ಸಾವರ್ಕರ್ ಬರೆದಿದ್ದು ಕ್ಷಮಾಪಣಾ ಪತ್ರವಲ್ಲ, ಆವೇದನ್ ಪತ್ರ: ಸಾತ್ಯಕಿ ಸಾವರ್ಕರ್

ಉಡುಪಿ: ಅಂಡಮಾನ್ ಜೈಲಿನಿಂದ ಬಿಡುಗಡೆ ಕೋರಿ ಸಾವರ್ಕರ್ ಬ್ರಿಟಿಷರಿಗೆ ಬರೆದಿದ್ದು ಕ್ಷಮಾಪಣಾ ಪತ್ರವಲ್ಲ; ಆವೇದನ (ಒಪ್ಪಂದ) ಪತ್ರ ಎಂದು ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದರು.
ನಗರದ ಪುರಭವನದಲ್ಲಿ ಬುಧವಾರ ಕೂರ್ಮ ಬಳಗ ಹಮ್ಮಿಕೊಂಡಿದ್ದ ‘ಜಯೋಸ್ತುತೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಂಡಮಾನ್ ಜೈಲಿನಲ್ಲಿ ಸಾವರ್ಕರ್‌ಗೆ ಮಾನಸಿಕ ಚಿತ್ರಹಿಂಸೆ ನೀಡಲು, ಮನೋಬಲ ಕುಂದಿಸಲು ಅವರ ಎದುರಿಗೇ ಕೈದಿಗಳನ್ನು ನೇಣು ಹಾಕಲಾಗುತ್ತಿತ್ತು. ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿತ್ತು. ಮತ್ತೊಂದೆಡೆ, ಹೊರಗೆ ಬ್ರಿಟಿಷರ ಅಟ್ಟಹಾಸ ಹೆಚ್ಚುತ್ತಿತ್ತು. ಸಮಾಜದಲ್ಲಿ ಜಾತಿ ದ್ವೇಷ, ಬೇಧ ಮಿತಿ ಮೀರುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಬಂಧಿಯಾಗಿ ಏನನ್ನೂ ಸಾಧಿಸಲಾಗದು ಎಂಬುದನ್ನು ಅರಿತ ಸಾವರ್ಕರ್ ಅನ್ಯಮಾರ್ಗ ಕಾಣದೆ ಜೈಲಿನಿಂದ ಹೊರಬರಲು ತೀರ್ಮಾನಿಸಿದರು’ ಎಂದು ಸಾತ್ಯಕಿ ಸಾವರ್ಕರ್ ಹೇಳಿದರು.
‘ಸಾವರ್ಕರ್ ಬ್ರಿಟಿಷರ ಬಳಿ ಕ್ಷಮೆ ಕೋರಿದರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲಿಲ್ಲ. ಗಾಂಧೀಜಿ ಹತ್ಯೆ ಹಿಂದೆಯೂ ಅವರ ಕೈವಾಡವಿತ್ತು ಎಂಬೆಲ್ಲ ಸುಳ್ಳು ಆರೋಪಗಳನ್ನು ಒಂದು ಪಕ್ಷದ ನಾಯಕರು ಹಿಂದಿನಿಂದಲೂ, ಇಂದಿಗೂ ಮಾಡುತ್ತಿದ್ದಾರೆ. ಆದರೆ, ಸತ್ಯ ಅರಿಯಬೇಕಾದರೆ ಸಾರ್ವಕರ್ ಇತಿಹಾಸ ತಿಳಿಯಬೇಕು’ ಎಂದರು.
ಜೈಲಿನಿಂದ ಹೊರಬಂದ ಬಳಿಕ ಮಹಾರಾಷ್ಟ್ರದ ನಾಸಿಕ್‌ನಲ್ಲಿ ‘ಮಿತ್ರಮೇಳ’ ಎಂಬ ಸಂಘಟನೆ ಆರಂಭಿಸಿದ ಸಾವರ್ಕರ್, ಛತ್ರಪತಿ ಶಿವಾಜಿ ಪರಾಕ್ರಮಗಳನ್ನು ಯುವ ಮನಸ್ಸುಗಳನ್ನು ತುಂಬುವ ಕೆಲಸ ಮಾಡಿದರು. ಬ್ರಿಟಿಷರ ವಿರುದ್ಧ ಹೋರಾಡಲು ಕ್ರಾಂತಿಕಾರಿಗಳನ್ನು ಹುಟ್ಟುಹಾಕಿದರು. ಎರೆಡೆರಡು ಬಾರಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಸಾವರ್ಕರ್ ಅಂಡಮಾನ್ ಜೈಲಿನಲ್ಲಿ ಕ್ರೂರಾತಿಕ್ರೂರ ಶಿಕ್ಷೆ ಅನುಭವಿಸಿದವರು. ಅವರೊಬ್ಬ ನಿಜವಾದ ಸ್ವಾತಂತ್ತ್ಯ ಹೋರಾಟಗಾರ ಎಂದರು.
ಜೈಲಿನಿಂದ ಹೊರಬಂದ ಬಳಿಕವೂ ಕೈಕಟ್ಟಿ ಕೂರಲಿಲ್ಲ. ಧರ್ಮಗ್ರಂಥಗಳ ಉಪಯೋಗ, ಹಿಂದುತ್ವವನ್ನು ಪ್ರತಿಪಾದಿಸಿದರು. ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂದೀಪ್ ಬಾಲಕೃಷ್ಣನ್, ಬಿಜೆಪಿ ಮುಖಂಡ ಉದಯ್ ಕುಮಾರ್ ಶೆಟ್ಟಿ, ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.