ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ನಗರಸಭೆ ಬಿಜೆಪಿ ತೆಕ್ಕೆಗೆ

ಅಧ್ಯಕ್ಷರಾಗಿ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷರಾಗಿ ಪ್ರಕಾಶ ನಾಯ್ಕ ಅವಿರೋಧ ಆಯ್ಕೆ
Last Updated 1 ನವೆಂಬರ್ 2020, 12:21 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ನಿರೀಕ್ಷೆಯಂತೆಯೇ ಬಿಜೆಪಿಯ ಪಾಲಾಗಿವೆ. ಭಾನುವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿವಾರ್ಡ್‌ ನಂಬರ್ ನಾಲ್ಕರ ಸದಸ್ಯ ಡಾ.ನಿತಿನ್ ಪಿಕಳೆ ಮತ್ತು ಉಪಾಧ್ಯಕ್ಷರಾಗಿ ವಾರ್ಡ್‌ ನಂಬರ್ 30ರ ಪ್ರಕಾಶ ನಾಯ್ಕ ಅವಿರೋಧವಾಗಿ ಆಯ್ಕೆಯಾದರು.

ನಗರಸಭೆಯ ಒಟ್ಟು 31 ಸದಸ್ಯರ ಪೈಕಿ ಆಯ್ಕೆ ಪ್ರಕ್ರಿಯೆಯಲ್ಲಿ 20 ಮಂದಿ ಭಾಗವಹಿಸಿದ್ದರು. ಅವರಲ್ಲಿ ಬಿ.ಜೆ.ಪಿ.ಯ 11, ಜೆ.ಡಿ.ಎಸ್‌.ನ ನಾಲ್ವರು ಹಾಗೂ ಐವರು ಪಕ್ಷೇತರರು ಸೇರಿದ್ದರು.

ಇದೇವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಡಾ.ನಿತಿನ್ ಪಿಕಳೆ, ‘ಕಾರವಾರವನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಲು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತೇನೆ. ನಾಗರಿಕರು ನೀಡಿರುವ ಈ ಜವಾಬ್ದಾರಿಗೆ ಸರಿಯಾಗಿ, ನಗರದ ಹಿರಿಮೆಯನ್ನು ಹೆಚ್ಚಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಪಕ್ಷೇತರ ಮತ್ತು ಜೆಡಿಎಸ್ ಸದಸ್ಯರು ನೀಡಿರುವ ಬೇಷರತ್ ಬೆಂಬಲಕ್ಕೆ ಕೃತಜ್ಞತೆಗಳು. ಅವರು ನಗರದ ಅಭಿವೃದ್ಧಿಗಾಗಿ ಹೇಳಿರುವ ನಾಲ್ಕು ಬೇಡಿಕೆಗಳಲ್ಲಿ ಎಲ್ಲವೂ ಈಗಾಗಲೇ ಜಾರಿಯಲ್ಲಿವೆ. ಪ್ರಕ್ರಿಯೆಗಳು ಪೂರ್ಣಗೊಳ್ಳಲು ಸ್ವಲ್ಪ ದಿನ ಬೇಕಿದ್ದು, ಶಾಸಕಿ ಅದರ ಪ್ರಯತ್ನದಲ್ಲಿದ್ದಾರೆ’ ಎಂದು ಹೇಳಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ರಾಜ್ಯದ ಗಡಿಭಾಗದಲ್ಲಿರುವ ನಗರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಬೇಕು ಎಂಬುದು ನಾಗರಿಕರ ಕನಸು. ಇದಕ್ಕೆ ಪೂರಕವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಕಾರದೊಂದಿಗೆ ನಗರದ ಅಭಿವೃದ್ಧಿ ಮಾಡಲಾಗುತ್ತದೆ. ಇದಕ್ಕೆ ಕಾಂಗ್ರೆಸ್ ಕೂಡ ಸಹಕಾರ ನೀಡುವ ವಿಶ್ವಾಸವಿದೆ’ ಎಂದು ಹೇಳಿದರು.

ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಆಗಮಿಸಿ ಅಭ್ಯರ್ಥಿಗಳನ್ನು ಅಭಿನಂದಿಸಿ ಶುಭಾಶಯ ಕೋರಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.

ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯು ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ಕಾರವಾರ ನಗರಸಭೆ, ಅಂಕೋಲಾ ಪುರಸಭೆಯ ತನ್ನ ಮತ್ತು ಪಕ್ಷೇತರ ಸದಸ್ಯರನ್ನು ಗೋವಾದ ಕಾಣಕೋಣದ ರೆಸಾರ್ಟ್‌ಗೆ ಶನಿವಾರ ಕಳುಹಿಸಿತ್ತು. ಬಿ.ಜೆ.ಪಿ ತನ್ನ ಸದಸ್ಯರಿಗೆ ವಿಪ್ ಕೂಡ ಜಾರಿ ಮಾಡಿತ್ತು.

ಸ್ಪರ್ಧಿಸದ ಕಾಂಗ್ರೆಸ್: 11 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್, ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಲಿಲ್ಲ. ಬೆಳಿಗ್ಗೆ 11.30ರ ಮೊದಲುನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಪ್ರಿಯಾಂಗಾ ಸೂಚಿಸಿದ್ದರು. ಕಾಂಗ್ರೆಸ್‌ನ ಸದಸ್ಯರಾದ ಮೋಹನ ನಾಯ್ಕ ಮತ್ತು ಸಂದೀಪ ತಳೇಕರ್ 11.40ಕ್ಕೆ ಕನ್ನಡ ಭವನಕ್ಕೆ ಬಂದರು. ಕೆಲವೇ ನಿಮಿಷಗಳಲ್ಲಿ ಅವರು ಅಲ್ಲಿಂದ ವಾಪಸಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT