ಭಾನುವಾರ, ಏಪ್ರಿಲ್ 18, 2021
33 °C

ಭಾರತದ ಧಾರ್ಮಿಕ ತಾತ್ವಿಕ ಸಾರ ವಸುದೈವ ಕುಟುಂಬಕಂ: ಎಂ.ಡಿ.ನಳಪತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಭಾರತೀಯ ಧಾರ್ಮಿಕ ಮತ್ತು ತಾತ್ವಿಕ ವ್ಯವಸ್ಥೆಗಳ ಸಾರವು ನಂಬಿಕೆ ಮತ್ತು ಇತರ ರಾಷ್ಟ್ರಗಳೊಂದಿಗೆ ಶಾಂತಿಯುತ ಸಹಬಾಳ್ವೆ ಮಾಡುವುದಕ್ಕೆ ಸಂಬಂಧಿಸಿದೆ. ಅದನ್ನೇ ‘ವಸುದೈವ ಕುಟುಂಬಕಂ’ ಎಂದು ಅರಿಯಬೇಕಿದೆ ಎಂದು ಹಿರಿಯ ಭೂ-ರಾಜಕೀಯ ವಿಶ್ಲೇಷಕ ಪ್ರೊ.ಎಂ.ಡಿ.ನಳಪತ್ ಹೇಳಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸ್‌ ಆಯೋಜಿಸಿದ್ದ ‘ಜಾಗತಿಕ ರಾಜಕೀಯ ಮತ್ತು ಅಹಿಂಸೆ’ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ವಿಶ್ವಾತ್ಮಕತೆಯೇ ಭಾರತೀಯ ಚಿಂತನಾ ವಿಧಾನವನ್ನು ವ್ಯಾಖ್ಯಾನಿಸುತ್ತದೆ. ಸನಾತನ ಧರ್ಮ, ಬೌದ್ಧಧರ್ಮ, ಇಸ್ಲಾಂ, ಕ್ರಿಶ್ಚಿಯನ್ ಮತ್ತೆಲ್ಲಾ ಧರ್ಮಗಳು ಪರಸ್ಪರ ಸಹಬಾಳ್ವೆ ಮಾಡಬೇಕು. ಈ ಎಲ್ಲದರ ಜೈವಿಕ ರಚನೆ ಒಂದೇ ಆಗಿದೆ ಎಂದರು.

ಭೌಗೋಳಿಕ ರಾಜಕೀಯ ಸನ್ನಿವೇಶದಲ್ಲಿ ವಾಸ್ತವಿಕವಾದ ಮುಖ್ಯವಾದರೂ, ಯುದ್ಧ ಕೊನೆಯ ಆಯ್ಕೆ ಆಗಬೇಕು. ಈ ನಿಟ್ಟಿನಲ್ಲಿ ಶಾಂತಿ ಮತ್ತು ಅಹಿಂಸೆಯ ಸಂದೇಶಗಳನ್ನು ಎತ್ತಿಹಿಡಿಯುವ ಅವಶ್ಯಕತೆಯಿದೆ. ಯುನೆಸ್ಕೋ ಪೀಸ್ ಚೇರ್ ಈ ದಿಕ್ಕಿನಲ್ಲಿ ಪ್ರಯತ್ನವನ್ನು ಮುಂದುವರಿಸುತ್ತದೆ ಎಂದರು.

ಪಾಕಿಸ್ತಾನದ ಸಾಮಾನ್ಯ ಜನರು ಮತ್ತು ಪಾಕಿಸ್ತಾನದ ಸೈನ್ಯದ ನಡುವೆ ಇರುವ ವ್ಯತ್ಯಾಸವನ್ನು ನಾವು ಗುರುತಿಸಬೇಕಾಗಿದೆ. ಅಲ್ಲಿನ ಜನರು ಭಾರತದೊಂದಿಗೆ ಶಾಂತಿಯನ್ನು ಬಯಸುವವರಾದರೆ, ಅಲ್ಲಿನ ಸೈನ್ಯಕ್ಕೆ ಅದರದ್ದೇ ಆದ ರಚನೆ ಇದೆ ಎಂದು ನುಡಿದರು.

ಮಹಾತ್ಮ ಗಾಂಧಿಯವರ ದೃಷ್ಟಿಕೋನವನ್ನು ವಿಶಾಲವಾಗಿ ಸ್ವೀಕರಿಸುತ್ತ ಅವರ ಕೆಲವು ನಡೆಯ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಹೃದಯದಲ್ಲಿ ‘ಗಾಂಧಿವಾದಿ’ಯಾಗಿಯೇ ಉಳಿದಿದ್ದೇನೆ ಎಂದು ನಲಪತ್‌ ಹೇಳಿದರು.

ಜಿಸಿಪಿಎಎಸ್ ನಿರ್ದೇಶಕರಾದ ಪ್ರೊ.ವರದೇಶ್ ಹಿರೆಗಂಗೆ ಮಾತನಾಡಿ, ಜಾಗತಿಕ ರಾಜಕೀಯದ ವಾಸ್ತವತೆಗಳ ಅರಿವಿದ್ದಾಗಿಯೂ ಅಹಿಂಸೆ ವಿಚಾರದಲ್ಲಿ ಸಾಕಾರಗೊಳ್ಳಲೇಬೇಕಾಗಿರುವುದು ಗುರಿ ಮತ್ತು ದಾರಿ ಎಂದರು.

ಜಿಸಿಪಿಎಎಸ್. ಇದೇ ಶೈಕ್ಷಣಿಕ ವರ್ಷದಿಂದ 'ಎಸ್ತೆಟಿಕ್ಸ್ ಮತ್ತು ಪೀಸ್ ಸ್ಟಡೀಸ್' ನಲ್ಲಿ ಬಿಎ ಪದವಿ ಕಾರ್ಯಕ್ರಮ ಆರಂಭಿಸಲಿದೆ ಎಂದರು.

ವಿದ್ಯಾರ್ಥಿಗಳಾದ ಜೂಡಿ ಫೇಬರ್ ಸ್ವಾಗತಿಸಿದರು. ಟ್ರೈಫೆನ್ ಫೋನ್‌ಸೆಕಾ ಧನ್ಯವಾದ ಸಮರ್ಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.