ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಭಾರತೀಯರಿಂದ ಯಕ್ಷ ಧೀಂಗಿಣ

ಉಡುಪಿಯಲ್ಲಿ ತರಬೇತಿ ಪಡೆಯುತ್ತಿರುವ ಎನ್.ಎಸ್‌.ಡಿ. ವಾರಾಣಸಿಯ ವಿದ್ಯಾರ್ಥಿಗಳು
ನವೀನ್‌ ಕುಮಾರ್‌ ಜಿ.
Published 18 ಜೂನ್ 2024, 14:20 IST
Last Updated 18 ಜೂನ್ 2024, 14:20 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯ ಸರ್ವಾಂಗ ಸುಂದರ ಕಲೆಯಾದ ಯಕ್ಷಗಾನದ ಕಂಪು ಈಗ ಉತ್ತರ ಭಾರತಕ್ಕೂ ಪಸರಿಸುತ್ತಿದೆ.

ಉತ್ತರ ಪ್ರದೇಶದ ವಾರಾಣಸಿಯ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾದಲ್ಲಿ (ಎನ್‌.ಎಸ್.ಡಿ) ರಂಗ ಶಿಕ್ಷಣ ಪಡೆಯುತ್ತಿರುವ 20 ಮಂದಿ ವಿದ್ಯಾರ್ಥಿಗಳು ಉಡುಪಿಗೆ ಬಂದು ಇಲ್ಲಿನ ಅದಮಾರು ಮಠದ ಛತ್ರದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ತರಬೇತಿಯಲ್ಲಿ ಪಳಗುತ್ತಿರುವ ಉತ್ತರ ಭಾರತದ ವಿದ್ಯಾರ್ಥಿಗಳು, ಕರಾವಳಿ ಕಲೆಯ ಬಗ್ಗೆ ಸಮಗ್ರ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದಾರೆ. ಒಟ್ಟು 20 ಮಂದಿ ವಿದ್ಯಾರ್ಥಿಗಳಲ್ಲಿ 9 ಮಂದಿ ವಿದ್ಯಾರ್ಥಿನಿಯರೂ ಇದ್ದಾರೆ. ಈ ವಿದ್ಯಾರ್ಥಿಗಳು ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್‌ ಮತ್ತು ಪಶ್ವಿಮ ಬಂಗಾಳ ಮೂಲದವರು.

ಒಂದು ತಿಂಗಳ ಯಕ್ಷಗಾನ ತರಬೇತಿಗಾಗಿ ಇವರನ್ನು ಎನ್‌.ಎಸ್.ಡಿ. ಕಳುಹಿಸಿಕೊಟ್ಟಿದೆ. ಸಂಸ್ಥೆಯ ನಿರ್ದೇಶಕ ಪ್ರವೀಣ್ ಕುಮಾರ್ ಗುಂಜನ್‌ ಅವರೂ ವಿದ್ಯಾರ್ಥಿಗಳ ಜೊತೆಗೆ ಉಡುಪಿಗೆ ಬಂದು ಮಾರ್ಗದರ್ಶನ ನೀಡುತ್ತಿದ್ದಾರೆ.

ಪ್ರತಿದಿನ ಬೆಳಿಗ್ಗೆ 5ರಿಂದ 8ರ ವರೆಗೆ, ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ರವರೆಗೆ, ಸಂಜೆ 3ರಿಂದ 7ರವರೆಗೆ ಯಕ್ಷನಗಾನ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಯಕ್ಷಗಾನ ಕಲೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ.

‘ಕಲಿಕೆಯ ಅಂಗವಾಗಿ ಕೇರಳದ ‘ಕಳರಿಪಯಟ್ಟು’, ಜಾರ್ಖಂಡ್‌ನ ‘ಚಾವ್‌’ ಕಲೆಯನ್ನೂ ಅಭ್ಯಸಿಸಿದ್ದೇವೆ ಯಕ್ಷಗಾನ ಕಲೆ ಮಾತ್ರ ನಮಗೆ ತುಂಬಾ ಆಪ್ತ ಎನಿಸುತ್ತಿದೆ’ ಎಂದು ತರಬೇತಿ ಪಡೆಯುತ್ತಿರುವ ಪವನ್‌ ಸಿಂಗ್‌ ಗೌರ್‌ ತಿಳಿಸಿದರು.

‘ಬಿಡುವಿನ ಸಂದರ್ಭದಲ್ಲೂ ನಾವು ಯಕ್ಷಗಾನದ ನಾಟ್ಯ ಅಭ್ಯಾಸ ಮಾಡುತ್ತಿದ್ದೇವೆ. ಕಡಿಮೆ ಅವಧಿಯಲ್ಲಿ ಸಾಗರದಂತಹ ಕಲೆಯನ್ನು ಕಲಿಯುವುದು ಕಷ್ಟ ಸಾಧ್ಯ. ಸಾಧ್ಯವಾದಷ್ಟು ಕಲಿಯಬೇಕು, ಕಲಿತ ಕಲೆಗಳನ್ನು ಎಲ್ಲೆಡೆ ಪಸರಿಸಬೇಕು ಎನ್ನುತ್ತಾರೆ ಪವನ್‌.

ವಿದ್ಯಾರ್ಥಿಗಳಿಗೆ ನಾಟ್ಯ, ಅಭಿನಯದ ತರಬೇತಿ ನೀಡಲಾಗುತ್ತದೆ. ರಾಗ, ಸಪ್ತ ತಾಳಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ತಿಳಿಸಿದರು.

‘ಪೂರ್ವರಂಗ’ದ ಬಗ್ಗೆ ಹೆಚ್ಚಿನ ತರಬೇತಿ ನೀಡಲಾಗುತ್ತದೆ. ವೇಷಭೂಷಣ, ಮುಖವರ್ಣಿಕೆ ಬಗ್ಗೆಯೂ ಕಲಿಸಲಾಗುತ್ತಿದೆ. ಇದೇ 25 ಮತ್ತು 26ರಂದು ಈ ವಿದ್ಯಾರ್ಥಿಗಳು ‘ಏಕಲವ್ಯ’ ಪ್ರಸಂಗದ ಯಕ್ಷಗಾನ ಪ್ರರ್ಶಿಸಲಿದ್ದಾರೆ ಎಂದು ಅವರು ವಿವರಿಸಿದರು.ಯಕ್ಷಗಾನ ಅದ್ಬುತ ಕಲೆ. ಇದನ್ನು ಅಭ್ಯಾಸ ಮಾಡಿದರೆ ಬೇರೆ ಎಲ್ಲಾ ಕಲಾರೂಪಗಳನ್ನು ಸುಲಭವಾಗಿ ಕಲಿಯಬಹುದು. ತರಬೇತಿ ತುಂಬಾ ಖುಷಿ ಕೊಟ್ಟಿದೆ

ಇಲ್ಲಿನವರೇ ಯಕ್ಷಗಾನ ಕಲಿಯುವಲ್ಲಿ ಹಿಂದೆ ಬಿದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳು ಬಂದು ತರಬೇತಿ ಪಡೆಯುತ್ತಿರುವುದು ಸಂತಸದ ವಿಚಾರ
ಬನ್ನಂಜೆ ಸಂಜೀವ ಸುವರ್ಣ ಯಕ್ಷ ಗುರು
ಯಕ್ಷಗಾನ ಅದ್ಬುತ ಕಲೆ. ಇದನ್ನು ಅಭ್ಯಾಸ ಮಾಡಿದರೆ ಬೇರೆ ಎಲ್ಲಾ ಕಲಾರೂಪಗಳನ್ನು ಸುಲಭವಾಗಿ ಕಲಿಯಬಹುದು. ತರಬೇತಿ ತುಂಬಾ ಖುಷಿ ಕೊಟ್ಟಿದೆ
ಪವನ್‌ ಸಿಂಗ್‌ ಗೌರ್‌ ವಿದ್ಯಾರ್ಥಿ ಎನ್‌.ಎಸ್.ಡಿ. ವಾರಾಣಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT