ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುವ ಹೊಸ ಕಟ್ಟಡ: ಅಸಮಾಧಾನ

ಬಾಲಭವನ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ ಭೇಟಿ: ಅಧಿಕಾರಿಗಳ ಸ್ಥಳಾಂತರಕ್ಕೆ ಸೂಚನೆ
Last Updated 19 ಫೆಬ್ರುವರಿ 2021, 15:54 IST
ಅಕ್ಷರ ಗಾತ್ರ

ಕಾರವಾರ: ‘ನಗರದಲ್ಲಿ ಕೇವಲ ಒಂಬತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಬಾಲಭವನ ಕಟ್ಟಡವು ಶಿಥಿಲಗೊಂಡಿದೆ. ಹೊಸ ಕಟ್ಟಡವೂ ಸೋರುತ್ತಿದೆ. ಮಂಜೂರಾದ ಅನುದಾನಕ್ಕೆ ಸರಿಯಾಗಿ ಕಟ್ಟಡ ಭದ್ರವಾಗಿಲ್ಲ’ ಎಂದು ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ನಿರ್ಮಾಣಗೊಂಡಿರುವ ಬಾಲಭವನ ಕಟ್ಟಡವನ್ನು ಶುಕ್ರವಾರ ಪರಿಶೀಲಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಹೊಸ ಕಟ್ಟಡದ ನಿರ್ಮಾಣ ಸಂದರ್ಭದಲ್ಲಿ ಇದ್ದ ಅಧಿಕಾರಿಗಳನ್ನು ಕರೆಸಿ ವಿಚಾರಣೆ ಮಾಡಲಾಗುವುದು. ಹಳೆಯ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಆರೋಗ್ಯದ ದೃಷ್ಟಿಯಿಂದ ಬೇರೆಡೆ ಸ್ಥಳಾವಕಾಶ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

‘ಪ್ರತಿ ಜಿಲ್ಲೆಯಲ್ಲೂ ಬಾಲಭವನಕ್ಕೆ ಸ್ವಂತ ಜಾಗ ಪಡೆಯುವುದು ನಮ್ಮ ಗುರಿಯಾಗಿದೆ. ಒಂದುವೇಳೆ ಜಾಗದ ಲಭ್ಯತೆ ಇಲ್ಲದಿದ್ದರೆ ಬೇರೆ ಇಲಾಖೆಗಳ ಕಟ್ಟಡಗಳನ್ನು ಎರವಲು ಪಡೆಯುತ್ತೇವೆ’ ಎಂದರು.

‘ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಬಳಿ ಮಕ್ಕಳ ಮನರಂಜನೆಗೆ ನಿರ್ಮಾಣಗೊಂಡಿದ್ದ ಪುಟಾಣಿ ರೈಲು ಪುನಃ ನಿರ್ಮಾಣ ಮಾಡುವಂತೆ ಪ್ರಸ್ತಾವ ಸಲ್ಲಿಕೆಯಾಗಿದೆ. ಆದರೆ, ಅದನ್ನು ಅಳವಡಿಸಲು ಸ್ಥಳ ಬೇಕಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಬಾಲಭವನ ಸೊಸೈಟಿಯ ಎಲ್ಲ ಕಾರ್ಯಕ್ರಮಗಳನ್ನು ಒಂದು ವರ್ಷದೊಳಗೆ ಪ್ರಾರಂಭಿಸಲಾಗುತ್ತದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅವರ ಅವಶ್ಯಕತೆಗಳನ್ನು ಪೂರೈಸಲು ಶ್ರಮ ವಹಿಸಬೇಕಾಗಿದೆ. ಇದಕ್ಕಾಗಿ ಕಾಯಂ ಸಿಬ್ಬಂದಿಯನ್ನು ನೇಮಿಸಲಾಗುವುದು. ಬಾಲಭವನದ ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯಕ್ಕಾಗಿ ಹಾಗೂ ಕಚೇರಿಗೆ ಬೇಕಾದ ಕಂಪ್ಯೂಟರ್, ಪೀಠೋಪಕರಣ ಹಾಗೂ ಆಧುನಿಕ ಆಟಿಕೆ ಸಾಮಗ್ರಿಗೆ ಪ್ರಸ್ತಾವ ಸಲ್ಲಿಸಿದರೆ ಅನುದಾನ ಮಂಜೂರು ಮಾಡಲು ಕೇಂದ್ರ ಕಚೇರಿ ಸಿದ್ಧವಿದೆ’ ಎಂದು ಹೇಳಿದರು.

ತಾಲ್ಲೂಕಿನಲ್ಲೂ ಭವನಕ್ಕೆ ಚಿಂತನೆ

‘ಬಾಲಭವನಕ್ಕೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾದರೆ ಪ್ರತಿ ತಾಲ್ಲೂಕಿನಲ್ಲಿ ಭವನ ನಿರ್ಮಿಸಲು ಚಿಂತಿಸಲಾಗುವುದು. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಬಾಲವೇದಿಕೆ, ವಾರಾಂತ್ಯ ಕಾರ್ಯಕ್ರಮ, ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುವುದು. ಈ ಮೂಲಕ ಮಕ್ಕಳ ಪ್ರತಿಭೆಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ತಲುಪುವಂತೆ ಮಾಡುವುದು ಸರ್ಕಾರದ ಧ್ಯೇಯವಾಗಿದೆ’ ಎಂದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಜಿ.ಪದ್ಮಾವತಿ, ಕಚೇರಿ ಅಧೀಕ್ಷಕ ಜಿ.ಆರ್.ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT