ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಗೆದ್ದವರ ಕಥೆ: ಪಿಕ್‌ನಿಕ್ ಹೋಗಿ ಬಂದ ಅನುಭವವಾಯ್ತು

Last Updated 3 ಆಗಸ್ಟ್ 2020, 14:57 IST
ಅಕ್ಷರ ಗಾತ್ರ

ಶಿರಸಿ: ‘ಕೋವಿಡ್ 19 ಪಾಸಿಟಿವ್ ಎಂದು ಪರೀಕ್ಷಾ ಫಲಿತಾಂಶ ಬಂದಾಗ ಭಯವಾಗಲಿಲ್ಲ. ಆದರೆ, ಅಕ್ಕಪಕ್ಕದವರು ನಮ್ಮ ಮನೆಯವರನ್ನು ಕೀಳಾಗಿ ನೋಡಿದ್ದರಿಂದ ದೈಹಿಕ ತೊಂದರೆಗಿಂತ ಮಾನಸಿಕ ಕಿರಿಕಿರಿಯೇ ಹೆಚ್ಚಾಯಿತು’ ಎಂದು ಬೇಸರಿಸಿಕೊಂಡರು ಶಿರಸಿಯ ರಘುನಾಥ.

ಇಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಒಂದು ವಾರ ಉಳಿದ ಮನೆಗೆ ಬಂದಿರುವ ಅವರು ‘ಪ್ರಜಾವಾಣಿ’ ಜೊತೆ ಅನುಭವ ಹಂಚಿಕೊಂಡರು. ‘ನನಗೆ ರೋಗದ ಯಾವ ಲಕ್ಷಣವೂ ಇರಲಿಲ್ಲ. ಆರೋಗ್ಯವಂತನಾಗಿದ್ದ ನನಗೆ ಕೋವಿಡ್ ಪಾಸಿಟಿವ್ ಬಂತು ಅಂದಾಗ ಒಮ್ಮೆ ಶಾಕ್ ಆಯಿತು. ನನ್ನ ಜೊತೆ ಕೆಲಸ ಮಾಡುವ ಆರೆಂಟು ಜನರಿಗೂ ಪಾಸಿಟಿವ್ ಬಂದಿತ್ತು. ಎಲ್ಲರೂ ಒಟ್ಟಿಗೇ ಕೋವಿಡ್ ಕೇರ್ ಸೆಂಟರ್ ಸೇರಿದೆವು’.

‘ಎಲ್ಲರೂ ಒಂದೇ ಕೊಠಡಿಯಲ್ಲಿ ಪ್ರತ್ಯೇಕವಾಗಿದ್ದೆವು. ಆರೋಗ್ಯವಾಗಿದ್ದ ನಾವು ಮನೆಯಲ್ಲಿ ಇದ್ದಂತೆ ಇದ್ದೆವು. ಆದರೆ, ಕೆಲಸವಿರಲಿಲ್ಲ. ಊಟ, ತಿಂಡಿ ಮಾಡುವುದು ಮತ್ತೆ ಮಲಗುವುದು ಇಷ್ಟೇ ಕೆಲಸವಾಗಿತ್ತು. ಒಂದೆರಡು ಮಾತ್ರೆಗಳನ್ನು ಕೊಡುತ್ತಿದ್ದರು. ಸ್ನೇಹಿತರೆಲ್ಲ ಒಂದೇ ಕಡೆ ಇದ್ದರಿಂದ ಸಮಯ ಕಳೆಯಲು ಹರಟೆ ಹೊಡೆಯುತ್ತಿದ್ದೆವು. ಹೀಗಾಗಿ, ಒಂದು ವಾರ ಪಿಕ್‌ನಿಕ್ ಹೋಗಿ ಬಂದ ಅನುಭವವಾಯಿತು’.

‘ನಾನು ಥಂಡಿ, ಜ್ವರ ಅಥವಾ ಇನ್ನಾವುದೇ ಆರೋಗ್ಯ ತೊಂದರೆಯ ಕಾರಣಕ್ಕೆ ಒಮ್ಮೆಯೂ ಆಸ್ಪತ್ರೆಗೆ ಹೋಗಿ ಬಂದವನಲ್ಲ. ಈಗ ಯಾವ ರೋಗವೂ ಇಲ್ಲದೇ ನಮ್ಮ ಕುಟುಂಬವನ್ನು ಮೈಲಿಯಾದಂತೆ ನೋಡುವುದನ್ನು ಕಂಡು ನೊಂದುಕೊಂಡಿದ್ದೆ. ಈಗ ಅಂತ ಸಣ್ಣ ಮನಸ್ಸಿನವರ ಬಗ್ಗೆ ಯೋಚಿಸುವುದನ್ನು ಬಿಟ್ಟಿದ್ದೇನೆ’.

‘ನಮ್ಮ ಮನೆಯಲ್ಲಿ ವಯಸ್ಸಾದವರು, ಚಿಕ್ಕ ಮಕ್ಕಳು ಇದ್ದಾರೆ. ನನ್ನನ್ನು ಹೊರತುಪಡಿಸಿ ಇನ್ಯಾರಿಗೂ ಪಾಸಿಟಿವ್ ಬಂದಿಲ್ಲ. ಕೋವಿಡ್ 19 ಅಷ್ಟೊಂದು ಭೀಕರ ಕಾಯಿಲೆ ಅಲ್ಲ. ದೃಶ್ಯ ಮಾಧ್ಯಮಗಳನ್ನು ನೋಡಿಕೊಂಡೇ ಜನರು ಹೆದರುತ್ತಾರೆ. ಪಾಸಿಟಿವ್ ಬಂದ ವ್ಯಕ್ತಿಯ ಮನೆಗೆ ಸ್ಟಿಕರ್ ಅಂಟಿಸುವುದೇ ದೊಡ್ಡ ಮುಜುಗರದ ಸಂಗತಿ. ಇದರಿಂದ ಕುಟುಂಬದವರಿಗೆ ಮಾನಸಿಕ ಹಿಂಸೆಯಾಗುತ್ತದೆ. ಈ ರೀತಿ ಸ್ಟಿಕರ್ ಅಂಟಿಸುವಾಗ ಸಂಬಂಧಪಟ್ಟವರು, ನೆರೆಹೊರೆಯವರಿಗೆ ತಿಳಿ ಹೇಳಬೇಕು. ಆಗಲಾದರೂ ಅವರ ಮನಃಸ್ಥಿತಿ ಬದಲಾಗಬಹುದು’.

ನಿರೂಪಣೆ: ಸಂಧ್ಯಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT