ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಬ್ಬಂದಿಯಿಂದ ಪುನಃ ತಪ್ಪಾಗದಿರಲಿ’

ಯಲ್ಲಾಪುರ: ಬಸ್ ನಿಲ್ದಾಣ, ಬೇಡ್ತಿ ಸೇತುವೆ ಉದ್ಘಾಟಿಸಿದ ಸಚಿವ ಲಕ್ಷ್ಮಣ ಸವದಿ
Last Updated 12 ಫೆಬ್ರುವರಿ 2021, 15:38 IST
ಅಕ್ಷರ ಗಾತ್ರ

ಯಲ್ಲಾಪುರ: ‘ಸಾರಿಗೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟಿಸಿದ್ದರ ಬಗ್ಗೆ ನಮಗೆ ಬೇಸರವಿಲ್ಲ. ಆದರೆ, ಯಾರದೋ ಹೊರಗಿನವರ ಪ್ರಚೋದನೆಗೆ ಒಳಗಾಗಿ, ಅನ್ನ ನೀಡುವ ಬಸ್‌ಗಳಿಗೆ ಕಲ್ಲು ತೂರಿ ಹಾನಿ ಮಾಡಿದ್ದು ತೀವ್ರ ಬೇಸರ ತರಿಸಿದೆ. ಇಂತಹ ತಪ್ಪು ಮತ್ತೊಮ್ಮೆ ಸಾರಿಗೆ ಸಿಬ್ಬಂದಿಯಿಂದ ಆಗದಿರಲಿ’ ಎಂದು ಸಾರಿಗೆ ಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ತಾಲ್ಲೂಕಿನ ಶಿರಸಿ ರಸ್ತೆಯಲ್ಲಿ ಬೇಡ್ತಿ ನದಿಗೆ ಅಡ್ಡಲಾಗಿ ನಿರ್ಮಿಸಿದ ನೂತನ ಸೇತುವೆ ಹಾಗೂ ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಕೋವಿಡ್‌ನಿಂದಾಗಿ ₹ 4 ಸಾವಿರ ಕೋಟಿ ನಷ್ಟದಲ್ಲಿವೆ. ಆದಾಯದ ಕೊರತೆ, ಇಂಧನ ದರ ಹೆಚ್ಚಳದಿಂದ ಹಾನಿಯಾಗಿದೆ. ಆದರೂ ಸೇವೆಯ ನೆಲೆಯಲ್ಲಿ ಇಲಾಖೆ ಕಾರ್ಯನಿರ್ವಹಿಸುತ್ತಿದೆ’ ಎಂದರು.

‘ಅಪರಾಧ, ಅಪಘಾತ ಮಾಡದ ಚಾಲಕರಿಗೆ ಪದಕ ನೀಡಿ ಗೌರವಿಸುವ ಮಾದರಿಯಲ್ಲೇ ಇಂಧನ ಉಳಿತಾಯ ಮಾಡುವ ಚಾಲಕರಿಗೂ ಪದಕ ನೀಡಿ ಪ್ರೋತ್ಸಾಹಿಸಲಾಗುತ್ತಿದೆ’ ಎಂದರು. ಇದೇವೇಳೆ, ದಾಂಡೇಲಿಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಸದ್ಯದಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ‘ದುರ್ಬಲ ಬೇಡ್ತಿ ಸೇತುವೆಗೆ ಬದಲಾಗಿ ಸುಸಜ್ಜಿತ ಹೊಸ ಸೇತುವೆ ಹಾಗೂ ಯಲ್ಲಾಪುರದಲ್ಲಿ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸುವ ಕನಸು ನನಸಾಗಿದೆ. ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಡಿಪೊ, ಬಸ್ ನಿಲ್ದಾಣಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಸಾರಿಗೆ ಸಂಸ್ಥೆ ಬೆಳವಣಿಗೆಯಲ್ಲಿ ಜನರ ಪಾತ್ರವೂ ಅಗತ್ಯ’ ಎಂದು ಹೇಳಿದರು.

ಮೀಸಲಾತಿ ಸೂಕ್ಷ್ಮ ವಿಚಾರ:‘ಮೀಸಲಾತಿಯು ಸೂಕ್ಷ್ಮ ವಿಚಾರವಾಗಿದ್ದು, ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

‘ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ನಾನು ಅಲ್ಲಿ ಚುನಾವಣೆಗೆ ಉಸ್ತುವಾರಿಯಷ್ಟೇ. ಉಪ ಚುನಾವಣೆಯಲ್ಲಿ ನಾವು ಜಯ ಸಾಧಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮಹಾರಾಷ್ಟ್ರ ಸರ್ಕಾರವು ಗಡಿ ವಿಚಾರದಲ್ಲಿ ಅಲ್ಲಿನ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಅಲ್ಲಿನ ಸರ್ಕಾರದ್ದು ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಹಲವು ವಿಚಾರಗಳಲ್ಲಿ ಅವರಲ್ಲೇ ಸಮ್ಮತವಿಲ್ಲ’ ಎಂದು ಟೀಕಿಸಿದರು.

ಸಾರಿಗೆ ನೌಕರರ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೆ.ಎಸ್.ಆರ್.ಟಿ.ಸಿ ನೌಕರರ 10 ಬೇಡಿಕೆಗಳಲ್ಲಿ ಎಂಟನ್ನು ಈಡೇರಿಸಿದ್ದೇವೆ. ಉಳಿದ ಬೇಡಿಕೆಗಳ ಬಗ್ಗೆ ನೌಕರರೊಂದಿಗೆ ಸಭೆ ಮಾಡಿ ತೀರ್ಮಾನಿಸಲಾಗುವುದು. ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂಬ ಸಿದ್ದರಾಮಯ್ಯ ಹೇಳಿದ್ದಾರೆ. ಕೊರೊನಾ ಬಂದ ನಂತರ ಹಣಕಾಸಿನ ವ್ಯವಹಾರದಲ್ಲಿ ಏರುಪೇರಾಗಿರುವುದು ನಿಜ. ಆದರೆ, ಅವರು ನಮ್ಮನ್ನು ಟೀಕಿಸುತ್ತಲೇ ಇರುತ್ತಾರೆ. ಅವರಿರೋದೇ ಅದಕ್ಕೆ, ಮತ್ತೇನೂ ಹೊಗಳುತ್ತಾರಾ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT