ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯ ಕಂಗೆಡಿಸಿದ ‘ಕ್ಯಾರ್’ ಚಂಡಮಾರುತ

ಗಂಟೆಗೆ 40ರಿಂದ 80 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿ: ಸಮುದ್ರದಲ್ಲಿ ರಕ್ಕಸ ಗಾತ್ರದ ಅಲೆಗಳು
Last Updated 25 ಅಕ್ಟೋಬರ್ 2019, 13:15 IST
ಅಕ್ಷರ ಗಾತ್ರ

ಕಾರವಾರ: ಅರಬ್ಬಿ ಸಮುದ್ರದಲ್ಲಿ ಉಂಟಾದ ‘ಕ್ಯಾರ್’ ಚಂಡಮಾರುತವು ಜಿಲ್ಲೆಯ ಜನರ ನಿದ್ದೆಗೆಡಿಸಿತು. ಶುಕ್ರವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಆರಂಭವಾದ ರಭಸದ ಗಾಳಿ, ಹಲವು ಅವಾಂತರಗಳನ್ನು ಸೃಷ್ಟಿಸಿತು.

ನಗರದಲ್ಲಿ ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜೋರಾದ ಮಳೆಯಾಗಿತ್ತು. ನಂತರ ರಾತ್ರಿಯವರೆಗೆ ಬಿಡುವು ನೀಡಿ, ತಡರಾತ್ರಿ ಮತ್ತೆ ಶುರುವಾಯಿತು. ಜೊತೆಗೇ ಗಂಟೆಗೆ 40ರಿಂದ 80 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲು ಆರಂಭವಾಯಿತು. ಮನೆಗಳ ಚಾವಣಿಗೆ ಅಳವಡಿಸಲಾಗಿದ್ದ ಕಬ್ಬಿಣದ, ಪ್ಲಾಸ್ಟಿಕ್ ಹಾಗೂ ಸಿಮೆಂಟ್‌ ಶೀಟ್‌ಗಳು ಸದ್ದು ಮಾಡಿದವು. ಸಮೀಪದಲ್ಲಿರುವ ತೆಂಗು ಸೇರಿದಂತೆ ವಿವಿಧ ಜಾತಿಯ ಮರಗಳ ಎಲೆ, ಗರಿಗಳು ಚೆಲ್ಲಾಪಿಲ್ಲಿಯಾದವು. ಪ್ರಕೃತಿಯ ಈ ಅವತಾರ ನೋಡಿದ ಜನರು ಕಂಗೆಟ್ಟರು.

ಹುಚ್ಚೆದ್ದು ಕುಣಿದಸಮುದ್ರ!: ಚಂಡಮಾರುತದ ಪ್ರಭಾವದಿಂದ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಿದವು. ಬೈತಖೋಲ ಬಂದರಿನಲ್ಲಿಧಕ್ಕೆಯ ಮಟ್ಟಕ್ಕೆ ನೀರು ಏರಿಕೆ ಕಂಡು ದೋಣಿ ಮಾಲೀಕರ ಚಿಂತೆಯನ್ನು ದುಪ್ಪಟ್ಟು ಮಾಡಿತ್ತು.

ದಾಂಡೆಭಾಗ, ದೇವಭಾಗದಲ್ಲಿ ಅಪಾಯದ ಅಂಚಿನಲ್ಲಿದ್ದ ದೋಣಿಗಳನ್ನು ಯಂತ್ರಗಳ ಮೂಲಕ ಸುರಕ್ಷಿತವಾಗಿ ದಡಕ್ಕೆ ಎಳೆದು ತರಲಾಯಿತು. ಸದಾಶಿವಗಡದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಕಚೇರಿಯ ಆವರಣದಲ್ಲಿ ಕಾಳಿ ನದಿಯ ನೀರು ಉಕ್ಕಿ ಹರಿಯಿತು. ಅಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಸಮುದ್ರಪಾಲಾಗದಂತೆ ಹಗ್ಗ ಹಾಕಿ ಕಟ್ಟಿ ನಿಲ್ಲಿಸಿದ್ದು ಗಮನ ಸೆಳೆಯಿತು.

ಸಾಮಾನ್ಯವಾಗಿ ಶಾಂತವಾಗಿರುವ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರದ ಭೋರ್ಗರೆತ ದೂರಕ್ಕೂ ಕೇಳಿಸುತ್ತಿತ್ತು. ದಡದ ಮೇಲೆ ಕೂಡ ನೀರು ಹರಿದಿದ್ದ ಕುರುಹುಗಳು ಕಂಡುಬಂದವು. ಕಡಲಿನಲ್ಲಿ ಲಂಗರು ಹಾಕಲಾಗಿದ್ದ ಮೀನುಗಾರಿಕಾ ದೋಣಿಗಳು ಅಲೆಗಳ ಹೊಡೆತಕ್ಕೆ ಸಿಕ್ಕಿ ಮೇಲೆ ಕೆಳಗೆ ಓಲಾಡುತ್ತಿದ್ದವು.

ಮರಗಳು ಬುಡಮೇಲು:ಗಾಳಿಯ ರಭಸಕ್ಕೆ ಸಿಕ್ಕಿದ ಮರಗಳು ಕೆಲವೆಡೆ ಬುಡಮೇಲಾದವು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಎಲ್.ಐ.ಸಿ. ಕಚೇರಿ, ಶೇಜವಾಡ, ಕೆ.ಎಚ್.ಬಿ. ಕಾಲೊನಿ ಮುಂತಾದೆಡೆ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದವು. ನಗರಸಭೆ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಅವುಗಳನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿದರು.

ಆಗಸದಲ್ಲಿ ದಟ್ಟವಾದ ಕಾರ್ಮೋಡ ಕವಿದಿದ್ದ ಕಾರಣ ಬೆಳಿಗ್ಗೆ 10 ಗಂಟೆಯಾದರೂ ಆರು ಗಂಟೆಯಂತೆ ಭಾಸವಾಗುತ್ತಿತ್ತು. ತಣ್ಣನೆಯ ಗಾಳಿ ಬೀಸಿ ಚಳಿಯ ವಾತಾವರಣ ಮೂಡಿತ್ತು. ಇದೇ ರೀತಿ ಮಧ್ಯಾಹ್ನದವರೆಗೂ ಮುಂದುವರಿಯಿತು. ನಡುನಡುವೆ ಜೋರಾಗಿ ಮಳೆ ಸುರಿದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿತು.

ಬಡಾವಣೆಗಳು ಜಲಾವೃತ:‌ನಗರದ ವಿವಿಧ ಬಡಾವಣೆಗಳಲ್ಲಿ ಮಳೆ ನೀರು ನಿಂತು ಜನರು ಸಂಚರಿಸಲು ಪರದಾಡಿದರು. ಕೆ.ಎಚ್.ಬಿ ಹೊಸ ಬಡಾವಣೆಯಲ್ಲಿ ಜೋಪಡಿಯೊಂದರ ಜಗುಲಿಯ ಮಟ್ಟದಲ್ಲಿ, ರಸ್ತೆಯಲ್ಲಿ ಸುಮಾರು ಎರಡು ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಶಿರವಾಡದ ಬಂಗಾರಪ್ಪ ಕಾಲೊನಿ, ಬಾಂಡಿಶಿಟ್ಟಾ, ಕಡವಾಡ, ಶಿವಾಜಿವಾಡಾ, ಮಾಡಿಭಾಗ ಮುಂತಾದ ಭಾಗಗಳಲ್ಲಿ ಕೂಡ ಇದೇ ರೀತಿಯ ಸಮಸ್ಯೆ ಎದುರಾಯಿತು.

ಪೋಷಕರಿಗೆ ಗೊಂದಲ: ಬೆಳಿಗ್ಗೆಯೇ ಭಾರಿ ಗಾಳಿ ಮಳೆಬಂದ ಕಾರಣ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕಿದರು. ಶಾಲೆಗಳಿಗೆ ರಜೆ ಘೋಷಿಸಲಾಗಿದೆಯೇ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸುದ್ದಿಗಾರರಿಗೆ ಹತ್ತಾರು ಕರೆಗಳು ಬಂದವು. ಆದರೆ, ಹಲವು ಶಾಲೆಗಳಲ್ಲಿ ಎಂದಿನಂತೆ ತರಗತಿಗಳು ನಡೆದರೆ, ಮತ್ತೆ ಕೆಲವೆಡೆ ತರಗತಿಗಳನ್ನು ಬೇಗ ಮುಕ್ತಾಯಗೊಳಿಸಿ ಮಕ್ಕಳನ್ನು ಮನೆಗೆ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT