ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

45 ವರ್ಷದ ಮೇಲಿನ ಎಲ್ಲರಿಗೂ ಲಸಿಕೆ

ಜಿಲ್ಲೆಯಲ್ಲಿ 3.90 ಲಕ್ಷ ಜನರಿಗೆ ನೀಡುವ ಗುರಿ: ಇಂದಿನಿಂದ ವಿತರಣೆ
Last Updated 31 ಮಾರ್ಚ್ 2021, 14:24 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯಲ್ಲಿ 45 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲರಿಗೂಏ.1ರಿಂದ ಕೋವಿಡ್ ಲಸಿಕೆ ವಿತರಿಸಲಾಗುವುದು. ಒಟ್ಟು 3.90 ಲಕ್ಷ ಜನರನ್ನು ಇದರಲ್ಲಿ ತೊಡಗಿಸಿಕೊಳ್ಳುವ ಗುರಿ ಹೊಂದಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರದ್ ನಾಯಕ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈಗಾಗಲೇ ಮೊದಲ ಮತ್ತು ಎರಡನೇ ಹಂತದಲ್ಲಿ 60 ಸಾವಿರ ಡೋಸ್ ಲಸಿಕೆಗಳನ್ನು ನೀಡಲಾಗಿದೆ. 35 ಸಾವಿರ ಡೋಸ್ ಲಸಿಕೆ ಸಂಗ್ರಹವಿದೆ. ಅದು ಖಾಲಿಯಾಗುತ್ತಿದ್ದಂತೆ ಸರ್ಕಾರದಿಂದ ಮತ್ತಷ್ಟು ಪೂರೈಕೆಯಾಗಲಿದೆ. ಹಾಗಾಗಿ ಲಸಿಕೆಯ ಕೊರತೆಯಾಗುವುದಿಲ್ಲ’ ಎಂದು ಹೇಳಿದರು.

‘ಈಗ ಜಿಲ್ಲಾ ಆಸ್ಪತ್ರೆ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಮುಂದಿನ ಹಂತದಲ್ಲಿ ಪ್ರಾಥಮಿಕ ಹಾಗೂ ಉಪ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಆಗ ಸರ್ಕಾರ ನಿಗದಿ ಪಡಿಸಿದ ಗುರಿಯನ್ನು ತಲುಪುವುದು ಕಷ್ಟವಾಗುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರ್.ಸಿ.ಎಚ್. ಡಾ.ರಮೇಶ ರಾವ್ ಮಾತನಾಡಿ, ‘ಜಿಲ್ಲೆಯಾದ್ಯಂತ ಲಸಿಕೆ ಪಡೆದುಕೊಳ್ಳಲು ಸಾರ್ವಜನಿಕರು ಉತ್ಸಾಹ ತೋರುತ್ತಿದ್ದಾರೆ. ಆದರೆ, ಭಟ್ಕಳ ಮತ್ತು ಜೊಯಿಡಾ ತಾಲ್ಲೂಕಿನಲ್ಲಿ ಉಳಿದ ತಾಲ್ಲೂಕುಗಳಿಗೆ ಹೋಲಿಸಿದರೆ ಪ್ರಮಾಣ ಕಡಿಮೆಯಿದೆ. ಜೊಯಿಡಾ ತಾಲ್ಲೂಕಿನಲ್ಲಿ ಭೌಗೋಳಿಕ ಕಾರಣದಿಂದಾಗಿ ಅಡಚಣೆಯಾಗಿದೆ. ಉಪ ಕೇಂದ್ರಗಳಲ್ಲೂ ಲಸಿಕೆ ನೀಡಲು ಶುರು ಮಾಡಿದ ಬಳಿಕ ಈ ಸಮಸ್ಯೆ ಬಗೆಹರಿಯಲಿದೆ’ ಎಂದರು.

ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ:

‘ಶಾಲೆಗಳಲ್ಲಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಕೋವಿಡ್ ಪಾಸಿಟಿವ್ ವರದಿಯಾಗುತ್ತಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮಾಡಲಾಗಿದೆ. ಹೊರ ರಾಜ್ಯಗಳು, ಹೊರ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳ ಗಂಟಲು ದ್ರವದ ಮಾದರಿಯ ತಪಾಸಣೆಗೆ ಸೂಚಿಸಲಾಗಿದೆ. ಯಲ್ಲಾಪುರ ತಾಲ್ಲೂಕಿನಲ್ಲೇ 600 ಮಾದರಿಗಳನ್ನು ಸಂಗ್ರಹಿಸಲಾಗಿದೆ’ ಎಂದು ಡಾ. ಶರದ್ ನಾಯಕ ತಿಳಿಸಿದರು.

‘ಕೆಎಸ್ಆರ್‌ಟಿಸಿ ಮತ್ತು ಅಂಚೆ ಇಲಾಖೆ ನೌಕರರನ್ನೂ ಮುಂಚೂಣಿ ಕಾಯಕರ್ತರು ಎಂದು ಪರಿಗಣಿಸಲಾಗಿದೆ. ಅವರು ಯಾವುದೇ ವಯೋಮಿತಿಯವರಿದ್ದರೂ ಲಸಿಕೆ ಕೊಡಲಾಗುತ್ತದೆ’ ಎಂದು ಡಾ.ರಮೇಶ ರಾವ್ ಮಾಹಿತಿ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿನೋದ್ ಭೂತೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT