ ಸ್ಥಾಪನೆ, ಶ್ರೀಕೃಷ್ಣ ಗೀತಾ ಮಹಾದ್ವಾರ, ಕನಕ ನವರತ್ನ ರಥ, ಅನ್ನಬ್ರಹ್ಮ ಭೋಜನ ಸಂಕೀರ್ಣ, ಅನ್ನಧರ್ಮ ಭೋಜನ ಶಾಲೆ, ಇಂದ್ರ ಪ್ರಸ್ಥ ವಸತಿಗೃಹ, ಕೃಷ್ಣ ದರ್ಶನ ಸರತಿ ಮಾರ್ಗ, ಸುಗುಣ ಪ್ರೆಸ್‌, ಐದು ಗುರುಕುಲಗಳ ಸ್ಥಾಪನೆ, ಗೋಶಾಳೆಗಳ ಅಭಿವೃದ್ಧಿ, ಪಾಡಿಗಾರು ವಿದ್ಯಾಪೀಠ ಸ್ಥಾಪನೆ, ಹಿಡಿಯಡ್ಕದ ಪುತ್ತಿಗೆ ವಿದ್ಯಾಪೀಠ ಸ್ಥಾಪನೆ, ಕೆಮುಂಡೇಲು ಶಾಲೆ ನಿರ್ಮಾಣ ಸುಗುಣೇಂದ್ರ ತೀರ್ಥರ ಪರ್ಯಾಯ ಅವಧಿಯಲ್ಲಿ ನಡೆದ ಕಾರ್ಯಗಳು.

ದೇಶದೊಳಗೆ ಮಾತ್ರವಲ್ಲ ವಿದೇಶಗಳಲ್ಲೂ ಕೃಷ್ಣ ಮಂದಿರ ಹಾಗೂ ಮಠಗಳನ್ನು ಸ್ಥಾಪಿಸಿದ ಕೀರ್ತಿ ಸುಗುಣೇಂದ್ರ ತೀರ್ಥರಿಗೆ ಸಲ್ಲುತ್ತದೆ. ಅಮೆರಿಕಾದ ನ್ಯೂರ್ಜೆರ್ಸಿ, ಫಿನಿಕ್ಸ್‌, ಲಾಸ್‌ ಏಂಜಲಿಸ್‌, ಹೂಸ್ಟನ್‌, ಅಟ್ಲಾಂಟ, ಸಾನ್‌ ಓಸ್‌, ಡಲಾಸ್‌, ರಾಲೆ, ಶಿಕಾಗೋ, ಸಿಯಾಟಲ್‌ನಲ್ಲಿ ಕೃಷ್ಣ ವೃಂದಾವನ ಕ್ಷೇತ್ರಗಳನ್ನು ನಿರ್ಮಿಸಿದ್ದಾರೆ. ಇಂಗ್ಲೆಂಡ್‌ನ ಲಂಡನ್‌ನ ವೆಂಬ್ಲಿ, ಕೆನಟಾದ ಟೊರಾಂಟೊ, ಆಸ್ಟ್ರೇಲಿಯಾದ ಮೆಲ್ಬರ್ನ್‌, ಸಿಡ್ನಿ ನಗರಗಳಲ್ಲೂ ಕೃಷ್ಣ ವೃಂದಾವನ ಕ್ಷೇತ್ರಗಳಿದ್ದು ವಿಶ್ವದೆಲ್ಲೆಡೆ ಕೃಷ್ಣನ ಮಂದಿರ ನಿರ್ಮಾಣ ಮಾಡುವ ಆಶಯ ಪುತ್ತಿಗೆ ಶ್ರೀಗಳದ್ದು.

ಸುಗುಣೇಂದ್ರ ತೀರ್ಥರ ವಿವರ

ಜನನ;1961

ಹುಟ್ಟೂರು;ಕಾಪು ತಾಲ್ಲೂಕಿನ ಎಲ್ಲೂರು

ಪೂರ್ವಾಶ್ರಮದ ಹೆಸರು;ಜಯವದನ ಆಚಾರ್ಯ

ಆಶ್ರಮ ಸ್ವೀಕಾರ; 8–8–1974

ಆಶ್ರಮ ಗುರುಗಳು;ಪುತ್ತಿಗೆ ಮಠದ ಸುಜ್ಞಾನೇಂದ್ರ ತೀರ್ಥ ಸ್ವಾಮೀಜಿ

ವಿದ್ಯಾ ಗುರುಗಳು;ವಿದ್ಯಾಮಾನ್ಯ ತೀರ್ಥ ಸ್ವಾಮೀಜಿ

ಅಧ್ಯಯನ: ವೇದ,ವೇದಾಂತ, ಸುಧಾಂತಗ್ರಂಥಗಳ ಅಧ್ಯಯನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT