ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನದಿ ಹೂಳು ಸಮಸ್ಯೆ: ಇಂದು ಜಿ.ಪಂ ಸಿಇಒ ಭೇಟಿ

Published : 12 ಆಗಸ್ಟ್ 2024, 5:04 IST
Last Updated : 12 ಆಗಸ್ಟ್ 2024, 5:04 IST
ಫಾಲೋ ಮಾಡಿ
Comments

ಕುಂದಾಪುರ: ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಳಾವರ, ಕೆದೂರು, ಬೇಳೂರು, ತೆಕ್ಕಟ್ಟೆ, ಕೋಟ, ಬಾರ್ಕೂರು ಮತ್ತು ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿಗಳಲ್ಲಿ ತುಂಬಿರುವ ಹೂಳಿನಿಂದ ನೆರೆ ಉಂಟಾಗುತ್ತಿದ್ದು, ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಸ್ಥಳೀಯರ ಹಾಗೂ ಶಾಸಕರ ಅಹವಾಲಿಗೆ ಸ್ಪಂದಿಸಿರುವ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್ ಅವರು ಇಂದು ಸಮಸ್ಯೆ ಇರುವ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಈ ಕುರಿತು ಸೂಚನಾ ಪತ್ರ ನೀಡಿರುವ ಅವರು ಆ.12 ರಂದು ಬೆಳಿಗ್ಗೆ 11 ಗಂಟೆಗೆ ಕುಂದಾಪುರ ತಾಲ್ಲೂಕು ವ್ಯಾಪ್ತಿಯಲ್ಲಿನ ಪ್ರದೇಶಗಳಿಗೆ ಹಾಗೂ ಮಧ್ಯಾಹ್ನ 12.30 ಕ್ಕೆ ಬ್ರಹ್ಮಾವರ ತಾಲ್ಲೂಕಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಕಂದಾಯ ಉಪವಿಭಾಗಾಧಿಕಾರಿ, ಎರಡು ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ತಹಶೀಲ್ದಾರರು, ಗಣಿ ಇಲಾಖೆಯ ಭೂ ವಿಜ್ಞಾನಿಗಳು, ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳು ಹಾಜರಿರುವಂತೆ ಸೂಚಿಸಿದ್ದಾರೆ.

ತೆಕ್ಕಟ್ಟೆ ಮಲ್ಯಾಡಿಯಿಂದ ಚಿತ್ರಪಾಡಿಯ ತನಕ ಹರಿಯುವ ಸೊಲಡ್ಪು ನದಿಯಲ್ಲಿ ತುಂಬಿರುವ ಹೂಳಿನಿಂದಾಗಿ ನದಿಯಲ್ಲಿ ನೀರಿನ ಸರಾಗ ಹರಿಯುವಿಕೆಗೆ ತೊಂದರೆಯುಂಟಾಗಿ, ಪ್ರತಿ ಮಳೆಗಾಲದಲ್ಲಿಯೂ ನೆರೆಯುಂಟಾಗಿ ಪರಿಸರದ ಕೃಷಿ ಗದ್ದೆಗಳಿಗೆ ಹಾನಿಯುಂಟಾಗುತ್ತಿತ್ತು. ಕಳೆದ ಕೆಲ ದಿನಗಳ ಹಿಂದೆ ಜೋರಾಗಿ ಸುರಿದ ಮಳೆಯಿಂದಾಗಿ ಗಿಳಿಯಾರು, ಬೇಳೂರು ಪರಿಸರದಲ್ಲಿ ನೆರೆ ನೀರು ತುಂಬಿ ನೂರಾರು ಎಕ್ರೆ ಕೃಷಿ ಭೂಮಿಗಳಿಗೆ ಹಾನಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಮೂಡು ಗಿಳಿಯಾರು ಜನಸೇವಾ ಟ್ರಸ್ಟ್‌ ನೇತೃತ್ವದಲ್ಲಿ ಕೋಟ ಮಾಂಗಲ್ಯ ಮಂದಿರದಲ್ಲಿ ಜು.21 ರಂದು ನಡೆದ ರೈತರ ಹಾಗೂ ಸ್ಥಳೀಯರ ಸಭೆಯಲ್ಲಿ 90 ದಿನಗಳ ಒಳಗೆ ಸಂಬಂಧಿಸಿದ ವಿಚಾರದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಶಾಸಕರನ್ನು ಕೋರುವುದು ಹಾಗೂ ನಿರೀಕ್ಷಿತ ಸಮಯದಲ್ಲಿ ಅಭಿವೃದ್ಧಿಯ ಕೆಲಸಗಳು ನಡೆಯದೆ ಇದ್ದಲ್ಲಿ ಜನಸೇವಾ ಟ್ರಸ್ಟ್ ನೇತೃತ್ವದಲ್ಲಿ ಸಮಾನ ಮನಸ್ಕರೊಂದಿಗೆ ಪ್ರತಿಭಟನೆ ನಡೆಸುವ ಕುರಿತು ನಿರ್ಣಯಿಸಲಾಗಿತ್ತು. ಈ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಎ.ಕಿರಣ್‌ಕುಮಾರ ಕೊಡ್ಗಿಯವರು, ಕೂಡಲೇ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು.

ಶಾಸಕರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಆ.20 ರಂದು ಕುಂದಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸುವ ಕುರಿತು ಈಗಾಗಲೇ ಸಂಬಂಧಿಸಿದವರಿಗೆ ನೋಟಿಸ್ ನೀಡಿದ್ದಾರೆ. ಈ ಮಧ್ಯೆ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಭೇಟಿ ಮಾಡಿದ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಅವರು ನೆರೆಯಿಂದಾಗಿ ಸ್ಥಳೀಯ ಕೃಷಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದರು.

ಜನಸೇವಾ ಟ್ರಸ್ಟ್‌ ಸ್ವಾಗತ

ಜಿಲ್ಲಾ ಪಂಚಾಯಿತಿ ಸಿಇಒ ಅವರು ಭೇಟಿ ನೀಡುತ್ತಿರುವುದನ್ನು ಸ್ವಾಗತಿಸಿರುವ ಮೂಡು ಗಿಳಿಯಾರು ಜನಸೇವಾ ಟ್ರಸ್ಟ್‌ ಅಧ್ಯಕ್ಷ ವಸಂತ ಗಿಳಿಯಾರ್ ಅವರು ಕೋಟದಲ್ಲಿ ನಡೆದಿದ್ದ ಸಭೆಯಲ್ಲಿ ನೆರೆಗೆ ಹೊಳೆಯಲ್ಲಿ ತುಂಬಿರುವ ಹೂಳೇ ಕಾರಣ ಎನ್ನುವುದನ್ನು ಶಾಸಕ ಕಿರಣ್‌ ಕೊಡ್ಗಿ ಅವರಿಗೆ ಮನವರಿಕೆ ಮಾಡಲಾಗಿತ್ತು. ಇದೀಗ ಅವರು ಸಿಇಒ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಅವರಿಗೆ ಮನವರಿಕೆ ಮಾಡಿದ್ದಲ್ಲದೆ ಆ.20ರಂದು ಈ ವಿಚಾರದ ಕುರಿತು ಸಭೆ ನಿಗದಿಯಾಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ತಾವು ನೀಡಿದ ಭರವಸೆ ಉಳಿಸಿಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT