ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನ ಜೀವನದೊಂದಿಗೆ ಸರ್ಕಾರ ಚೆಲ್ಲಾಟ’

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
Last Updated 14 ಜೂನ್ 2021, 16:48 IST
ಅಕ್ಷರ ಗಾತ್ರ

ಕಾರವಾರ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರದಲ್ಲಿ ಭಾರಿ ಏರಿಕೆ ಆಗುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಸುಭಾಸ್ ವೃತ್ತದ ಬಳಿಯಿರುವ ಪೆಟ್ರೋಲ್ ಬಂಕ್ ಎದುರು ಸೇರಿ, ತೈಲ ದರದ ಇಳಿಕೆಗೆ ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ, ಪೆಟ್ರೋಲ್ ದರವು ₹ 100ರಕ್ಕಿಂತ ಹೆಚ್ಚಾಗಿದ್ದನ್ನು ಖಂಡಿಸಿದರು. ಕ್ರಿಕೆಟ್ ಬ್ಯಾಟ್ ಮತ್ತು ಹೆಲ್ಮೆಟ್ ಅನ್ನು ಮೇಲೆತ್ತಿ ‘ಶತಕ’ ಎಂದು ಅಣಕವಾಡಿದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಬಿ.ಕೆ.ಹರಿಪ್ರಸಾದ್, ‘ಜನ ಕಷ್ಟದಲ್ಲಿರುವಾಗಲೇ ಕೇಂದ್ರ ಸರ್ಕಾರವು ಮಾನ, ಮರ್ಯಾದೆ ಇಲ್ಲದೇ ಇಂಧನ ದರ ಹೆಚ್ಚಿಸಿದೆ. ಇದರಿಂದ ಇತರ ಉತ್ಪನ್ನಗಳ ಬೆಲೆಯೂ ಹೆಚ್ಚಳವಾಗುತ್ತದೆ. ಸರ್ಕಾರವು ಜನ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ’ ಎಂದು ಟೀಕಿಸಿದರು.‌

‘ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಕಚ್ಚಾ ತೈಲ ಬೆಲೆಯು ಬ್ಯಾರಲ್‌ಗೆ 145 ಡಾಲರ್‌ಗೆ ಏರಿಕೆಯಾಗಿತ್ತು. ಆಗ ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರವು ₹ 74ಕ್ಕಿಂತ ಹೆಚ್ಚಾಗಿರಲಿಲ್ಲ. ಈಗ ಕಚ್ಚಾತೈಲಕ್ಕೆ 45 ಡಾಲರ್‌ ಇದೆ. ಆದರೂ ಇಂಧನ ದರ ಇಳಿಕೆಯಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ತನ್ನ ಆಡಳಿತವಿರುವ ರಾಜ್ಯಗಳಲ್ಲಿ ಇಂಧನದ ಮೇಲಿನ ಸುಂಕ ಇಳಿಕೆ ಮಾಡಲು ಕರೆ ನೀಡಲಿದೆಯೇ ಎಂಬ ಪ್ರಶ್ನೆಗೆ, ‘ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿ.ಎಸ್‌.ಟಿ ಅಡಿ ತರಬೇಕು ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದೆ ಇಡಲಾಗಿದೆ. ಕೇಂದ್ರ ಸರ್ಕಾರವೇ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಇಳಿಸಬೇಕು‍’ ಎಂದಷ್ಟೇ ಹೇಳಿದರು.

‘ಕೋವಿಡ್ ಸಂದರ್ಭದಲ್ಲಿ ಪಿ.ಎಂ ಕೇರ್ ಫಂಡ್ ಎಂದು ₹ 20 ಲಕ್ಷ ಕೋಟಿ ಸಂಗ್ರಹಿಸಲಾಗಿದೆ. ಅದನ್ನು ಯಾರ ಕಲ್ಯಾಣಕ್ಕೆ ಬಳಸಿದ್ದಾರೆ? ಬಜೆಟ್ ಮಂಡನೆ ವೇಳೆ ₹ 35 ಸಾವಿರ ಕೋಟಿಯನ್ನು ಕೋವಿಡ್ ಲಸಿಕೆಗೆ ಮೀಸಲಿಟ್ಟಿದ್ದಾಗಿ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಅದೇನಾಯಿತು’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಶಾಸಕರ ಖರೀದಿಗೆ ಹಣವಿದೆ. ಆದರೆ, ಲಸಿಕೆ ಹಾಗೂ ಹಾಸಿಗೆ ವ್ಯವಸ್ಥೆ ಮಾಡಲು ಹಣವಿಲ್ಲ. ಕೆಲವು ಶಾಸಕರು ಯಡಿಯೂರಪ್ಪ ಅವರನ್ನು ಹುದ್ದೆಯಿಂದ ಇಳಿಸಬೇಕು, ಮತ್ತೆ ಕೆಲವರು ಮುಂದುರಿಸಬೇಕು ಎಂದು ದೆಹಲಿಗೆ ಹೋಗುತ್ತಾರೆ. ಇಂಥ ಅನೈತಿಕ ಸರ್ಕಾರ ಇರಬೇಕಾ ಬೇಡವೇ ಎಂಬುದನ್ನು ಜನ ನಿರ್ಧರಿಸಬೇಕು’ ಎಂದರು.

‘ಪಾಕ್ ಹೆಸರಿಲ್ಲದೇ ಅಸಾಧ್ಯ’:

‘ಬಿಜೆಪಿಗೆ ಪಾಕಿಸ್ತಾನದ ಹೆಸರು ತೆಗೆದುಕೊಳ್ಳದಿದ್ದರೆ ಒಂದು ದಿನವೂ ರಾಜಕಾರಣ ಮಾಡಲಾಗದು. ಆ ದೇಶದ ಯಾವುದೇ ಆಹ್ವಾನ ಇಲ್ಲದಿದ್ದರೂ ಅಲ್ಲಿಗೆ ಹೋಗಿ ಬಂದವರು 56 ಇಂಚು ಎದೆಯ ಪ್ರಧಾನಿ ನರೇಂದ್ರ ಮೋದಿ’ ಎಂದು ಹರಿಪ್ರಸಾದ್ ಟೀಕಿಸಿದರು.

ಇದೇವೇಳೆ, ಅಂಕೋಲಾದ ಜೆಡಿಎಸ್ ಮುಖಂಡ ಮಂಜುನಾಥ ನಾಯ್ಕ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ, ಮುಖಂಡ ಸತೀಶ ಸೈಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ, ವಕ್ತಾರ ಶಂಭು ಶೆಟ್ಟಿ ಇದ್ದರು.

* ಸಂಕಷ್ಟದಲ್ಲಿರುವ ಬಡವರಿಗೆ ಸರ್ಕಾರಗಳು ಸಾಂತ್ವನ ಹೇಳಲಿಲ್ಲ. ಕೇಂದ್ರ, ರಾಜ್ಯದ ಬಿ.ಜೆ.ಪಿ ಸರ್ಕಾರಗಳ ಅಂತ್ಯಕ್ರಿಯೆ ಎಷ್ಟು ಬೇಗ ಆಗುವುದೋ ದೇಶಕ್ಕೆ ಅಷ್ಟು ಒಳ್ಳೆಯದು.

- ಬಿ.ಕೆ.ಹರಿಪ್ರಸಾದ, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT