ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮೇ ತಿಂಗಳಲ್ಲಿ ಬರಲಿದೆ ಹಳದಿ ಕಲ್ಲಂಗಡಿ

5 ಎಕರೆಯಲ್ಲಿ ತೈವಾನ್ ಕಲ್ಲಂಗಡಿ ಕೃಷಿ ಮಾಡಿರುವ ಹಿರಿಯಡ್ಕದ ಸುರೇಶ್ ನಾಯಕ್‌
Last Updated 18 ಮಾರ್ಚ್ 2023, 21:45 IST
ಅಕ್ಷರ ಗಾತ್ರ

ಉಡುಪಿ: ತೈವಾನ್ ಮೂಲದ ಆರೋಹಿ ಕಲ್ಲಂಗಡಿ (ಹಳದಿ ಬಣ್ಣದ ಹಣ್ಣು) ಕೃಷಿ ಮಾಡಿ ಯಶಸ್ಸು ಕಂಡಿರುವ ಹಿರಿಯಡ್ಕದ ಪ್ರಗತಿಪರ ರೈತ ಸುರೇಶ್ ನಾಯಕ್‌ ಗ್ರಾಹಕರ ಒತ್ತಾಯಕ್ಕೆ ಕಟ್ಟುಬಿದ್ದು ಮತ್ತೊಮ್ಮೆ ತೈವಾನ್‌ ಕಲ್ಲಂಗಡಿ ಬೆಳೆಯುವ ಸಾಹಸಕ್ಕೆ ಇಳಿದಿದ್ದಾರೆ.

ಕೃಷಿಯಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಕೃಷಿಯನ್ನು ಖುಷಿಯಾಗಿಸಿಕೊಂಡಿರುವ ಸುರೇಶ್‌ ನಾಯಕ್‌ ಹಳದಿ ಕಲ್ಲಂಗಡಿಗೆ ಸಿಕ್ಕ ಭಾರಿ ಬೆಂಬಲದಿಂದ ಈ ಬಾರಿ ಮತ್ತೆ 5 ಎಕರೆಯಲ್ಲಿ ತೈವಾನ್ ಮೂಲದ ಕಲ್ಲಂಗಡಿ ಬೆಳೆಯುತ್ತಿದ್ದಾರೆ. ಹೊರಗೆ ಕಡು ಹಸಿರು ಒಳಗೆ ಹಳದಿ ಹಾಗೆಯೇ ಹೊರಗೆ ಹಳದಿ ಒಳಗೆ ಕೆಂಪು ಬಣ್ಣದ ಕಲ್ಲಂಗಡಿ ತಳಿಯ ಬೀಜಗಳನ್ನು ಬಿತ್ತಿದ್ದಾರೆ.

ತಿಂಗಳ ಹಿಂದಷ್ಟೆ 18 ಟನ್‌ನಷ್ಟು ತೈವಾನ್‌ ‌ತಳಿಯ ಕಲ್ಲಂಗಡಿ ಬೆಳೆದಿದ್ದ ಸುರೇಶ್ ನಾಯಕ್‌ ಕೆಲವೇ ದಿನಗಳಲ್ಲಿ ಬೆಳೆದ ಅಷ್ಟೂ ಕಲ್ಲಂಗಡಿಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ಅಚ್ಚರಿ ಮೂಡಿಸಿದ್ದರು. ಹಿರಿಯಡ್ಕದಲ್ಲಿ ನಡೆದ ಕೃಷಿ ಮೇಳದಲ್ಲಿ ಬರೋಬ್ಬರಿ 12 ಟನ್‌ ಕಲ್ಲಂಗಡಿ ಖರ್ಚಾಗಿತ್ತು. 6 ಟನ್‌ನಷ್ಟು ಕಲ್ಲಂಗಡಿಯನ್ನು ಅವರ ಮಳಿಗೆಗೆ ಬಂದು ಜನರು ಖರೀದಿ ಮಾಡಿದ್ದರು.

ಇಂದಿಗೂ ಗ್ರಾಹಕರು ಹಳದಿ ಕಲ್ಲಂಗಡಿಯನ್ನು ಹುಡುಕಿಕೊಂಡು ಮನೆಯ ಬಳಿ ಬರುತ್ತಿರುವ ಹಿನ್ನೆಲೆಯಲ್ಲಿ ಹೊರಗಿನಿಂದ ಹಳದಿ ಕಲ್ಲಂಗಡಿ ಬೀಜ ತರಿಸಿ ಬಿತ್ತಿದ್ದೇನೆ. ಮೇ 10ರ ಹೊತ್ತಿಗೆ ಕಲ್ಲಂಗಡಿ ಕಟಾವಿಗೆ ಬರಲಿದ್ದು ಗ್ರಾಹಕರಿಗೆ ಮಾರಾಟ ಮಾಡಲಾಗುವುದು ಎನ್ನುತ್ತಾರೆ ರೈತ ಸುರೇಶ್ ನಾಯಕ್.

ಹಳದಿ ಕಲ್ಲಂಗಡಿಯ ರುಚಿಗೆ ಕರಾವಳಿಯ ಜನರು ಮನಸೋತಿದ್ದಾರೆ. ಸಧ್ಯ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ಬೇಡಿಕೆಯನ್ನು ರೈತರು ಲಾಭದಾಯಕವಾಗಿ ಬಳಸಿಕೊಳ್ಳಬೇಕು. ತೈವಾನ್ ತಳಿಯ ಕಲ್ಲಂಗಡಿ ಬೆಳೆಯಲು ಆಸಕ್ತಿ ಹೊಂದಿರುವ ರೈತರು ಸಂಪರ್ಕ ಮಾಡಿದರೆ, ಬೀಜದ ಬಗ್ಗೆ ಮಾಹಿತಿ, ಬೆಳೆಯುವ ವಿಧಾನ ಸೇರಿದಂತೆ ಅಗತ್ಯ ಸಲಹೆ ನೀಡುತ್ತೇನೆ ಎನ್ನುತ್ತಾರೆ ಅವರು.

ಸಾಮಾನ್ಯ ತಳಿಯ ಕಲ್ಲಂಗಡಿ ಬೆಳೆದು ಕೈಸುಟ್ಟುಕೊಳ್ಳುವ ಬದಲು ರೈತರು ಪ್ರಯೋಗಕ್ಕಿಳಿಯಬೇಕು, ಜನರ ಅಭಿರುಚಿ ಆಸಕ್ತಿಯನ್ನು ಗಮನಿಸಬೇಕು, ಸಾಮಾಜಿಕ ಜಾಲತಾಣವನ್ನೇ ಪ್ರಚಾರ ವೇದಿಕೆಯನ್ನಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ ಸುರೇಶ್ ನಾಯಕ್‌.

ಅರಿವೆ ಸೊಪ್ಪು, ಹಣಬೆ, ತರಕಾರಿ ಹೀಗೆ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಆಹಾರ ಪದಾರ್ಥಗಳನ್ನು ಬೆಳೆದು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವಲ್ಲಿ ಸುರೇಶ್ ನಾಯಕ್ ಸಿದ್ಧಹಸ್ತರು. ಕೋವಿಡ್‌ ಕಾಲದಲ್ಲಿ ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ಬೀದಿಗೆ ಚೆಲ್ಲಿದಾಗ ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬೆಳೆದ ಕಲ್ಲಂಗಡಿಯನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿದ್ದರು. ಚಿತ್ರದುರ್ಗದಲ್ಲಿ ರೈತ ಮಹಿಳೆಯೊಬ್ಬರು ಈರುಳ್ಳಿ ಖರೀದಿಸುವಂತೆ ಸರ್ಕಾರಕ್ಕೆ ಕಣ್ಣೀರು ಹಾಕಿ ಅಂಗಲಾಚಿದಾಗ ನೆರವಿಗೆ ದಾವಿಸಿದ ಸುರೇಶ್ ನಾಯಕ್‌ ಖರೀದಿಸಿ ಮಾರಾಟ ಮಾಡಿದ್ದರು.

‘ಹಳದಿ ಕಲ್ಲಂಗಡಿ ಬೀಜ ದುಬಾರಿ’

10 ವರ್ಷಗಳ ಹಿಂದೆ ತೈವಾನ್ ಕಲ್ಲಂಗಡಿ ಬೆಳೆಯುವ ಬಗ್ಗೆ ತುಮಕೂರಿನಲ್ಲಿ ಮಾಹಿತಿ ದೊರೆಯಿತು. ಬೀಜ ತುಂಬಾ ದುಬಾರಿಯಾಗಿದ್ದ ಕಾರಣಕ್ಕೆ ಆಗ ಬೆಳೆಯಲು ಸಾಧ್ಯವಾಗಲಿಲ್ಲ. ಈಚೆಗೆ ಕೃಷಿಯಲ್ಲಿ ಹೊಸ ಪ್ರಯೋಗ ಮಾಡುವ ಚಿಂತನೆಯಲ್ಲಿದ್ದಾಗ ತೈವಾನ್ ತಳಿ ಬೆಳೆಯುವ ನಿರ್ಧಾರ ಮಾಡಿ, ಯಶಸ್ಸನ್ನೂ ಪಡೆದಿದ್ದೇನೆ. ಹಳದಿ ಕಲ್ಲಂಗಡಿ ಬೀಜ 50 ಗ್ರಾಂಗೆ ₹ 4,000ದಷ್ಟು ಬೆಲೆ ಇದೆ. ಸಾವಿರದಷ್ಟು ಬೀಜದಲ್ಲಿ ಹಾಳಾಗಿದ್ದನ್ನು ಹೊರತುಪಡಿಸಿದರೆ 600 ಗಿಡಗಳನ್ನು ಬೆಳೆಯಬಹುದು. ಪುಣೆಯಿಂದ ಏಜೆಂಟ್‌ಗಳ ಮೂಲಕ ಹಳದಿ ಕಲ್ಲಂಗಡಿ ಬೀಜವನ್ನು ತರಿಸಿಕೊಳ್ಳಬಹುದು. ಒಂದು ಗಿಡದಲ್ಲಿ 2 ಕಲ್ಲಂಗಡಿ ಬೆಳೆಯಲಿದೆ ಎನ್ನುತ್ತಾರೆ ರೈತ ಸುರೇಶ್ ನಾಯಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT