ಗುರುವಾರ , ಡಿಸೆಂಬರ್ 3, 2020
23 °C
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ನೀರಿನಲ್ಲಿ ನೀಲಿಬಣ್ಣದ ಬೆಳಕು

ಕಡಲ ತೀರದಲ್ಲಿ ಮತ್ತೆ ಆಲ್ಗೆ ದರ್ಶನ! ನೀರಿನಲ್ಲಿ ನೀಲಿಬಣ್ಣದ ಬೆಳಕು!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದ ಅರಬ್ಬಿ ಸಮುದ್ರ ತೀರದಲ್ಲಿ ಮತ್ತೆ ಪಾಚಿಗಳು (ಆಲ್ಗೆ) ವ್ಯಾಪಕವಾಗಿ ಕಾಣಿಸಿಕೊಂಡಿವೆ. ಎರಡು ದಿನಗಳಿಂದ ಸೂರ್ಯೋದಯಕ್ಕೂ ಮೊದಲು ವಾಯುವಿಹಾರಕ್ಕೆ ಹೋದವರು ನೀರಿನಲ್ಲಿ ನೀಲಿ ಬಣ್ಣದ ಬೆಳಕನ್ನು ಕಂಡು ಅಚ್ಚರಿಗೊಳ್ಳುತ್ತಿದ್ದಾರೆ.

ವೈಜ್ಞಾನಿಕವಾಗಿ ‘ಡೈನೋಫ್ಲಾಗೆಲೆಟ್ ನಾಕ್ಟಿಲುಕ ಸಿಂಟಿಲನ್ಸ್’ (Dinoflagellate Noctiluca scintillans) ಎಂಬ ಸೂಕ್ಷ್ಮಜೀವಿಗಳು ದೇಹದಿಂದ ರಾಸಾಯನಿಕವನ್ನು ಸ್ರವಿಸಿದಾಗಿ ನೀಲಿ ಬಣ್ಣದ ಬೆಳಕು ಮೂಡುತ್ತದೆ. ಮಿಂಚುಹುಳುವಿನ ಮಾದರಿಯಲ್ಲಿ ಹೊಳೆಯುತ್ತವೆ. ಒಂದೇ ಜೀವಕೋಶ ಹೊಂದಿರುವ ಈ ಸೂಕ್ಷ್ಮಜೀವಿಗಳು, ಲಕ್ಷಾಂತರ ಸಂಖ್ಯೆಯಲ್ಲಿ ಒಂದೆಡೆ ಸೇರಿದಾಗ ಇಂತಹ ವಿದ್ಯಮಾನ ಗೋಚರಿಸುತ್ತದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ, ‘ಕಳೆದ ಬಾರಿ ಭಟ್ಕಳದವರೆಗೂ ಕಡಲತೀರದಲ್ಲಿ ಕಾಣಿಸಿಕೊಂಡಿದ್ದವು. ಈ ಬಾರಿ ಗೋಕರ್ಣದವರೆಗೂ ಗೋಚರಿಸಿದ್ದಾಗಿ ತಿಳಿದುಬಂದಿದೆ. ಸಮುದ್ರದಲ್ಲಿ ಅವುಗಳಿಗೆ ಪೂರಕವಾದ ವಾತಾವರಣ ಕಂಡುಬಂದಾಗ ಹುಲುಸಾಗಿ ಬೆಳೆಯುತ್ತವೆ’ ಎಂದರು.

ಬೆಳವಣಿಗೆ ಹೇಗೆ?:

‘ನದಿಯಲ್ಲಿರುವ ಪೋಷಕಾಂಶಗಳು ಮಳೆಗಾಲದಲ್ಲಿ ಸಮುದ್ರಕ್ಕೆ ಸೇರುತ್ತವೆ. ಜೊತೆಗೇ ಅದೆಷ್ಟೋ ಚರಂಡಿಗಳ ನೀರು ಕೂಡ ಸಮುದ್ರದಲ್ಲಿ ವಿಲೀನವಾಗುತ್ತದೆ. ಇದರಿಂದ ಆಲ್ಗೆಗಳ ಬೆಳವಣಿಗೆಗೆ ಬೇಕಾದ ಪೋಷಕಾಂಶ ಸಿಗುತ್ತದೆ. ಜೊತೆಗೇ ಬಿಸಿಲು ಕೂಡ ಇರುವುದು ಅವುಗಳಿಗೆ ಅನುಕೂಲಕರ ವಾತಾವರಣ ಉಂಟುಮಾಡುತ್ತದೆ. ಸಮುದ್ರದಾಳದಲ್ಲಿ ಹೂಳೆತ್ತುವಂಥ ಕಾರ್ಯಗಳ ಮೂಲಕ ಮನುಷ್ಯನ ಹಸ್ತಕ್ಷೇಪ ಹೆಚ್ಚಾಗುವುದೂ ಇದಕ್ಕೆ ಕಾರಣಗಳಲ್ಲಿ ಒಂದು’ ಎಂದು ಅವರು ವಿವರಿಸಿದರು.

‘ಕೆಲವು ವರ್ಷಗಳ ಹಿಂದಿನವರೆಗೆ ಬಾಂಗ್ಡೆ, ತಾರ್ಲಿ ಮೀನುಗಳು ಹೆಚ್ಚಿರುತ್ತಿದ್ದವು. ಅವುಗಳು ಆಲ್ಗೆಗಳನ್ನು ತಿನ್ನುತ್ತಿದ್ದ ಕಾರಣ ನಿಯಂತ್ರಣದಲ್ಲಿ ಇರುತ್ತಿದ್ದವು. ಆದರೆ, ಈಚೆಗೆ ಈ ಮೀನುಗಳ ಸಂತತಿ ಕಡಿಮೆಯಾಗಿದೆ. ಈ ಪ್ರಭೇದದ ಆಲ್ಗೆಯೊಂದೇ ಸಮುದ್ರದಲ್ಲಿ ಬೆಳೆಯುತ್ತಿದ್ದು, ಇತರ ಜಾತಿಯವು ಹೆಚ್ಚಾಗಲು ಅವಕಾಶವಿಲ್ಲದಂತಾಗಿದೆ. ಇದು ಒಂದು ರೀತಿಯಲ್ಲಿ ಮೀನುಗಳಿಗೆ ಆಹಾರದ ಕೊರತೆಯಾಗಲೂ ಕಾರಣವಾಗಿದೆ. ಹೀಗಾಗಿ ಮೀನುಗಳು ಸೊರಗಿ ಮೀನುಗಾರಿಕೆಯೂ ಕುಂಠಿತವಾಗುತ್ತದೆ’ ಎಂದು ತಿಳಿಸಿದರು.

ಮಾದರಿಯ ಅಧ್ಯಯನ:

‘ಬೆಳಕು ಸೂಸುವ ಆಲ್ಗೆಗಳು 1949ರಲ್ಲಿ ಮೊದಲ ಬಾರಿಗೆ ಲಕ್ಷದ್ವೀಪದಲ್ಲಿ ಕಾಣಿಸಿಕೊಂಡವು. ಕಾರವಾರದಲ್ಲಿ 2017ರಲ್ಲಿ ಮೊದಲ ಬಾರಿಗೆ ದಾಖಲಾಯಿತು. ಮೂರು ವರ್ಷಗಳಿಂದ ಗೋಚರಿಸಲು ಕಾರಣವೇನು ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಲಾಗುತ್ತದೆ’ ಎಂದು ಡಾ.ಶಿವಕುಮಾರ ಹರಗಿ ತಿಳಿಸಿದರು.

‘ನೀರಿನ ಮಾದರಿಯನ್ನು ವಾಸ್ಕೊದ ರಾಷ್ಟ್ರೀಯ ಸಮುದ್ರ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗುವುದು. ಈ ಸಂಬಂಧ ಅಲ್ಲಿನ ವಿಜ್ಞಾನಿ ರವಿ ನಾಯಕ ಅವರೊಂದಿಗೆ ಚರ್ಚಿಸಲಾಗಿದೆ’ ಎಂದು ಹೇಳಿದರು.

******

– ಕಾರವಾರದಂಥ ಕಡಲತೀರ ಮತ್ತೊಂದೆಡೆ ಇಲ್ಲ. ದಿನವೂ ಅಚ್ಚರಿಗಳು ಕಾಣಸಿಗುತ್ತವೆ. ಮುಂಜಾನೆ ವಾಯುವಿಹಾರಕ್ಕೆ ಹೋದಾಗ ನೀಲಿಬಣ್ಣದ ಬೆಳಕು ಕಂಡು ಆಶ್ಚರ್ಯಗೊಂಡೆ.
– ಪಿ.ಎಸ್.ಭಟ್, ಕಾರವಾರದ ನಿವಾಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು