ಶುಕ್ರವಾರ, ಮಾರ್ಚ್ 5, 2021
30 °C
ಮೊಬೈಲ್‌ನಲ್ಲಿ ಮಾತನಾಡುತ್ತ ಬಂದು ಅಪಘಾತ ಮಾಡಿದ ಯುವಕ: ಐವರಿಗೆ ಗಾಯ

ಗೋಕರ್ಣ: ಬೈಕ್ ಅಡ್ಡಾದಿಡ್ಡಿ ಚಾಲನೆ, ಮಗು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಇಲ್ಲಿಯ ಗಂಗಾವಳಿ ಬಳಿ ಶುಕ್ರವಾರ ಸಂಜೆ ಮೊಬೈಲ್‌ನಲ್ಲಿ ಮಾತನಾಡುತ್ತ, ವೇಗವಾಗಿ ಬೈಕ್ ಚಲಾಯಿಸಿದ ಯುವಕನೊಬ್ಬ ಐವರಿಗೆ ಡಿಕ್ಕಿ ಹೊಡೆದಿದ್ದಾನೆ. ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಎಂಟು ತಿಂಗಳ ಹೆಣ್ಣು ಮಗು ಮೃತಪಟ್ಟಿದ್ದಾಳೆ.

ಮೃತಳನ್ನು ಪ್ರಣತಿ ಸುರೇಶ ನಾಯ್ಕ ಎಂದು ಗುರುತಿಸಲಾಗಿದೆ. ಆಕೆಯ ತಾಯಿ ಸುನೀತಾ ಸುರೇಶ ನಾಯ್ಕ, ಸಂಬಂಧಿಕರ ಪುತ್ರಿ ಮಾನ್ಯಾ ಉದಯ ನಾಯ್ಕ (11), ಪ್ರಮೀಳಾ ಚಂದ್ರಶೇಖರ ನಾಯ್ಕ ಹಾಗೂ ಅವರ ಮಗಳು ರಂಜಿತಾ ಚಂದ್ರಶೇಖರ ನಾಯ್ಕ (12) ಅವರಿಗೆ ಪೆಟ್ಟಾಗಿದೆ. ಹೆಲ್ಮೆಟ್ ಧರಿಸದೇ ಬಂದಿದ್ದ ಬೈಕ್ ಸವಾರ, ಹನೇಹಳ್ಳಿಯ ರಾಘವೇಂದ್ರ ವಿಠ್ಠಲ ಗೌಡ (21) ಕೂಡ ಗಾಯಗೊಂಡಿದ್ದಾರೆ.

ಇಬ್ಬರೂ ಮಹಿಳೆಯರು ಜೋಗನಗುಡ್ಡೆಯವರಾಗಿದ್ದು, ತಮ್ಮ ಮಕ್ಕಳನ್ನು ಗೋಕರ್ಣದ ವೈದ್ಯರ ಬಳಿಗೆ ಕರೆದುಕೊಂಡು ಹೋಗಲು ಬಸ್‌ಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಿದ್ದರು. ಅಲ್ಲಿಗೆ ವೇಗವಾಗಿ ಬೈಕ್ ಚಲಾಯಿಸುತ್ತ ಬಂದ ರಾಘವೇಂದ್ರ, ಅಲ್ಲಿದ್ದವರಿಗೆ ನೋಡನೋಡುತ್ತಿದ್ದಂತೆ ಡಿಕ್ಕಿ ಹೊಡೆದರು.

ಗಾಯಾಳುಗಳ ರಕ್ಷಣೆಗೆ ಧಾವಿಸಿದ ಸಾರ್ವಜನಿಕರು, ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಬೈಕ್ ಸವಾರ ರಾಘವೇಂದ್ರ ಅವರನ್ನು ಹೊರತು‍ಪಡಿಸಿ ಇತರ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಬಾಂಬೊಲಿಮ್ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಪ್ರಣತಿ ಮೃತಪಟ್ಟಳು.

ಮಾನ್ಯಾ ಉದಯ ನಾಯ್ಕ ಅವಳ ಬಲ ಕಾಲು ಮುರಿದು ಎಲುಬು ಹೊರಬಂದಿದೆ. ರಂಜಿತಾಳ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಪ್ರಮೀಳಾ ಅವರ ಎಡತೊಡೆ ಎಲುಬು ಮುರಿದಿದೆ. ಗೋಕರ್ಣದ ಆಸ್ಪತ್ರೆಯಲ್ಲಿ ಗಾಯಾಳುಗಳ ಯಾತನೆ, ರಕ್ತಮಯ ದೃಶ್ಯ ಅಲ್ಲಿದ್ದವರ ಮನ ಕಲಕುವಂತಿತ್ತು.

ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿ.ಎಸ್.ಐ ನವೀನ ನಾಯ್ಕ ತನಿಖೆ ಮುಂದುವರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು