ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರು, ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯ ಹೆಚ್ಚು: ಗುಜರಾತ್‌ನ ಶಾಸಕ ಜಿಗ್ನೇಶ್

ಗುಜರಾತ್‌ನ ಶಾಸಕ ಜಿಗ್ನೇಶ್ ಮೇವಾನಿ ಅಭಿಪ್ರಾಯ
Last Updated 6 ಫೆಬ್ರುವರಿ 2021, 13:43 IST
ಅಕ್ಷರ ಗಾತ್ರ

ಭಟ್ಕಳ: ‘ದೇಶದಲ್ಲಿ ದಲಿತ, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಜಾಸ್ತಿ ದೌರ್ಜನ್ಯಕ್ಕೆ ಒಳಗಾದವರೂ ಅವರೇ ಆಗಿದ್ದಾರೆ’ ಎಂದು ಗುಜರಾತ್‌ನ ಶಾಸಕ ಜಿಗ್ನೇಶ್ ಮೇವಾನಿ ಹೇಳಿದರು.

ಬೆಂಗಳೂರಿನ ಮಾಸ್ ಮೀಡಿಯಾ ಫೌಂಡೇಶನ್ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಘಟನೆಯ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘2024ಕ್ಕಿಂತ ಮೊದಲೇ ಫ್ಯಾಸಿಸ್ಟರ ಸುಳ್ಳು ಪ್ರಚಾರದ ವಿರುದ್ಧ ನಾವು ಒಂದು ಪ್ರಬಲ ವೇದಿಕೆಯನ್ನು ಹುಟ್ಟುಹಾಕಬೇಕು. ಇಲ್ಲದಿದ್ದರೆ ಮತ್ತೆ ನಮ್ಮ ದೇಶವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸಂಘ ಪರಿವಾರದ ದ್ವೇಷದ ಅಜೆಂಡಾಗಳನ್ನು ಜನರಿಗೆ ಮನವರಿಕೆ ಮಾಡಲು ಮಾಸ್ ಮೀಡಿಯಾ ಫೌಂಡೇಶನ್ ಸಮರ್ಪಕವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಮಾಜಿ ಐ.ಎ.ಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ‘ನಮ್ಮ ಹಿರಿಯರು ಬಾಳಿ ಬದುಕಿದ ಸೌಹಾರ್ದ ಭಾರತದ ಸೌಂದರ್ಯ, ಸ್ಫೂರ್ತಿಯನ್ನು ಒಂದು ವರ್ಗ ಹಾಳು ಮಾಡುತ್ತಿದೆ. ಪರಸ್ಪರರಲ್ಲಿ ದ್ವೇಷ, ಅಸೂಯೆ ಹುಟ್ಟಿಸಿ ದೇಶದ ಸಾರ್ವಭೌಮತೆಯನ್ನು ಹಾಳು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಹಿರಿಯರ ತ್ಯಾಗಗಳಿಂದಾಗಿ 70 ವರ್ಷಗಳವರೆಗೆ ದೇಶ ನಡೆದುಕೊಂಡು ಬಂತು. ಈಗ ದೇಶದ ದುರ್ಗತಿಯನ್ನೂ ನೀವು ಕಾಣುತ್ತಿದ್ದೀರಿ. ಅದನ್ನು ಮತ್ತೆ ಮೊದಲಿನ ಸ್ವರೂಪಕ್ಕೆ ಬದಲಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

ತಂಝೀಮ್ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವೇಝ್, ಮಾಸ್ ಮೀಡಿಯಾ ಫೌಂಡೇಶನ್ ಕಾರ್ಯದರ್ಶಿ ಉಮರ್ ಯು.ಎಚ್, ಅಕ್ಬರ್ ಅಲಿ ಉಡುಪಿ, ತಂಝೀಮ್ ಮುಖಂಡರಾದ ಇನಾಯತ್ ಉಲ್ಲಾ ಶಾಬಂದ್ರಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ, ಪುರಸಭೆ ಅಧ್ಯಕ್ಷ ಪರ್ವೇಝ್ ಕಾಶೀಂ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT