ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರದ 8,900 ಎಕರೆ ಅರಣ್ಯ ಜಮೀನು: ಖಾತೆ ಬದಲಾವಣೆಗೆ ಪರ, ವಿರೋಧ

ಕಂದಾಯ ಇಲಾಖೆಗೆ ದಾಖಲೆ ಮಾಡಲು ಸಿದ್ಧತೆ
Last Updated 3 ಡಿಸೆಂಬರ್ 2020, 13:49 IST
ಅಕ್ಷರ ಗಾತ್ರ

ಕಾರವಾರ: ಯಲ್ಲಾಪುರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ 8,900 ಎಕರೆ ಜಮೀನಿನ ಖಾತೆಗಳನ್ನು ಕಂದಾಯ ಇಲಾಖೆಯ ಹೆಸರಿಗೆ ಬದಲಿಸಲು ನಡೆದಿರುವ ಸಿದ್ಧತೆಗೆ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರು
ಇದನ್ನು ಸೂಕ್ತ ನಿರ್ಧಾರ ಎಂದರೆ, ಪರಿಸರವಾದಿಗಳು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ‘ಯಲ್ಲಾಪುರದಲ್ಲಿ ಆರಂಭಿಸಿರುವ ಈ ಪ್ರಕ್ರಿಯೆಯು ತಾಂತ್ರಿಕವಾಗಿ ಮತ್ತು ಕಾನೂನು ಪ್ರಕಾರ ಸರಿಯಾಗಿದೆ. 1980ರ ಅ.25ರಂದು ಅರಣ್ಯ ಸಂರಕ್ಷಣೆ ಕಾಯ್ದೆ ಜಾರಿಗೆ ಬರುವ ಮೊದಲು ಸಾಕಷ್ಟು ಜಮೀನನ್ನು ಕೃಷಿ ಚಟುವಟಿಕೆಗೆ ಹಂಗಾಮಿ ಲಾಗಣಿಯಾಗಿ (ತಾತ್ಕಾಲಿಕ ಭೋಗ್ಯ) ಕೊಡಲಾಗಿತ್ತು. ಆದರೆ, ಬಳಿಕ ಯಾರಿಗೂ ನೀಡಿಲ್ಲ. ಈ ಬಗ್ಗೆ ಬಹಳ ಸಲ ಪ್ರಸ್ತಾಪ ಮಾಡಿದ್ದರೂ ಫಲ ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪ್ರಾಮಾಣಿಕವಾಗಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುವವರಿಗೆ ಅರಣ್ಯ ಇಲಾಖೆಯ ಮೊಂಡುತನದಿಂದ ಸಮಸ್ಯೆ ಆಗಿದೆ. ಯಲ್ಲಾಪುರದ ಮಾದರಿ ಯಶಸ್ವಿಯಾದರೆ ಇಡೀ ಜಿಲ್ಲೆಗೆ ಅನ್ವಯವಾಗುತ್ತದೆ. ಸಾಗುವಳಿಗೆ ಅರಣ್ಯ ಭೂಮಿಯನ್ನು ಕೊಡಬಹುದು ಅಥವಾ ಇಲ್ಲ ಎಂಬ ಬಗ್ಗೆ ಸ್ಪಷ್ಟವಾದ ನಿರ್ಧಾರವಾಗಲಿ. ಬಡವರು ಇನ್ನೆಷ್ಟು ದಿನ ಅತಂತ್ರವಾಗಿರಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.

ಕಿರವತ್ತಿಯ ಭೀಮಶಿ ಬಸಪ್ಪ ವಾಲ್ಮೀಕಿ, ‘ಖಾತೆ ಬದಲಿಸಿ ಕಂದಾಯ ಇಲಾಖೆಯ ಹೆಸರನ್ನು ದಾಖಲಿಸಿದರೆ ಬಡವರಿಗೆ ತುಂಬ ಅನುಕೂಲವಾಗುತ್ತದೆ. ತಹಶೀಲ್ದಾರ್ ನಿರ್ಧಾರ ಸರಿಯಾಗಿದೆ. ಉಲ್ಲೇಖಿತ ಜಮೀನನ್ನು ಕಂದಾಯ ಇಲಾಖೆಗೆ ಬಿಟ್ಟುಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.

ಯಲ್ಲಾಪುರ ತಾಲ್ಲೂಕಿನಲ್ಲಿ ಕಾಫಿಬೆಳೆ ಮತ್ತು ಇತರ ಕೃಷಿ ಚಟುವಟಿಕೆಗಳಿಗಾಗಿ ಅರಣ್ಯ ಇಲಾಖೆಯ 8,900 ಎಕರೆ ಜಮೀನು ನೀಡುವಂತೆ1969ರಲ್ಲಿ ರಾಜ್ಯ ಸರ್ಕಾರವು ಆದೇಶಿಸಿತ್ತು. ಇದಾಗಿ 50 ವರ್ಷಗಳಾದರೂ ದಾಖಲೆಗಳಲ್ಲಿ ಅರಣ್ಯ ಇಲಾಖೆಯ ಹೆಸರಿದೆ. ಅಂದಿನ ಆದೇಶದ ಆಧಾರದಲ್ಲಿ ಅರಣ್ಯ ಜಮೀನನ್ನು ಕಂದಾಯ ಇಲಾಖೆಗೆ ಖಾತೆ ಮಾಡಿಕೊಳ್ಳಲು ಯಲ್ಲಾಪುರ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಅರಣ್ಯ ಇಲಾಖೆಯು ಆಕ್ಷೇಪ ವ್ಯಕ್ತಪಡಿಸಿದೆ.

‘ರಾಜಕೀಯ ಪ್ರೇರಿತ ಕ್ರಮ’:

‘ಯಲ್ಲಾಪುರದಲ್ಲಿ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಖಾತೆ ಮಾಡಲು ಮುಂದಾಗಿರುವುದು ರಾಜಕೀಯ ಪ್ರೇರಿತ ಮತ್ತು ದುರುದ್ದೇಶದ ಕ್ರಮವೆಂದು ತೋರುತ್ತಿದೆ’ ಎಂದು ಪರಿಸರವಾದಿ ಪಾಂಡುರಂಗ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಅರಣ್ಯ ಭೂಮಿಯನ್ನು ಬೇರೆ ಯೋಜನೆಗಳಿಗೆ ಕೊಡುವ ಪರಿಸ್ಥಿತಿಯೇ ಇಲ್ಲ. ಇಡೀ ಪಶ್ಚಿಮಘಟ್ಟದ ಸ್ಥಿತಿಯನ್ನು ಅವಲೋಕಿಸಿದಾಗ ಈ ರೀತಿ ಖಾತೆ ಬದಲಾವಣೆ ಬಹುದೊಡ್ಡ ಪ್ರಮಾದವಾಗಲಿದೆ. ಕಂದಾಯ ಇಲಾಖೆಗೆ ನೀಡಿದರೆ ಮುಂದೆ ಆ ಜಮೀನು ಅರಣ್ಯವಾಗಿ ಉಳಿಯುವುದು ಅನುಮಾನ’ ಎಂಬುದು ಅವರ ಕಳವಳವಾಗಿದೆ.

‘ಒಂದು ಎಕರೆ ಅರಣ್ಯ ಜಮೀನಿದ್ದರೂ ಅರಣ್ಯ ಸಂರಕ್ಷಣೆ ಕಾಯ್ದೆಯಡಿಯೇ ಖಾತೆ ಬದಲಾವಣೆ ಆಗಬೇಕು. ಅಂಥದ್ದರಲ್ಲಿ ಸಾವಿರಾರು ಎಕರೆಗೆ ಹೇಗೆ ಸಾಧ್ಯ’ ಎಂಬುದು ಅವರ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT