ಮಂಗಳವಾರ, ಏಪ್ರಿಲ್ 20, 2021
31 °C
ಜೊಯಿಡಾದ ಚನ್ನಬಸವೇಶ್ವರ ರಥೋತ್ಸವ: ಸರಳ ಆಚರಣೆಗೆ ಸಿದ್ಧತೆ

ಉಳವಿಗೆ ಚಕ್ಕಡಿ ಪ್ರಯಾಣ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೊಯಿಡಾ: ತಾಲ್ಲೂಕಿನ ಉಳವಿಯಲ್ಲಿ ಶ್ರೀ ಚನ್ನಬಸವೇಶ್ವರ ಜಾತ್ರೆಗೆ ಪೂರ್ವಭಾವಿಯಾಗಿ ವಿವಿಧ ಚಟುವಟಿಕೆಗಳು ಆರಂಭವಾಗಿವೆ. ವಿವಿಧ ಜಿಲ್ಲೆಗಳಿಂದ ಈಗಾಗಲೇ 700ಕ್ಕೂ ಅಧಿಕ ಚಕ್ಕಡಿ ಗಾಡಿಗಳು ತಲುಪಿವೆ.

ಜಾತ್ರೆಯ ಅಂಗವಾಗಿ ಫೆ.27ರಂದು ಮಹಾ ರಥೋತ್ಸವ ನೆರವೇರಲಿದೆ. ಕೋವಿಡ್ 19 ಕಾರಣದಿಂದ ಈ ವರ್ಷ ಜಾತ್ರಾ ಮಹೋತ್ಸವವನ್ನು ಸರಳವಾಗಿ ಮತ್ತು ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಜಾತ್ರೆಗೆ ಬರುವ ಭಕ್ತರು ದೇವರ ದರ್ಶನ ಪಡೆದು ಕೂಡಲೇ ತಮ್ಮ ಊರುಗಳಿಗೆ ಮರಳುವಂತೆ ತಾಲ್ಲೂಕು ಆಡಳಿತ ಹಾಗೂ ಉಳವಿ ಶ್ರೀ ಚನ್ನಬಸವೇಶ್ವರ ಟ್ರಸ್ಟ್ ಮನವಿ ಮಾಡಿವೆ.

ಜಾತ್ರೆಗೆ ಹಲವು ಶರಣ ಭಕ್ತರು ಹರಕೆ ಹೊತ್ತು ಕಾಲ್ನಡಿಗೆಯಲ್ಲಿ ಬರುತ್ತಾರೆ. ಅದೇರೀತಿ, ಚಕ್ಕಡಿ ಗಾಡಿಗಳಲ್ಲೂ ಬರುವುದು ಈ ಜಾತ್ರೆಯ ಆಕರ್ಷಣೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ದಾರಿಯುದ್ದಕ್ಕೂ ‘ಹರ ಹರ ಚನ್ನಬಸವೇಶ್ವರ’ ಎಂಬ ಘೋಷಣೆಯೊಂದಿಗೆ ಚಕ್ಕಡಿ ಗಾಡಿಗಳ ಸಾಲು ಹೋಗುವುದನ್ನು ನೋಡುವುದೇ ವಿಶಿಷ್ಟ ಅನುಭವ ನೀಡುತ್ತದೆ. ಈ ಬಾರಿ ಕೊರೊನಾದಿಂದಾಗಿ ಚಕ್ಕಡಿ ಗಾಡಿಗಳ ಸಂಖ್ಯೆ ಕಡಿಮೆಯಾಗಿದೆ.

ವರ್ಷದಿಂದ ವರ್ಷಕ್ಕೆ ಚಕ್ಕಡಿ ಗಾಡಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಭಕ್ತರು ದ್ವಿಚಕ್ರ ವಾಹನಗಳಲ್ಲಿ, ಸರ್ಕಾರಿ ಬಸ್‌ಗಳಲ್ಲಿ ಹಾಗೂ ಇನ್ನಿತರ ವಾಹನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಜಾತ್ರೆಗೆ ರಾಜ್ಯದ ಧಾರವಾಡ, ಬೆಳಗಾವಿ, ಬಾಗಲಕೋಟೆ, ದಾವಣಗೆರೆ, ಹಾವೇರಿ, ವಿಜಯಪುರ ಜಿಲ್ಲೆ, ನೆರೆಯ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಿಂದಲೂ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ.

ವಿಶೇಷ ಸೌಭ್ಯಗಳಿಲ್ಲ:

ಪ್ರತಿವರ್ಷ ದೂರದಿಂದ ಬರುವ ಭಕ್ತರಿಗೆ ಊಟ, ವಸತಿ, ಕುಡಿಯುವ ನೀರು ಸೇರಿದಂತೆ ಹಲವು ರೀತಿಯ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಕೋವಿಡ್ ಕಾರಣದಿಂದ ಕುಡಿಯುವ ನೀರಿನ್ನು ಹೊರತಾದ ಮತ್ಯಾವುದೇ ಸೌಲಭ್ಯಗಳಿಲ್ಲ.

‘ದೂರದಿಂದ ಬರುವ ಅಂಗಡಿಗಳಿಗೆ ಅವಕಾಶ ನೀಡುವುದಿಲ್ಲ, ಜಿಲ್ಲಾಡಳಿತದ ಎಲ್ಲ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಮಹಾರಥೋತ್ಸವದ ದಿನ ಜನರು ಸೇರದಂತೆ ಈಗಾಗಲೇ ಸೂಚಿಸಲಾಗಿದೆ. ಜಾತ್ರೆಗೆ ಬರುವ ಭಕ್ತರು ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಪ್ರಮುಖ ಮಾರ್ಗಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಜಾತ್ರೆಗೆ ಬರುವ ಭಕ್ತರು ದೇವರ ದರ್ಶನ ಪಡೆದು ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ’ ಎಂದು ಉಳವಿ ಶ್ರೀ ಚನ್ನಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಗಂಗಾಧರ ಕಿತ್ತೂರ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು