ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜದೀವ್ ದ್ವೀಪಕ್ಕೆ ಪ್ರವೇಶ ಕೊಡಿ: ಕ್ರೈಸ್ತ ಮುಖಂಡರ ಒತ್ತಾಯ

Last Updated 2 ಫೆಬ್ರುವರಿ 2021, 14:33 IST
ಅಕ್ಷರ ಗಾತ್ರ

ಕಾರವಾರ: ‘ಸೀಬರ್ಡ್ ನೌಕಾನೆಲೆ ವ್ಯಾಪ್ತಿಯ ಅಂಜದೀವ್ ದ್ವೀಪದಲ್ಲಿರುವ ಪುರಾತನ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಧಾರ್ಮಿಕ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಅನುಮತಿ ಕೊಡಬೇಕು’ ಎಂದು ಗೋವಾದ ಕ್ರೈಸ್ತ ಸಮುದಾಯದ ಮುಖಂಡರು ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಪ್ಟನ್ ಎಡ್ಡಿ ವೇಗಸ್, ‘ಪೋರ್ಚುಗೀಸರು ಏಷ್ಯಾದಲ್ಲೇ ಮೊದಲ ಚರ್ಚ್ ಅನ್ನು ಅಂಜದೀವ್ ದ್ವೀಪದಲ್ಲಿ ನಿರ್ಮಿಸಿದರು. ಆ ಪ್ರದೇಶವನ್ನು ನೌಕಾನೆಲೆಗೆ ಹಸ್ತಾಂತರಿಸಿದ ಬಳಿಕ ಹಲವು ವರ್ಷಗಳವರೆಗೆ ಫೆಬ್ರುವರಿ ಮತ್ತು ಅಕ್ಟೋಬರ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೊಡಲಾಗುತ್ತಿತ್ತು. ಆದರೆ, ಬಳಿಕ ಅಲ್ಲಿಗೆ ಹೋಗುವುದನ್ನು ನಿಷೇಧಿಸಲಾಯಿತು’ ಎಂದು ಹೇಳಿದರು.

‘ಭದ್ರತೆಯ ದೃಷ್ಟಿಯಿಂದ ಜನರು ಗುಂಪಾಗಿ ಹೋಗಲು ಅವಕಾಶ ಕೊಡುವುದು ಬೇಡ. ಆದರೆ, ನಿಯಮಿತ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲು ಸರ್ಕಾರ ಅವಕಾಶ ಕೊಡಬೇಕು’ ಎಂದು ಒತ್ತಾಯಿಸಿದರು.

ಅಬೆಲ್ ಬೆರೆಟ್ಟೊ ಮಾತನಾಡಿ, ‘ಅಲ್ಲಿನ ಚರ್ಚ್‌ಗೆ ಹರಕೆ ಹೊತ್ತುಕೊಂಡಿರುವ ಹಿರಿಯರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪ್ರಧಾನಮಂತ್ರಿ, ರಕ್ಷಣಾ ಸಚಿವರು, ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದು ವಿನಂತಿ ಮಾಡಲಾಗಿದೆ. ಆದರೂ ಅನುಮತಿ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅರಿವಿಲ್ಲದೇ ಬರೆದ ಪತ್ರ’: ಅಂಜದೀವ್ ದ್ವೀಪಕ್ಕೆ ಹೋಗಲು ಅನುಮತಿ ಕೊಡಿಸುವ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಪೋರ್ಚುಗೀಸ್ ಪ್ರಧಾನಿಗೆ ಎರಡು ವರ್ಷಗಳ ಹಿಂದೆ ಪತ್ರ ಬರೆದಿದ್ದ ಗೋವಾದ ಕಾಣಕೋಣ ನಿವಾಸಿ ನಟವಿಡ್‌ ಡೇಸಾ, ಕ್ಷಮೆ ಯಾಚಿಸಿದರು.

‘ಅಲ್ಲಿನ ಪ್ರಧಾನಿ ಆಂಟಾನಿಯೊ ಕೋಸ್ಟಾ ಮೂಲತಃ ಗೋವಾದವರು. ಅವರ ಮೂಲಕವಾದರೂ ಸಹಾಯ ಸಿಗಬಹುದು ಎಂಬ ಏಕೈಕ ಉದ್ದೇಶದಿಂದ ಅವರಿಗೆ ಪತ್ರ ಬರೆಯಲಾಗಿತ್ತು. ದೇಶದ ಆಂತರಿಕ ವಿಚಾರದಲ್ಲಿ ಬೇರೆ ದೇಶದ ಸಹಾಯ ಕೇಳಿದ್ದು ತಪ್ಪೆಂದು ಅರಿವಾಗಿದೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ಹೇಳಿದರು.

ವಿಲ್ಸನ್ ಫರ್ನಾಂಡಿಸ್, ನೆಲ್ಸನ್ ಕುಟಿನೊ, ಟಿಗೋ ಡಿಸಿಲ್ವಾ, ಎವಿಡೊ ಪೆರೆಟ್ಟೊ, ಜಾನಿ ಲೋಪಿಸ್, ಅಲ್ಸಾವ್ ಡಿಸಿಲ್ವಾ ಸೇರಿದಂತೆ ಹಲವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT