ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕನ ರಕ್ಷಿಸಿದ ಕಾನ್‌ಸ್ಟೆಬಲ್

Last Updated 9 ಜನವರಿ 2022, 7:16 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ‌್ದ ರೈಲನ್ನೇರಲು ಮುಂದಾಗಿ ಆಯತಪ್ಪಿ ಬಿದ್ದ ಪ್ರಯಾಣಿಕರೊಬ್ಬರನ್ನು ಕರ್ತವ್ಯ ನಿರತ ರೈಲ್ವೆ ಪೊಲೀಸ್ ಕಾನ್‌ಸ್ಟೆಬಲ್ ರಕ್ಷಿಸಿದ್ದಾರೆ. ಅವರ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಜ.5ರಂದು ಸಂಜೆ 6.07 ನಿಮಿಷಕ್ಕೆ, ಬೆಂಗಳೂರಿಗೆ ತೆರಳುವ 'ಪಂಚಗಂಗಾ ಎಕ್ಸ್‌ಪ್ರೆಸ್' (ಸಂಖ್ಯೆ 16596) ರೈಲು ಕಾರವಾರ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ ಒಂದರಿಂದ ಹೊರಟಿತ್ತು. ಆಗ, ಎಸ್-4 ಬೋಗಿಯನ್ನೇರಲು 59 ವರ್ಷದ ಪುರುಷ ಪ್ರಯಾಣಿಕ ಮುಂದಾದರು. ಆಯತಪ್ಪಿ ಬಿದ್ದ ಅವರು, ರೈಲಿನ ಗಾಲಿಗೆ ಸಿಲುಕುವ ಸಾಧ‌್ಯತೆಯಿತ್ತು. ಅದನ್ನು ಗಮನಿಸಿದ ಕಾನ್‌ಸ್ಟೆಬಲ್ ನರೇಂದ್ರ ನಾಯ್ಕ, ತಕ್ಷಣ ಓಡಿಬಂದರು. ಬಿದ್ದ ಪ್ರಯಾಣಿಕನನ್ನು ಕೈ ಹಿಡಿದು ಎಳೆದು ಪಕ್ಕಕ್ಕೆ ಸರಿಸಿದರು. ಈ ಮೂಲಕ ಪ್ರಯಾಣಿಕ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು.

ಗಾಯಾಳು ಪ್ರಯಾಣಿಕನನ್ನು ಬೆಂಗಳೂರಿನ ರಕ್ಷಣಾ ಇಲಾಖೆ ಕಾರ್ಯಾಲಯದ ಸಿಬ್ಬಂದಿ ಬಿ.ಎಂ.ದೇಸಾಯಿ ಎಂದು ಗುರುತಿಸಲಾಗಿದೆ. ಬಿದ್ದ ರಭಸಕ್ಕೆ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಅವರಿಗೆ ರೈಲು ನಿಲ್ದಾಣದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮತ್ತೊಂದು ರೈಲಿನಲ್ಲಿ ಕಳುಹಿಸಲಾಯಿತು.

ಬೆಂಗಳೂರಿಗೆ ಹೋಗುತ್ತಿದ್ದ ಅವರು, ಕಾರವಾರ ನಿಲ್ದಾಣದಲ್ಲಿ ಕೆಲವು ವಸ್ತುಗಳನ್ನು ಖರೀದಿಸಲು ರೈಲಿನಿಂದ ಇಳಿದಿದ್ದರು. ಖರೀದಿಸಿ ವಾಪಸ್ ಬರುವಷ್ಟರಲ್ಲಿ ರೈಲು ಹೊರಟಿದ್ದರಿಂದ ಗಡಿಬಿಡಿಯಲ್ಲಿ ಓಡಿ ಬಂದಿದ್ದರು. ತಮ್ಮನ್ನು ರಕ್ಷಿಸಿದ ಕಾನ್‌ಸ್ಟೆಬಲ್‌ಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT