ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ದಡದಲ್ಲಿ ಆರಂಭವಾಗದ ದುರಸ್ತಿ

ಈ ಸಲದ ಮಳೆಗಾಲದ ನೀರು ಸಂಗ್ರಹಣೆಗೆ ರೈತರ ಒತ್ತಾಯ
Last Updated 12 ಜನವರಿ 2020, 19:45 IST
ಅಕ್ಷರ ಗಾತ್ರ

ಮುಂಡಗೋಡ: ನೀರಿನಲ್ಲಿ ಒಣಗಿ ನಿಂತ ಕೊಂಬೆಗಳ ಮೇಲೆ ಮೂಕಹಕ್ಕಿಗಳು ಕುಳಿತಿದ್ದರೆ, ಬಾಯ್ದೆರೆದು ನಿಂತಿರುವ ಎಡದಂಡೆಯಲ್ಲಿ ಕೆಮ್ಮಣ್ಣು ಗಟ್ಟಿ ಹಿಡಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಕಣ್ಣರಳಿಸಿ ನೋಡಬೇಕಿದ್ದ ನೀರನ್ನು, ತಲೆ ಬಾಗಿ ನೋಡಿ ತೃಪ್ತಿಪಡಬೇಕಾಗಿದೆ.

ಇದು ತಾಲ್ಲೂಕಿನ ಚಿಗಳ್ಳಿ ಜಲಾಶಯದ ನೋಟ. ಜಲಾಶಯ ಒಡೆದು ಐದು ತಿಂಗಳು ಕಳೆದಿವೆ. ಸಾವಿರಕ್ಕಿಂತ ಹೆಚ್ಚು ಎಕರೆ ಪ್ರದೇಶಕ್ಕೆ ನೀರುಣಿಸುತ್ತಿದ್ದ ಜಲಾಶಯದಲ್ಲಿ ನೀರವ ಮೌನ ಆವರಿಸಿದೆ. 70ರ ದಶಕದಲ್ಲಿ ನಿರ್ಮಾಣವಾಗಿದ್ದ ಚಿಗಳ್ಳಿ ಜಲಾಶಯದ ಎಡದಂಡೆ ಒಡ್ಡು, ಕಳೆದ ವರ್ಷ ಅಗಷ್ಟ್ 12ರಂದು ಒಡೆದಿತ್ತು. ಎರಡು ದಶಕಗಳಲ್ಲಿ ಎರಡನೇ ಬಾರಿಗೆ ಜಲಾಶಯದ ಕಟ್ಟೆ ಒಡೆದಿತ್ತು. ಮಳೆಗಾಲ ಆರಂಭಕ್ಕೆ 3–4 ತಿಂಗಳುಗಳು ಮಾತ್ರ ಉಳಿದಿವೆ. ಆದರೆ, ಇನ್ನೂ ತನಕ ದುರಸ್ತಿ ಕಾಮಗಾರಿ ಆರಂಭಗೊಂಡಿಲ್ಲ. ಇದರಿಂದ ದಡಪಾತ್ರದ ರೈತರಲ್ಲಿ ಆತಂಕದ ಮೂಡಿದೆ.

‘ಮಳೆ ನಿಂತ ಮೇಲೆ ತಾತ್ಕಾಲಿಕ ದುರಸ್ತಿ ಕೈಗೊಂಡು ತಕ್ಕಮಟ್ಟಿಗೆ ನೀರು ನಿಲ್ಲಿಸಲಾಗುವುದು ಎಂದು ಆಗ ಅಧಿಕಾರಿಗಳು ಹೇಳಿದ್ದರು. ಮತ್ತೊಂದು ಮಳೆಗಾಲ ಬರುವ ಸಮಯ ಬಂದರೂ, ಜಲಾಶಯದಲ್ಲಿ ಕಾಮಗಾರಿ ದುರಸ್ತಿ ನಡೆದಿಲ್ಲ. ಈ ವರ್ಷದ ಮಳೆ ನೀರನ್ನು ಜಲಾಶಯದಲ್ಲಿ ನಿಲ್ಲಿಸುವುದು ಅನುಮಾನ’ ಎನ್ನುತ್ತಾರೆ ದಡಪಾತ್ರದ ರೈತ ಅಣ್ಣಪ್ಪ ಜ್ಯೋತಿಬಾನವರ್.

‘ಚಿಗಳ್ಳಿ ಜಲಾಶಯದ ದುರಸ್ತಿಗೆ ₹ 9 ಕೋಟಿಯ ಕ್ರಿಯಾ ಯೋಜನೆ ಸಲ್ಲಿಸಲಾಗಿತ್ತು. ತಾಂತ್ರಿಕ ಸಲಹೆಯೊಂದಿಗೆ ಪುನಃ ಕ್ರಿಯಾಯೋಜನೆ ಕಳುಹಿಸಲು ಸೂಚಿಸಿದ್ದಾರೆ. ಮಂಜೂರು ದೊರೆತ ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಯೋಜನೆಯ ಅನುದಾನದ ಮೇಲೆ ಕಾಮಗಾರಿ ಅವಧಿ ನಿರ್ಧರಿತವಾಗುತ್ತದೆ’ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಗಿರೀಶ ಜೋಶಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಯೋಮೆಂಬ್ರೇನ್ ವಿಧಾನ:ತಜ್ಞರ ಸೂಚನೆಯಂತೆ ‘ಜಿಯೋಮೆಂಬ್ರೆನ್’ ವಿಧಾನದಿಂದ ಕಾಮಗಾರಿ ಕೈಗೊಳ್ಳಲಾಗುತ್ತದೆ. ಇದನ್ನು ಹೆಚ್ಚಾಗಿ ಹೈವೆ ನಿರ್ಮಾಣದಲ್ಲಿ ಅಳವಡಿಸುತ್ತಾರೆ. ಗದಗ ಜಿಲ್ಲೆಯ ತಾಮ್ರಗುಂಡಿ ಜಲಾಶಯ ಈ ಹಿಂದೆ ಮೂರು ಸಲ ಒಡೆದಿತ್ತು. ಅಲ್ಲಿ ತಜ್ಞರು ಇದೇ ವಿಧಾನದಿಂದ ಕಟ್ಟಿದ್ದಾರೆ. ಅದರಂತೆ ಚಿಗಳ್ಳಿ ಜಲಾಶಯದ 140 ಮೀಟರ್ ಉದ್ದದ ಒಡ್ಡಿಗೆ ಜಿಯೋಮೆಂಬ್ರೇನ್ ಅಳವಡಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT