‘ನಿಷ್ಪಕ್ಷಪಾತಿ, ನಿಸ್ವಾರ್ಥಿ, ಶಿಸ್ತುಬದ್ಧ ಅಪ್ಪ’

ಮಂಗಳವಾರ, ಜೂಲೈ 16, 2019
25 °C

‘ನಿಷ್ಪಕ್ಷಪಾತಿ, ನಿಸ್ವಾರ್ಥಿ, ಶಿಸ್ತುಬದ್ಧ ಅಪ್ಪ’

Published:
Updated:
Prajavani

‘ನಮ್ಮ ತಂದೆ ಮತ್ತು ತಾಯಿ ಆ ಕಾಲದಲ್ಲೇ ಪದವೀಧರರು. ಸರ್ಕಾರಿ ಉದ್ಯೋಗದಲ್ಲಿದ್ದವರು. ತಂದೆ ತುಂಬ ನಿಷ್ಪಕ್ಷಪಾತಿ. ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಅಪಾರ ನಂಬಿಕೆಯಿದ್ದವರು. ಓದಿನ ಗೀಳನ್ನು ಅವರು ನನಗೆ ಹಚ್ಚಿದರು...’

ಉತ್ತರಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಮ್ಮ ತಂದೆ ಎಂ.ಬಿ.ಹೆಗ್ಡೆ ಅವರನ್ನು ಈ ರೀತಿ ನೆನಪಿಸಿಕೊಂಡರು.

‘ಅವರು ಮಾಸ್ತರರಾಗಿದ್ದರೂ ತಮ್ಮ ಮಕ್ಕಳ ಉತ್ತರ ಪತ್ರಿಕೆಯನ್ನು ಅವರು ತಿದ್ದುತ್ತಿರಲಿಲ್ಲ. ಶಿಸ್ತುಬದ್ಧ ಜೀವನವಾಗಿತ್ತು. ಅದೆಷ್ಟರ ಮಟ್ಟಿಗೆ ಎಂದರೆ, ಊರಿನಲ್ಲಿ ಎಲ್ಲೋ ಗಲಾಟೆ ಆದಾಗ ನಾವು ಅದರಲ್ಲಿ ಭಾಗಿಯಾಗುವುದಿರಲಿ, ಅಲ್ಲಿ ನಾವು ಹಾಜರಿದ್ದೆವು ಎಂದು ಗೊತ್ತಾದರೂ ನಮಗೆ ಮನೆಗೆ ಪ್ರವೇಶ ಇರುತ್ತಿರಲಿಲ್ಲ.’

‘ಪ್ರಾಮಾಣಿಕನಾಗಿದ್ದ ಕಾರಣ ಸಮಾಜದಲ್ಲಿ ಹೆಸರು ಹಾಳಾಗಬಾರದು ಎಂಬ ಹೆದರಿಕೆಯೂ ಅವರಿಗಿತ್ತು. ನಮಗೆ ಅವರು ವಿದ್ಯೆಯನ್ನೇ ಆಸ್ತಿಯನ್ನಾಗಿ ಮಾಡಿದರು. ಸಂಪತ್ತು ಕ್ರೋಢೀಕರಣ ಮಾಡಲಿಲ್ಲ’

‘ತಂದೆಯವರು ಪತ್ರಿಕೆ ಓದುವ ಹವ್ಯಾಸ ಬೆಳೆಸಿದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಅವರ ಮಾರ್ಗದರ್ಶನವೇ ಕಾರಣ. ಯಾವುದನ್ನೂ ನಿರಾಕರಿಸದೇ ಯಾವುದನ್ನೂ ಹೆಚ್ಚು ಸ್ವೀಕರಿಸದಿರಲು ಕಲಿಸಿದ ಗುಣ ಈ ಉದ್ಯೋಗದಲ್ಲಿ ನನಗೆ ಬಹಳ ಅನುಕೂಲವಾಗಿದೆ. ಅವರು ಒಮ್ಮೆಯೂ ನಮಗೆ ಹೊಡೆದಿಲ್ಲ. ತುಂಬ ಪ್ರತಿಭಾವಂತ ಅಲ್ಲದಿದ್ದರೂ ಸಮಾಜ ಇಷ್ಟಪಡುವ ಗುಣಗಳು ಅವರ ಬಳಿಯಿದ್ದವು’

‘ಅವರು ತೀರಿಹೋಗಿ 18 ವರ್ಷಗಳಾದರೂ ಇಂದಿಗೂ ಸಾತ್ವಿಕ ಭಯವಿದೆ. ಅವರು ತುಂಬ ನಿಸ್ವಾರ್ಥಿಯಾಗಿದ್ದರು. ಅದೇ ಗುಣ ನನಗೂ ಬಂದಿದ್ದು, ಯಾರಾದರೂ ನನ್ನನ್ನು ಸ್ವಾರ್ಥಿ ಎಂದರೆ ಸಹಿಸಲು ಸಾಧ್ಯವೇ ಆಗುವುದಿಲ್ಲ’.

‘2000ದಲ್ಲಿ ನಾನು ಉಪನ್ಯಾಸಕನಾಗಿದ್ದೆ. ಆಗ ತಂದೆಗೆ ಜ್ವರ ಬಂದಿತ್ತು. ನವೆಂಬರ್ 12ರ ದಿನವದು. ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಲಿಲ್ಲ. 64ನೇ ವರ್ಷಕ್ಕೆ ತೀರಿಹೋದರು. ಇದು ನನ್ನ ಜೀವನದಲ್ಲಿ ದೊಡ್ಡ ಆಘಾತ. ತಂದೆಯವರು ತೀರಿಕೊಂಡ ದಿನಕ್ಕೆ ಮಕ್ಕಳೆಲ್ಲರೂ ಮನೆಗೆ ಹೋಗಿ ತಾಯಿಯ ಜೊತೆ ಒಂದು ದಿನ ಕಳೆಯುತ್ತೇವೆ.’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !