ಶುಕ್ರವಾರ, ಮಾರ್ಚ್ 5, 2021
30 °C

ಉಡುಪಿ: ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮನುಷ್ಯನೊಳಗಿರುವ ಸತ್ ಚಿಂತನೆಗಳು, ಜ್ಞಾನ ಸಂಪತ್ತು ಸದಾ ಗಂಗೆಯಂತೆ ಸಮಾಜಕ್ಕೆ ಹರಿಯಬೇಕು ಎಂದು ಪರ್ಯಾಯ ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ಯಕ್ಷನಿಧಿ, ವಿದ್ಯಾಪೋಷಕ್, ಯಕ್ಷ ಶಿಕ್ಷಣ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಛಾಂದಸ ಪ್ರಸಂಗಕರ್ತ ಗಣೇಶ ಕೊಲೆಕಾಡಿ ಮುಲ್ಕಿ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ, ಹಿರಿಯ ಅರ್ಥಧಾರಿಗಳಾದ ಸಾಂತೂರು ಸದಾಶಿವ ರಾವ್ ಅವರಿಗೆ ಮಟ್ಟಿ ಮುರಳೀಧರ ರಾವ್ ಪ್ರಶಸ್ತಿ ಹಾಗೂ ಎಂ.ಎನ್.ಹೆಗಡೆ ಅವರಿಗೆ ಪೆರ್ಲ ಕೃಷ್ಣ ಭಟ್ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.

ಕಲ್ಮಶವೂ ಗಂಗೆಯ ಒಡಲು ಸೇರಿದರೆ ಪವಿತ್ರವಾಗುವಂತೆ ಸತ್ ಚಿಂತನೆಗಳನ್ನು ಹೊಂದಿರುವವರ ಜತೆಗಿನ ಒಡನಾಟದಿಂದ ಜೀವನವೂ ಪವಿತ್ರವಾಗುತ್ತದೆ. ಗಂಗೆಯಂತೆ ಜೀವಜಲವಾಗಿ ಬದುಕಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.

ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯಕ್ಷಗಾನ ಕಲಾರಂಗ ದಶಕಗಳಿಂದ ಶ್ರಮಿಸುತ್ತಾ ಬಂದಿದೆ. ಮೂವರು ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕಾರ್ಯವಾಗಿದ್ದು, ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.

ವಿದ್ವಾಂಸ ಕೆ.ಎಲ್.ಕುಂಡತ್ತಾಯ ಅವರು ಕಾವ್ಯ-ಛಂದ ಕುರಿತು ಮಾತನಾಡಿ, ಕಾವ್ಯವನ್ನು ಛಂದಸ್ಸಿನ ಪರಿಧಿಯಲ್ಲಿ ಒಳಪಡಿಸಿದಾಗ ಸಿಗುವಂತಹ ಆಹ್ಲಾದತೆಯೇ ಅದ್ಭುತ. ಕಾವ್ಯ ರಮಣೀಯವಾಗಬೇಕಾದರೆ ಛಂದಸ್ಸಿನ ಸ್ಪರ್ಶಕ್ಕೆ ಸಿಗಬೇಕು ಎಂದು ಅಭಿಪ್ರಾಯಪಟ್ಟರು.

ಛಂದಸ್ಸಿನ ಕುರಿತು ಮಾತನಾಡಿದರೆ ಅದರ ರಸಾನುಭವ ರುಚಿಗೆ ಸಿಗುವುದಿಲ್ಲ. ಛಂದಸ್ಸನ್ನು ಆಸ್ವಾಧಿಸಿದರೆ ಹೆಚ್ಚು ಅರ್ಥಪೂರ್ಣ. ಗಣೇಶ್‌ ಕೊಲೆಕಾಡಿ ಅವರ ಛಂದಸ್ಸಿನಲ್ಲಿ ಅಂತಹ ರಸಾನುಸ್ವಾದ ಸವಿಯಬಹುದು ಎಂದರು.

ಪುರಾಣದ ಕಥೆಗಳಿಗೆ ದೋಷ ಬಾರದಂತೆ ಛಂದವನ್ನು ರಂಗ ಪ್ರಯೋಗಕ್ಕೆ ಒಗ್ಗಿಸುವಲ್ಲಿ ಗಣೇಶ್ ಕೊಲೆಕಾಡಿ ಅವರು ಯಶಸ್ವಿಯಾಗಿದ್ದಾರೆ. ಪ್ರೀತಿ ಹಾಗೂ ಜೀವ ಪ್ರೀತಿ ಅವರ ಸಾಧನೆಯ ಹಿಂದಿರುವ ದೊಡ್ಡ ಶಕ್ತಿ ಎಂದರು.

ಗಣೇಶ್ ಕೊಲೆಕಾಡಿ ಅವರ ಶಿಷ್ಯ ವಾದಿರಾಜ, ವಿಶ್ವನಾಥ್‌, ಪ್ರಕಾಶ್ ಉಳಿತ್ತಾಯ, ಭವ್ಯಶ್ರೀ ವಿಚಾರಗೋಷ್ಠಿಯಲ್ಲಿ ವಿಷಯ ಮಂಡಿಸಿದರು.‌ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್, ತಲ್ಲೂರು ಶಿವರಾಂ ಶೆಟ್ಟಿ, ನಾರಾಯಣ ಹೆಗಡೆ, ಎಸ್.ವಿ.ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು