ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಆರ್.ಝೆಡ್: ತಂಗುದಾಣ ದುರಸ್ತಿಗೂ ನಿಯಮ ಅಡ್ಡಿ

ಸಿ.ಆರ್.ಝೆಡ್ ಅಡಚಣೆಯ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ
Last Updated 9 ಏಪ್ರಿಲ್ 2021, 15:39 IST
ಅಕ್ಷರ ಗಾತ್ರ

ಕಾರವಾರ: ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಗಾಗಿ ತೆರವು ಮಾಡಲಾದ ಬಸ್ ತಂಗುದಾಣದ (ಶೆಲ್ಟರ್) ಪುನರ್ ನಿರ್ಮಾಣಕ್ಕೂ ಕರಾವಳಿ ನಿಯಂತ್ರಣ ವಲಯದ (ಸಿ.ಆರ್.ಝೆಡ್) ನಿಯಮಗಳು ಅಡ್ಡಿಯಾಗಿವೆ. ನಗರಸಭೆ ಕಚೇರಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಯಿತು.

ಸದಸ್ಯ ಸಂದೀಪ ತಳೇಕರ್ ಮಾತನಾಡಿ, ‘ಕಾಳಿ ನದಿ ಸೇತುವೆ ಬಳಿಯಿದ್ದ ತಂಗುದಾಣ ದುರಸ್ತಿಯಾಗಿಲ್ಲ. ಸ್ವಾಗತ ಕಮಾನುಗಳ ನಿರ್ಮಾಣವಾಗಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನಗರಸಭೆ ಪ್ರಭಾರ ಆಯುಕ್ತ ಆರ್.ಪಿ. ನಾಯ್ಕ, ‘ಕಾಳಿ ನದಿ ಬಳಿಯ ಬಸ್ ತಂಗುದಾಣ ಸಿ.ಆರ್.ಝೆಡ್ ಪರಿಮಿತಿಯಲ್ಲಿದೆ. ಹಾಗಾಗಿ ಅದನ್ನು ಪುನಃ ನಿರ್ಮಿಸಲು ಅನುಮತಿ ಕೊಡಬಾರದು ಎಂದು ಸಮಿತಿಯ ಸಭೆಯಲ್ಲಿ ಠರಾವು ಮಾಡಿದ್ದಾರೆ’ ಎಂದರು.

‘ಈ ಹಿಂದೆ ನಗರಸಭೆಯಿಂದ ನಿಯಮ ಮೀರಿ ನಿರ್ಮಿಸಲಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಅಲ್ಲಿ ರಸ್ತೆಯ ಎರಡೂ ಕಡೆಗಳಲ್ಲಿ ಬಸ್ ತಂಗುದಾಣ ನಿರ್ಮಿಸಲು ಐ.ಆರ್.ಬಿ.ಗೆ ಸೂಚಿಸುವುದಾಗಿ ಹೇಳಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

‌‘ಐ.ಆರ್.ಬಿ.ಯು ನಗರಸಭೆಗೆ ಬಾಕಿ ಉಳಿಸಿರುವ ₹ 2.55 ಕೋಟಿಯನ್ನು ಮರುಪಾವತಿಸುವಂತೆ ಮೂರು ಬಾರಿ ಪತ್ರ ಬರೆಯಲಾಗಿದೆ. ಆದರೂ ಪ್ರತಿಕ್ರಿಯೆ ಬಂದಿಲ್ಲ’ ಎಂದೂ ತಿಳಿಸಿದರು. ಸಂಸ್ಥೆಯ ವಿರುದ್ಧ ದಾವೆ ಹೂಡುವಂತೆ ಠರಾವು ಮಾಡಲು ಸದಸ್ಯರು ಸಲಹೆ ನೀಡಿದರು.

ತ್ಯಾಜ್ಯ ನೀರು ವಿಲೇವಾರಿ ತೊಟ್ಟಿ ಇಲ್ಲದ ಅಪಾರ್ಟ್‌ಮೆಂಟ್‌ಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗುತ್ತಿದೆ. ಅಂಥ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧವೂ ಮೊಕದ್ದಮೆ ದಾಖಲಿಸಬೇಕು ಎಂದು ಸಂದೀಪ ಒತ್ತಾಯಿಸಿದರು. ಈ ಬಗ್ಗೆ ಹಿಂದಿನ ಠರಾವಿಗೆ ತಿದ್ದುಪಡಿ ಮಾಡಲು ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ ಸೂಚಿಸಿದರು.

ಸದಸ್ಯ ಮಕ್ಬೂಲ್ ಶೇಖ್ ಮಾತನಾಡಿ, ನಗರದ ಅಭಿವೃದ್ಧಿ ಸಂಬಂಧ ಪ್ರತ್ಯೇಕ ಸಭೆ ಹಮ್ಮಿಕೊಳ್ಳಬೇಕು ಎಂದರು. ಡಾ. ಪಿಕಳೆ, ‘ಪ್ರತಿ ಮಂಗಳವಾರ ಸಂಜೆ 4ರ ನಂತರ ಸದಸ್ಯರನ್ನು ಮಾತ್ರ ಭೇಟಿಯಾಗುತ್ತೇನೆ’ ಎಂದು ತಿಳಿಸಿದರು.

ಐದು ಕಡೆ ಬ್ಯಾನರ್‌ಗೆ ಅವಕಾಶ:

ನಗರ ವ್ಯಾಪ್ತಿಯ ಧಾರ್ಮಿಕ ಕೇಂದ್ರಗಳ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಐದು ಕಡೆ ಉಚಿತವಾಗಿ ಬ್ಯಾನರ್ ಕಟ್ಟಲು ಅವಕಾಶ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ಹಿಂದಿನ ಠರಾವಿಗೆ ತಿದ್ದುಪಡಿ ತರಲು ತೀರ್ಮಾನಿಸಲಾಯಿತು.

‘ಬ್ಯಾನರ್‌ಗಳನ್ನು ಕಟ್ಟಿದವರೇ ತೆರವು ಮಾಡಬೇಕು. ಒಂದುವೇಳೆ, ಮಾಡದಿದ್ದರೆ ಠೇವಣಿ ಇಡಲಾಗುವ ₹ 1,000ವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಆರ್.ಪಿ. ನಾಯ್ಕ ತಿಳಿಸಿದರು.

ಉಪಾಧ್ಯಕ್ಷ ಪ್ರಕಾಶ ಪಿ. ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಧ್ಯಾ ಬಾಡ್ಕರ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT