ಗುರುವಾರ , ಅಕ್ಟೋಬರ್ 6, 2022
22 °C
ಕಲ್ಯಾಣ ಮಂಡಳಿ ರಕ್ಷಿಸಿ, ಕಾರ್ಮಿಕರನ್ನು ಉಳಿಸುವಂತೆ ಪ್ರತಿಭಟನೆ 21ರಂದು

ಅನವಶ್ಯಕ ಯೋಜನೆ ನಿಲ್ಲಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯನ್ನು ಬಳಸಿ ಜನಪ್ರಿಯ ಯೋಜನೆಗಳ ಜಾರಿಯನ್ನು ನಿಲ್ಲಿಸಬೇಕು. ಮಂಡಳಿ ಉಳಿಸಿ, ಕಾರ್ಮಿಕರನ್ನು ರಕ್ಷಿಸಿ ಎಂಬ ಘೋಷ ವಾಕ್ಯದೊಂದಿಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೆ.21ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಪ್ರಾಂತ ಸಂಘಟನಾ ಕಾರ್ಯದರ್ಶಿ ಹರಿಶ್ಚಂದ್ರ ಜಿ.ನಾಯ್ಕ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಪ್ರತಿ ವರ್ಷ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ₹ 2 ಸಾವಿರ ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡಲು ಅನುಮೋದನೆ ನೀಡಿದೆ. ಇದರಿಂದ ಅನವಶ್ಯಕ ಯೋಜನೆಗಳು ಜಾರಿಯಾಗಿ, ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವಿದೆ. ಮಂಡಳಿಯಿಂದ ಇದೇ ರೀತಿ ಹಣ ಖರ್ಚು ಮಾಡುತ್ತ ಹೋದರೆ ಮುಂದಿನ ಮೂರು– ನಾಲ್ಕು ವರ್ಷಗಳಲ್ಲಿ ಹಣವೆಲ್ಲ ಖಾಲಿಯಾಗಿ ಮಂಡಳಿಯ ಅಸ್ತಿತ್ವಕ್ಕೇ ಧಕ್ಕೆ ಆಗಬಹುದು’ ಎಂದು ಕಳವಳ ವ್ಯಕ್ತಪಡಿಸಿದರು.

‘ಮಂಡಳಿಯಿಂದ ಪ್ರತಿವರ್ಷ ವಾರ್ಷಿಕ ಕ್ಯಾಲೆಂಡರ್, ಕರಪತ್ರಗಳು, ಕಳಪೆ ದರ್ಜೆಯ ಟೂಲ್ ಕಿಟ್‌ಗಳು, ಎಲ್.ಇ.ಡಿ ಟಿ.ವಿ.ಗಳು, ತರಬೇತಿ ಶಿಬಿರಗಳು, ಅಬ್ಬರದ ಪ್ರಚಾರ, ಮಾಧ್ಯಮಗಳಲ್ಲಿ ಜಾಹೀರಾತು ಮುಂತಾದವುಗಳಿಗೆ ದುಂದು ವೆಚ್ಚ ಮಾಡಲಾಗುತ್ತಿದೆ. ಇಂಥ ಯೋಜನೆಗಳನ್ನು ಕೂಡಲೇ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

‘ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಇಂದಿರಾ ಕ್ಯಾಂಟೀನ್, ಅಂಬೇಡ್ಕರ್ ಸಹಾಯ ಹಸ್ತ, ಉದ್ಯೋಗ ಖಾತ್ರಿ, ಕೆ.ಎಸ್.ಆರ್.ಟಿ.ಸಿ.ಗೆ ಕೋಟ್ಯಂತರ ರೂಪಾಯಿ ಮುಂಗಡ ಹಣ ಕೊಡಲಾಗಿದೆ. ಇದನ್ನು ಮುಂದುವರಿಸಬಾರದು’ ಎಂದು ಹೇಳಿದರು.

‘2020ರ ಮಾರ್ಚ್‌ನಲ್ಲಿ ಕೋವಿಡ್ 19 ಮೊದಲ ಅಲೆಯ ಸಂದರ್ಭ ಸರ್ಕಾರ ಪ್ರಕಟಿಸಿದ ತಲಾ ₹ 5 ಸಾವಿರ ಧನಸಹಾಯವು ಶೇ 30ರಷ್ಟು ಕಾರ್ಮಿಕರಿಗೆ ಸಿಗಲಿಲ್ಲ. ಸೋಂಕಿನ ಎರಡನೇ ಅಲೆಯ ಸಮಯದಲ್ಲಿ ತಲಾ ₹ 3 ಸಾವಿರ ಧನಸಹಾಯವು ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮೆಯಾಗಿಲ್ಲ. ಈ ಬಗ್ಗೆ ಹಲವು ಬಾರಿ ಲಿಖಿತವಾಗಿ ಗಮನ ಸೆಳೆಯಲಾಗಿದೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಾರ್ಮಿಕರಿಗೆ ಸರ್ಕಾರದಿಂದ ಗುರುತಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕಾರ್ಡ್ ಪದ್ಧತಿಯನ್ನು ಜಾರಿ ಮಾಡಬೇಕು. ಇ.ಎಸ್.ಐ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಅನುಕೂಲವಾಗುತ್ತದೆ. ಆದರೆ, ಸರ್ಕಾರವು ಕಾರ್ಮಿಕರೊಂದಿಗೆ ಚರ್ಚಿಸದೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವುದು ನಿಷ್ಪ್ರಯೋಜಕವಾಗಿದೆ’ ಎಂದರು.

ಇದಕ್ಕೂ ಮೊದಲು ಒಟ್ಟು 17 ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಿಂತಾಮಣಿ ಜೋ.ಕೋಡಳ್ಳಿ, ಪ್ರಮುಖರಾದ ನಾಗೇಶ ನಾಯ್ಕ, ಉಮೇಶ ನಾಯ್ಕ, ಶಿವರಾಮ ಮೂರಿ, ಕೇದಾರಿ ಕೋಡಳ್ಳಿ, ಸುನಿತ್ ಕೋಡಳ್ಳಿ, ಸೀತಾರಾಮ ನಾಯ್ಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.