ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಿಗೆ ದರ: ರೈತರಿಗಿಲ್ಲ ಖುಷಿ

ಅಕ್ರಮ ಅಡಿಕೆ ಆಮದು ವಹಿವಾಟಿಗೆ ಕಡಿವಾಣ: ಬೆಲೆ ಏರಿಕೆಗೆ ಕಾರಣ
Last Updated 13 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಶಿರಸಿ: ಮೂರು ವರ್ಷಗಳ ನಂತರ ಮತ್ತೆ ಚಾಲಿ ಅಡಿಕೆಗೆ ಉತ್ತಮ ದರ ಬಂದಿದೆ. ಆದರೆ, ಹಂಗಾಮಿನ ಆರಂಭದಲ್ಲೇ ಉತ್ಪನ್ನವನ್ನು ಮಾರಾಟ ಮಾಡಿರುವ ರೈತರು, ಏರುಮುಖದಲ್ಲಿ ಸಾಗುತ್ತಿರುವ ದರವನ್ನು ಕಂಡು ಕೈಹೊಸಕಿಕೊಳ್ಳುತ್ತಿದ್ದಾರೆ.

ಡಿಸೆಂಬರ್ ತಿಂಗಳ ಆರಂಭದಿಂದ ಕ್ವಿಂಟಲ್‌ವೊಂದಕ್ಕೆ ಸರಾಸರಿ ₹ 28,500 ದರ ಮುಂದುವರಿದಿದೆ. ಬೆಲೆ ಏರುಗತಿಯಲ್ಲಿ ಸಾಗಿದರೂ, ಮಾರುಕಟ್ಟೆಯಲ್ಲಿ ಉತ್ಪನ್ನಗಳ ಆವಕದಲ್ಲಿ ಹೆಚ್ಚಳವಾಗಿಲ್ಲ. ಶೇ 80ರಷ್ಟು ಉತ್ಪನ್ನ ಈಗಾಗಲೇ ವಿಕ್ರಯವಾಗಿದೆ. ಹೀಗಾಗಿ, ಸಣ್ಣ, ಅತಿ ಸಣ್ಣ ರೈತರಿಗೆ ಬೆಲೆ ಏರಿಕೆಯ ಲಾಭ ದೊರೆತಿಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಪ್ರಮುಖ ಅಡಿಕೆ ವಹಿವಾಟು ಸಂಸ್ಥೆಯಾಗಿರುವ ಇಲ್ಲಿನ ಟಿಎಸ್‌ಎಸ್‌ನಲ್ಲಿ ಕಳೆದ ವರ್ಷ ಚಾಲಿ ಕ್ವಿಂಟಲ್‌ಗೆ ಸರಾಸರಿ ₹ 25,800 ದರವಿತ್ತು. ಸೆಪ್ಟೆಂಬರ್‌ನಲ್ಲಿ ಕೇವಲ ಒಂದು ದಿನ ಗರಿಷ್ಠ ₹ 28,000 ದರ ಲಭ್ಯವಾಗಿತ್ತು. 2017ರಲ್ಲಿ ಗರಿಷ್ಠ ದರ ₹ 26,700 ಸಿಕ್ಕಿತ್ತು. ಈ ವರ್ಷ ಕೂಡ ಹಂಗಾಮು ಆರಂಭದ ಮಾರ್ಚ್‌ನಿಂದ ಜುಲೈ
ತನಕ ಚಾಲಿ ಅಡಿಕೆ ಕ್ವಿಂಟಲ್‌ಗೆ ಸರಾಸರಿ ದರ ₹ 21,200 ಇತ್ತು. ಆಗಸ್ಟ್‌ನಲ್ಲಿ ಕೊಂಚ ಏರಿಕೆಯಾದ ಬೆಲೆ, ನವೆಂಬರ್ ವೇಳೆಗೆ ₹ 26ಸಾವಿರ ತಲು
ಪಿತ್ತು ಎನ್ನುತ್ತಾರೆ ಟಿಎಸ್ಎಸ್‌ನ ಮಾರುಕಟ್ಟೆ ವಿಭಾಗದ ಪ್ರಮುಖ ರವಿಚಂದ್ರ ಹೆಗಡೆ.

‘2008ರವರೆಗೆ 60:40ರ ಅನುಪಾತದಲ್ಲಿ ಚಾಲಿ ಹಾಗೂ ಕೆಂಪಡಿಕೆ ಉತ್ಪನ್ನ ತಯಾರಾಗುತ್ತಿತ್ತು. ಅಡಿಕೆ ಕೊಯ್ಲು, ಸಂಸ್ಕರಣೆಗೆ ಕಾರ್ಮಿಕರ ಕೊರತೆಯಿಂದ ಶೇ 80ರಷ್ಟು ಬೆಳೆ ಚಾಲಿ ಅಡಿಕೆಯಾಗಿ ಮಾರುಕಟ್ಟೆಗೆ ಬರುತ್ತಿದೆ. ಆರ್ಥಿಕ ಮುಗ್ಗಟ್ಟು ಒಂದೆಡೆಯಾದರೆ, ದರ ಕುಸಿದರೆ ಎಂಬ ಆತಂಕದಿಂದ ಸಣ್ಣ ರೈತರು ಸಾಮಾನ್ಯವಾಗಿ ಏಪ್ರಿಲ್–ಮೇ ತಿಂಗಳ ವೇಳೆಗೆ ಉತ್ಪನ್ನ ಮಾರಾಟ ಮಾಡುತ್ತಾರೆ. ನಮಗೆ ಕ್ವಿಂಟಲ್‌ವೊಂದಕ್ಕೆ ₹ 22ಸಾವಿರ ಗರಿಷ್ಠ ದರ ದೊರೆತಿದೆ’ ಎನ್ನುತ್ತಾರೆ ರೈತ ಎಲ್‌.ಎಸ್.ಹೆಗಡೆ ಭೈರುಂಬೆ.

‘ಯಂತ್ರದಲ್ಲಿ ಚಾಲಿ ಸುಲಿದರೆ ಗುಣಮಟ್ಟ ಇರುವುದಿಲ್ಲ. ಕೆಲಸಗಾರರನ್ನು ಅವಲಂಬಿಸಿದರೆ ಕೂಲಿ ನೀಡುವುದೇ ಸಣ್ಣ ರೈತರಿಗೆ ಹೊರೆ. ಹೀಗಾಗಿ, ನಾವೇ ಚಾಲಿ ಸುಲಿದು ಮಾರುಕಟ್ಟೆಗೆ ತರಲು ವಿಳಂಬವಾಗುತ್ತದೆ. ತಡವಾಗಿರುವ ಕಾರಣಕ್ಕೆ ಇದೇ ಮೊದಲ ಬಾರಿ ಗರಿಷ್ಠ ದರ ಸಿಕ್ಕಿದೆ. ಆದರೆ, ಹೊಸ ಫಸಲು ಕುಂಠಿತವಾಗಿರುವುದರಿಂದ ಈ ವರ್ಷದ ಲಾಭ ಸರಿದೂಗುತ್ತದೆ’ ಎನ್ನುತ್ತಾರೆ ಬೆಳೆಗಾರ ಕಲ್ಲಳ್ಳಿಯ ಶ್ರೀಕೃಷ್ಣ ಶಾಸ್ತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT