ಭಾನುವಾರ, ನವೆಂಬರ್ 1, 2020
20 °C
ಉಚಿತ ಶಿಕ್ಷಣ ನೀಡುತ್ತಿರುವ ಯುವಕ: 40 ವಿದ್ಯಾರ್ಥಿಗಳಿಗೆ ಬೋಧನೆ

ಮುಂಡಗೋಡ: ದೇವಾಲಯವೇ ಮಕ್ಕಳ ‘ವಿದ್ಯಾ ದೇಗುಲ’

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ (ಉತ್ತರ ಕನ್ನಡ): ಸಂಜೆ ಆಗುತ್ತಿದ್ದಂತೆ ಅಲ್ಲಿ ಮಕ್ಕಳು ಸೇರುತ್ತಾರೆ. ಪರಸ್ಪರ ಅಂತರ ಕಾಪಾಡಿಕೊಂಡು, ಆ ದಿನದ ‘ಮನೆಗೆಲಸ’ ಮಾಡಲು ಅಣಿಯಾಗುತ್ತಾರೆ. ಆನ್‌ಲೈನ್ ಮೂಲಕ ನೀಡಿರುವ ಪಾಠಗಳನ್ನು ಮನನ ಮಾಡಿಕೊಳ್ಳುತ್ತಾರೆ. ಅರ್ಥವಾಗದ ವಿಷಯಗಳನ್ನು ಅಲ್ಲಿನ ಯುವಕ ತಾಳ್ಮೆಯಿಂದ ಬಿಡಿಸಿ ಹೇಳಿಕೊಡುತ್ತಾರೆ.

ತಾಲ್ಲೂಕಿನ ನಂದಿಕಟ್ಟಾ ಗ್ರಾಮದ ಸಚಿನ್ ರಾಧಾಪುರ ಎಂಬುವವರು ಒಂದು ತಿಂಗಳಿಂದ 40 ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಗಣಪತಿ ದೇವಸ್ಥಾನದ ಆವರಣವೇ ತರಗತಿ ನಡೆಯುವ ಸ್ಥಳ.

‘ಪ್ರತಿ ದಿನ ಸಂಜೆ ಐದರಿಂದ ಏಳು ಗಂಟೆಯವರೆಗೆ, ಕೆಲವೊಮ್ಮೆ ನಂತರವೂ ಮಕ್ಕಳಿಗೆ ಕಲಿಸುತ್ತೇನೆ. ಸದ್ಯ ನಾಲ್ಕನೇ ತರಗತಿಯಿಂದ ಎಂಟನೇ ತರಗತಿವರೆಗಿನ ಮಕ್ಕಳು ಕಲಿಯಲು ಬರುತ್ತಿದ್ದಾರೆ. ಆನ್‌ಲೈನ್ ಮೂಲಕ ನೀಡಿರುವ ಚಟುವಟಿಕೆ ಮತ್ತು ವಿದ್ಯಾಗಮದ ಮೂಲಕ ಶಿಕ್ಷಕರು ಹೇಳುವ ಪಾಠ, ಮನೆಗೆಲಸವನ್ನು ಮಕ್ಕಳಿಕೆ ಮನವರಿಕೆ ಆಗುವಂತೆ ತಿಳಿಸುತ್ತೇನೆ. ಯಾವ ವಿದ್ಯಾರ್ಥಿಯಿಂದಲೂ ಹಣ ಪಡೆಯುವುದಿಲ್ಲ’ ಎನ್ನುತ್ತಾರೆ ಯುವಕ ಸಚಿನ್ ರಾಧಾಪುರ.

‘ಈ ಹಿಂದೆಯೂ ಶಾಲೆಯೊಂದರಲ್ಲಿ ಕೆಲವು ದಿನಗಳವರೆಗೆ ಪಾಠ ಮಾಡಿದ್ದೆ. ಮಕ್ಕಳಿಗೆ ಕ್ರೀಡಾ ತರಬೇತಿ ನೀಡುವ ಕೆಲಸ ಸಹ ಮಾಡಿದ್ದೇನೆ. ನನಗೆ ಗೊತ್ತಿರುವಷ್ಟು ಮಕ್ಕಳಿಗೆ ಕಲಿಸಬೇಕೆಂಬ ಆಸೆಯಿದೆ. ಪಿ.ಯು.ಸಿ ಮುಗಿಸಿದ ನಂತರ ದೂರಶಿಕ್ಷಣದ ಮೂಲಕ ಪದವಿ ಅಧ್ಯಯನ ಮಾಡುತ್ತಿದ್ದೇನೆ’ ಎಂದರು.

‘ಮನೆಯಲ್ಲಿ ಓದು ಎಂದರೆ ಮಕ್ಕಳು ಮಾತು ಕೇಳುವುದಿಲ್ಲ. ಆದರೆ, ಇಲ್ಲಿ ಚೆನ್ನಾಗಿ ಕಲಿಯುತ್ತಾರೆ. ಶಾಲೆ ಆರಂಭವಾಗುವವರೆಗೂ ಸಂಜೆ ವೇಳೆ ಶಿಕ್ಷಣ ನೀಡುವಂತೆ ಸಚಿನ್‌ಗೆ ಮನವಿ ಮಾಡಿದ್ದೇವೆ’ ಎಂದು ಪಾಲಕ ಬಸವರಾಜ ಮೋರೆ ಹೇಳುತ್ತಾರೆ.

ಶ್ಲಾಘನೀಯ: ‘ಕೊರೊನಾದಿಂದಾಗಿ ಶಾಲೆಗಳಲ್ಲಿ ತರಗತಿಗಳು ಆರಂಭವಾಗಿಲ್ಲ. ಆನ್‌ಲೈನ್, ವಿದ್ಯಾಗಮದ ಮೂಲಕ ನೀಡುವ ಶಿಕ್ಷಣವನ್ನೇ ಮಕ್ಕಳಿಗೆ ಮನನ ಮಾಡುವ ಯುವಕನ ಕೆಲಸ ಶ್ಲಾಘನೀಯವಾಗಿದೆ. ನಿಗದಿತ ಅಂತರ ಕಾಪಾಡಿಕೊಂಡು, ಮುಖಗವಸು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುತ್ತ, ಪ್ರತಿ ದಿನ ಎರಡು– ಮೂರು ಗಂಟೆ ಕಲಿಸುತ್ತಾರೆ’ ಎಂದು ಗ್ರಾಮದ ಯುವ ಮುಖಂಡ ಸುನೀಲ ಕೊಟಗೊಣಸಿ ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು