ಮಂಗಳವಾರ, ಆಗಸ್ಟ್ 3, 2021
26 °C
ಮನೆಯಿಂದ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಿಗೆ ರವಾನೆ: ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆ

ಉಡುಪಿ: ಪರೀಕ್ಷಾ ಕೇಂದ್ರ ಸೋಂಕು ಮುಕ್ತ, ಆತಂಕ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ವಿರುದ್ಧ ಎಪಿಡೆಮಿಕ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಿಗೆ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಹೋಂ ಕ್ವಾರಂಟೈನ್ ನಿಯಮದ ಅನುಷ್ಠಾನ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಹೊರ ರಾಜ್ಯಗಳಿಂದ ಬಂದು 14 ದಿನ ಹೋಂ ಕ್ವಾರಂಟೈನ್‌ನಲ್ಲಿರುವವರ ಮೇಲೆ ನಿಗಾ ಇಡಲು ಗ್ರಾಮೀಣ ಭಾಗದಲ್ಲಿ ಕೊರೊನಾ ಟಾಸ್ಕ್‌ಫೋರ್ಸ್‌ ಹಾಗೂ ನಗರ ಪ್ರದೇಶದಲ್ಲಿ ವಾರ್ಡ್‌ವಾರು ಕಮಿಟಿ ರಚಿಸಲಾಗಿದೆ. ಮೇಲುಸ್ತುವಾರಿಗೆ ಫ್ಲೈಯಿಂಗ್ ಸ್ಕ್ವಾಡ್‌ ನೇಮಿಸಲಾಗಿದೆ. ಕಂದಾಯ, ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಪ್ರತಿದಿನ ಸೀಲ್‌ಡೌನ್‌ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದರು.

ಹೋಂ ಕ್ವಾರಂಟೈನ್‌ ಸೀಲ್‌ ಇರುವ ವ್ಯಕ್ತಿ ಸಾರ್ವಜನಿಕ ಸ್ಥಳಗಳಿಗೆ ಭೇಟಿನೀಡಿದರೆ ತಕ್ಷಣ 100ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಮನೆಬಿಟ್ಟು ಹೊರಬಂದರೂ ಅಕ್ಕಪಕ್ಕದ ಮನೆಯವರು ಪೊಲೀಸ್ ಠಾಣೆಗೆ ತಿಳಿಸಬೇಕು ಎಂದರು.

ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವವರು ಸೇವಾ ಸಿಂಧು ಆ್ಯಪ್‌ನಲ್ಲಿ ನೋಂದಣಿ ಮಾಡಿಸಿಯೇ ಬರಬೇಕು. ಮುಂಬೈ ಹೊರತುಪಡಿಸಿ ಇತರೆಡೆಗಳಿಂದ ಬರುವವರಿಗೆ ತಕ್ಷಣಕ್ಕೆ ಅನುಮತಿ ಸಿಗಲಿದೆ. ಮುಂಬೈನಿಂದ ಬರುವವರ ಅರ್ಜಿಗಳನ್ನು ಜಿಲ್ಲಾಡಳಿತ ಪರಿಶೀಲಿಸಿ ನಿಗಧಿತ ದಿನದಂದು ಜಿಲ್ಲೆಗೆ ಬರಲು ಅನುಮತಿ ನೀಡಲಿದೆ ಎಂದರು.

ಹೊರ ರಾಜ್ಯಗಳಿಂದ ಬರುವವರು ಕಾಪು, ಬ್ರಹ್ಮಾವರ, ಬೈಂದೂರು, ಕಾರ್ಕಳ, ಉಡುಪಿ, ಕುಂದಾಪುರದಲ್ಲಿರುವ ಜಿಲ್ಲಾ ಸ್ವೀಕೃತ ಕೇಂದ್ರಗಳಿಗೆ ಮೊದಲು ಬರಬೇಕು. ಅಲ್ಲಿ ತಪಾಸಣೆ ನಡೆಸಿ, ಕೈಗೆ ಸೀಲ್‌ ಹಾಕಿ ಹೋಂ ಕ್ವಾರಂಟೈನ್‌ಗೆ ಕಳಿಸಲಾಗುವುದು. ರೋಗದ ಲಕ್ಷಣಗಳಿದ್ದರೆ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿ ವರದಿ ನೆಗೆಟಿವ್ ಬಂದರೆ ಹೋಂ ಕ್ವಾರಂಟೈನ್‌ಗೆ ಕಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಹೋಂ ಕ್ವಾರಂಟೈನ್‌ಗೆ ಬರುವವರು 14 ದಿನಕ್ಕೆ ಬೇಕಾಗುವ ಆಹಾರ ಪದಾರ್ಥಗಳನ್ನು ಮೊದಲೇ ವ್ಯವಸ್ಥೆ ಮಾಡಿಕೊಳ್ಳಬೇಕು. ಮನೆಯ ಸದಸ್ಯರು ಕೂಡ ಈ ಅವಧಿಯಲ್ಲಿ ಮನೆಬಿಟ್ಟು ಹೊರಹೋಗುವಂತಿಲ್ಲ. ನಿಯಮ ಪಾಲಿಸಲು ಸಾಧ್ಯವಿಲ್ಲದಿದ್ದರೆ ಮುಂಬೈನಿಂದ ಯಾರನ್ನೂ ಕರೆಸಿಕೊಳ್ಳಬೇಡಿ. ಮನೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳಿದ್ದರೂ ಸದ್ಯಕ್ಕೆ ಮುಂಬೈನಿಂದ ಕರೆಸಿಕೊಳ್ಳುವುದು ಬೇಡ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಮುಂಬೈನಿಂದ ಬಂದವರು ಪ್ರತ್ಯೇಕ ಕೋಣೆಯಲ್ಲಿ ವಾಸವಿರಬೇಕು. ಕೋಣೆಯ ವ್ಯವಸ್ಥೆ ಇಲ್ಲದಿದ್ದರೆ ಸರ್ಕಾರಿ ಕ್ವಾರಂಟೈನ್‌ನಲ್ಲಿ ಇರಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಎಸ್‌ಪಿ ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಎಎಸ್‌ಪಿ ಕುಮಾರ ಚಂದ್ರ, ಕುಂದಾಪುರ ಎಎಸ್‌ಪಿ ಹರಿರಾಂ ಶಂಕರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು