ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಉಪ್ಪು ನೀರಿನಿಂದ ಕಂಗೆಟ್ಟ ಅಂಬೀವಾಡ

ಕಾರವಾರ ತಾಲ್ಲೂಕಿನ ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ
Last Updated 22 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕಾರವಾರ: ಸಮೀಪದಲ್ಲೇ ನದಿ ಹರಿದರೂ ಇಲ್ಲಿನ ಜನರಿಗೆ ಕುಡಿಯಲು ನೀರಿಲ್ಲ. ಊರಿನಲ್ಲಿರುವ ಒಂದೇ ಬಾವಿಯನ್ನು ಹತ್ತಾರು ಮನೆಗಳು ನೆಚ್ಚಿಕೊಳ್ಳುವ ಅನಿವಾರ್ಯತೆ. ಸಿಕ್ಕಿದಷ್ಟು ನೀರನ್ನು ಕೊಡಗಳಲ್ಲಿ ಹೊತ್ತುಕೊಂಡು ಬಂದರಷ್ಟೇ ದಾಹ ತೀರಲು ಸಾಧ್ಯ.

ಇದು ತಾಲ್ಲೂಕಿನ ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೀವಾಡದ ಜನರ ದುಃಸ್ಥಿತಿ. ಗ್ರಾಮದ ಅಂಚಿನಲ್ಲಿ ಕಾಳಿ ನದಿ ಹರಿಯುತ್ತದೆ. ಆದರೆ, ಸಮುದ್ರದ ನೀರು ಹಿಮ್ಮೆಟ್ಟುವ ಕಾರಣ ನದಿಯ ತುಂಬ ಉಪ್ಪು ನೀರು ತುಂಬಿಕೊಳ್ಳುತ್ತದೆ. ಇದನ್ನು ತಡೆಯಲೆಂದು ಐದಾರು ವರ್ಷಗಳ ಹಿಂದೆ ಅಂಬೀವಾಡದಲ್ಲಿ ಖಾರ್ಲ್ಯಾಂಡ್ ಗೇಟ್‌ಗಳನ್ನು (ಬಾಂದಾರ) ಅಳವಡಿಸಲಾಯಿತು. ಆದರೆ, ಅವುಗಳ ನಿರ್ವಹಣೆಯಿಲ್ಲದೇ ಕಾಮಗಾರಿ ಪ್ರಯೋಜನಕ್ಕೆ ಬಾರದಂತಾಗಿದೆ.

ನದಿಯಿಂದ ನೀರು ಜಮೀನಿಗೆ ಬರುವಲ್ಲಿ ಕಲ್ಲು, ಕಾಂಕ್ರೀಟ್‌ನ ಕಟ್ಟೆಯನ್ನು ನಿರ್ಮಿಸಲಾಗಿದೆ. ಅದಕ್ಕೆ ಎರಡು ಗೇಟ್‌ಗಳನ್ನು ಅಳವಡಿಸಲು ವ್ಯವಸ್ಥೆಯಿದೆ. ಆದರೆ, ಅವುಗಳಲ್ಲಿ ಇರಬೇಕಿದ್ದ ಹಲಗೆಗಳು ಕಾಣೆಯಾಗಿವೆ. ಇದರ ಪರಿಣಾಮ, ಉಪ್ಪು ನೀರು ಜಮೀನಿಗೆ ಹರಿದು ಅಲ್ಲಿ ಇಂಗುತ್ತಿದೆ. ಅಂತರ್ಜಲದೊಂದಿಗೆ ಸೇರಿಕೊಂಡು ಮಾರ್ಚ್ ಆರಂಭದಿಂದಲೇ ಬಾವಿಗಳ ನೀರು ಬಳಕೆಗೆ ಸಿಗದಂತಾಗುತ್ತಿದೆ.

ಗೇಟ್‌ ಬಳಿಗೆ ಸಾಗುವ ದಾರಿಯ ನಿರ್ವಹಣೆಯೂ ಆಗಿಲ್ಲ. ಮುಖ್ಯರಸ್ತೆಯಿಂದ ಸುಮಾರು 100 ಮೀಟರ್ ಒಳಗೆ ಮುಳ್ಳು, ಕುರುಚಲು ಗಿಡಗಳು ಬೆಳೆದಿವೆ.

‘ಅಂಬೀವಾಡದಲ್ಲಿ ಖಾಸಗಿಯವರ ಜಮೀನಿನಲ್ಲಿ ಒಂದು ಬಾವಿಯಿದೆ. ಅಲ್ಲಿಂದಲೇ ಎಲ್ಲರೂ ಕುಡಿಯುವ ನೀರು ತರುತ್ತೇವೆ. ಬಾಂದಾರವನ್ನು ನಿರ್ವಹಣೆ ಮಾಡುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಗೆ ಕೇಳಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿ ಜಗದೀಶ ಬೇಸರ ವ್ಯಕ್ತಪಡಿಸುತ್ತಾರೆ.

ನಿಂತ ನೀರಿನಿಂದ ವಾಸನೆ:

ಕಾಳಿ ನದಿಯ ಸಮೀಪದಲ್ಲೇ ಇರುವ ತಾರಿವಾಡದ ತಗ್ಗುಪ್ರದೇಶದಲ್ಲಿ ಉಪ್ಪು ನೀರು ನಿಂತಿದೆ. ಅದರ ಸುತ್ತಮುತ್ತ ಇದ್ದ ಗಿಡಗಳು ಕೊಳೆತು ಸುತ್ತಮುತ್ತ ವಾಸನೆ ಬರುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

ತಾರಿವಾಡದ ಸಮೀಪದಲ್ಲಿರುವ ಬಾಬು ನಾಯ್ಕ ವಾಡದಲ್ಲಿ ಕೂಡ ಕುಡಿಯುವ ನೀರಿಗೆ ತೊಂದರೆಯಿದೆ. ಇಡೀ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಮನೆಗಳಿದ್ದು, ಡಿಸೆಂಬರ್ ನಂತರ ಶುದ್ಧ ನೀರಿನ ಹುಡುಕಾಟ ಶುರುವಾಗುತ್ತದೆ. ಬೇಸಿಗೆಯ ಕೊನೆಯಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಕೊಡಲಾಗುತ್ತದೆ. ಅದು ಸಾಕಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು.

‌ಈ ಬಗ್ಗೆ ಪ್ರತಿಕ್ರಿಯೆಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಲಭ್ಯರಾಗಲಿಲ್ಲ.

* ಅಂಬೀವಾಡದ ಖಾರ್ಲ್ಯಾಂಡ್ ಬಾಂದಾರವು ಸಣ್ಣ ನೀರಾವರಿ ಇಲಾಖೆಯಿಂದ ಹಸ್ತಾಂತರವಾಗಿಲ್ಲ. ಅದರ ನಿರ್ವಹಣೆಯು ಗ್ರಾಮ ಪಂಚಾಯಿತಿಗೆ ಸಂಬಂಧ ಪಡುವುದಿಲ್ಲ.

– ಪ್ರೀತಿ ಹೊಸಮನಿ, ಹಣಕೋಣ ಗ್ರಾ.ಪಂ ಪಿ.ಡಿ.ಒ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT